ಷೇರುಪೇಟೆ ಏರಿಳಿತ

0
19

ಹೊಸದಿಲ್ಲಿ: ಷೇರುಪೇಟೆ ವಿಚಾರದಲ್ಲಿ ಕೇಂದ್ರ ಬಜೆಟ್ ಹೆಚ್ಚಿನ ಏರುಪೇರನ್ನೇನೂ ಮಾಡಲಿಲ್ಲ. ತೀವ್ರ ತೇಜಿ ಪ್ರವೃತ್ತಿಯಲ್ಲಿ ಓಡುತ್ತಿದ್ದ ಮುಂಬಯಿ ಷೇರುಪೇಟೆಗೆ ಬಜೆಟ್ ಬಲವನ್ನೂ ಕೊಡಲಿಲ್ಲ. ಬೆಳಗ್ಗೆ ಆರಂಭದಲ್ಲಿ ದಿಢೀರ್‌ನೆ ೧೦೦೦ ಅಂಶ ಕುಸಿದಿತ್ತಾದರೂ ಅರ್ಥ ಸಚಿವರು ಬಜೆಟ್ ಪ್ರತಿ ಓದುತ್ತ ಹೋದಂತೆಲ್ಲ ಪೇಟೆ ಚೇತರಿಸಿಕೊಳ್ಳುತ್ತಾ ಹೋಯಿತು. ಕ್ಯಾಪಿಟಲ್ ಗೇನ್ಸ್ ತೆರಿಗೆ ಮತ್ತು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆ ಹೆಚ್ಚಳ ಮಾಡಿರುವುದು ಪೇಟೆಗೆ ಬಿಸಿ ತಟ್ಟುವಂತೆ ಮಾಡಿತು.
ನಂತರ ಹಂತ ಹಂತವಾಗಿ ಚೇತರಿಸಿಕೊಂಡು ೭೩ ಅಂಶ ಅಲ್ಪ ಇಳಿಕೆಯೊಂದಿಗೆ ಮುಕ್ತಾಯಗೊಂಡಿತು.
ಆರಂಭದಲ್ಲಿ ೮೦,೭೨೪.೩೦ ಅಂಶ ಏರಿತು. ೮೦,೭೬೬.೪೧ ಅಂಶ ಏರಿದ ಬಳಿಕ ದಿಢೀರನೇ ೭೯,೨೨೪.೩೨ಕ್ಕೆ ಕುಸಿಯಿತು. ನಂತರ ಚೇತರಿಸಿಕೊಂಡು ೮೦,೪೬೧.೮೩ರಲ್ಲಿ ದಿನದ ವಹಿವಾಟು ಮುಗಿಸಿ ೭೩.೦೪ ಅಂಶದಷ್ಟು ಅಲ್ಪ ಇಳಿಕೆಯಾಯಿತು. ಎನ್‌ಎಸ್‌ಇ ನಿಫ್ಟಿ ಸೂಚ್ಯಂಕ ೨೪,೫೬೮.೯೦ರಲ್ಲಿ ಆರಂಭಗೊಂಡು ೨೪,೦೭೪.೨೦ ಮತ್ತು ೨೪,೫೮೨.೫೫ರ ನಡುವೆ ಹೊಯ್ದಾಡಿತು. ಅಂತಿಮವಾಗಿ ೨೪,೪೭೯.೦೫ರಲ್ಲಿ ಮುಕ್ತಾಯಗೊಂಡು ೩೦.೨೦ ಅಂಶ ಇಳಿಕೆಯಾಯಿತು.
ಬಿಎಸ್‌ಇ-೩೦ ಸೂಚ್ಯಂಕದಲ್ಲಿ ೧೮ ಕಂಪನಿಗಳ ಷೇರುಗಳು ಕುಸಿದವು. ಇನ್ನು ನಿಫ್ಟಿ-೫೦ ಸೂಚ್ಯಂಕದಲ್ಲಿ ೨೯ ಷೇರುಗಳು ಕುಸಿತ ಕಂಡವು. ಬಜೆಟ್‌ನಲ್ಲಿ ಕಲ್ಯಾಣ ಚಟುವಟಿಕೆಗಳು, ಬಂಡವಾಳ ವೆಚ್ಚ ಹಾಗೂ ವಿತ್ತೀಯ ಶಿಸ್ತುಗಳ ನಡುವೆ ಸಮತೋಲನ ಕಾಯ್ದುಕೊಂಡಿದೆ ಎಂದು ಪೇಟೆಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ವಿತ್ತೀಯ ಕೊರತೆ ತಗ್ಗಿಸುವ ಗುರಿಯನ್ನು ಜಿಡಿಪಿಯ ಶೇ. ೪.೯ಕ್ಕೆ ನಿಗದಿಪಡಿಸಿರುವುದು ವಿತ್ತೀಯ ಶಿಸ್ತನ್ನು ಕಾಪಾಡುವ ನಿಟ್ಟಿನಲ್ಲಿ ಗಮನಾರ್ಹವೆಂದು ಸ್ವಾಗತಿಸಿದ್ದಾರೆ. ಆದರೆ ಕ್ಯಾಪಿಟಲ್ ಗೇನ್ಸ್ ತೆರಿಗೆ ಮತ್ತು ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ ತೆರಿಗೆ ಹೆಚ್ಚಳ ಮಾಡಿರುವುದು ಬಂಡವಾಳ ಪೇಟೆ ಹಾಗೂ ಹಣಕಾಸು ಪೇಟೆಗಳಿಗೆ ಮಾರಕ ಎಂದು ನಿರಾಶೆ ವ್ಯಕ್ತಪಡಿಸಿದ್ದಾರೆ.

Previous articleವಾಣಿಜ್ಯ ವಾಹನಗಳಿಗೆ ಪ್ಯಾನಿಕ್ ಬಟನ್‌ಗೆ ವಿರೋಧ: ಪ್ರತಿಭಟನೆ
Next articleಅಗ್ಗವಾಗಲಿವೆ ಮೊಬೈಲ್‌ಗಳು ಎಲೆಕ್ಟ್ರಾನಿಕ್ಸ್ ಉದ್ಯಮದ ಮೌಲ್ಯವರ್ಧನೆ