ಒಂದು ದೇಶ ಒಂದು ಚುನಾವಣೆ: ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ

0
34

ಇದು ಜಾರಿಯಾದಲ್ಲಿ ಸಾವಿರಾರು ಕೋಟಿ ರೂ. ಹಣ, ಜನರ ಅಮೂಲ್ಯ ಸಮಯ, ಶ್ರಮ ಉಳಿತಾಯ

ಸೇಡಂ (ಕಲಬುರಗಿ ಜಿಲ್ಲೆ): ‘ಒಂದು ದೇಶ ಒಂದು ಚುನಾವಣೆ’ ಖಂಡಿತವಾಗಿಯೂ ಭಾರತದ ಅಭಿವೃದ್ಧಿ ಪಥದ ವೇಗ ಹೆಚ್ಚಿಸಲಿದೆ. ಇದು ಭಾರತದ ಗೇಮ್ ಚೇಂಜರ್ ಆಗಲಿದೆ ಎಂದು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರತಿಪಾದಿಸಿದ್ದಾರೆ.

ಕಲಬುರಗಿ-ಸೇಡಂ ಹೆದ್ದಾರಿಯ ಬೀರನಳ್ಳಿ ಕ್ರಾಸ್ ಬಳಿ ಬುಧವಾರ ಆರಂಭಗೊಂಡ ಭಾರತೀಯ ಸಂಸ್ಕೃತಿ ಉತ್ಸವ-7ನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಒನ್ ನೇಶನ್ ಎಲೆಕ್ಷನ್’ ನಿಜಕ್ಕೂ ಅತ್ಯದ್ಭುತ ಪರಿಕಲ್ಪನೆಯಿಂದ ಕೂಡಿದೆ. ಇದು ಜಾರಿಯಾದಲ್ಲಿ ಸಾವಿರಾರು ಕೋಟಿ ರೂ. ಹಣ, ಜನರ ಅಮೂಲ್ಯ ಸಮಯ, ಶ್ರಮ ಉಳಿತಾಯವಾಗಲಿದೆ. ಇದು ರಾಷ್ಟ್ರದ ಹಿತದೃಷ್ಟಿಯಿಂದ ಕೂಡಿದೆ ಎಂದು ಒಂದು ದೇಶ ಒಂದು ಚುನಾವಣೆ' ಕುರಿತು ಕೇಂದ್ರ ಸರ್ಕಾರ ನೇಮಿಸಿದ್ದ ಎಂಟು ಸದಸ್ಯರ ಉನ್ನತ ಅಧ್ಯಯನ ಸಮಿತಿ ಅಧ್ಯಕ್ಷರೂ ಆಗಿದ್ದ ಕೋವಿಂದ್ ಹೇಳಿದರು. ನಮ್ಮ ಸಮಿತಿಯಲ್ಲಿ ಆರ್ಥಿಕ ತಜ್ಞರೂ ಇದ್ದರು. ಅವರೊಂದಿಗೆ ಏಕಕಾಲಕ್ಕೆ ಚುನಾವಣೆ ನಡೆಸುವುದರ ಸಾಧಕ-ಬಾಧಕಗಳ ಬಗ್ಗೆ ಸುದೀರ್ಘವಾಗಿ, ಅಮೂಲಾಗ್ರವಾಗಿ ಚರ್ಚಿಸಿ, ಎಲ್ಲರ ಅನಿಸಿಕೆ, ಅಭಿಪ್ರಾಯ, ಸಲಹೆ-ಸೂಚನೆಗಳನ್ನು ಪಡೆದುಕೊಳ್ಳಲಾಯಿತು. ಆರಂಭದಲ್ಲಿ ಅನೇಕರು ಇದು ಕೇಳುವುದಕ್ಕಷ್ಟೇ ಚಂದ ಎಂದಿದ್ದರು. ಆದರೆ ಬಹುತೇಕರಿಗೆ ಈಗ ಮನವರಿಕೆಯಾಗಿದೆ. ಲೋಕಸಭೆ, ವಿಧಾನಸಭೆ ಚುನಾವಣೆಗಳನ್ನು ಒಟ್ಟಿಗೆ ನಡೆಸಿ ಆ ಬಳಿಕ ನೂರು ದಿನಗಳೊಳಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವಂತೆ ನಮ್ಮ ವರದಿಯಲ್ಲಿ ಶಿಫಾರಸು ಮಾಡಲಾಗಿದೆ’ ಎಂದರು.
ಪ್ರತ್ಯೇಕವಾಗಿ ಚುನಾವಣೆಗಳು ನಡೆಯುತ್ತಿರುವುದರಿಂದ ಎಷ್ಟೊಂದು ಕಷ್ಟ-ನಷ್ಟಗಳು ಎದುರಾಗುತ್ತಿವೆ ಎಂಬುದರ ಬಗ್ಗೆ 18,526 ಪುಟಗಳ ಸುದೀರ್ಘ ವರದಿ ನೀಡಿದ್ದೇವೆ. ಶಿಕ್ಷಕರು ವರ್ಷವಿಡೀ ಒಂದಿಲ್ಲೊಂದು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲ್ಪಡುವುದರಿಂದ ಶಾಲೆಗೆ ಹೋಗಿ ಪಾಠ ಮಾಡಲಾಗುವುದಿಲ್ಲ. ಪಾಠ ಮಾಡದಿದ್ದರೆ ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೇ ಹೊಡೆತ ಬೀಳುತ್ತದೆ. ನಂತರ ನಾವೇ ನಮ್ಮ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆ ಎಂದು ಗೊಣಗುತ್ತೇವೆ. ಹಾಗಾಗಿ ಏಕಕಾಲಕ್ಕೆ ಚುನಾವಣೆ ನಡೆಸುವುದು ಎಲ್ಲ ದೃಷ್ಟಿಯಿಂದಲೂ ಸಮಂಜಸ ಕ್ರಮವಾಗಿದೆ ಎಂದರು.
ಈ ವಿಚಾರವಾಗಿ ನಾನು ರಾಜಕೀಯವಾಗಿ ಮಾತನಾಡಲು ಬಯಸುವುದಿಲ್ಲ. ರಾಜಕೀಯ ಪಕ್ಷಗಳ ಮುಖಂಡರು ಕೂಡ ಸ್ವಾರ್ಥ ಬಿಟ್ಟು ಮುಕ್ತ ಮನಸ್ಸಿನಿಂದ ಚರ್ಚೆ ಮಾಡಬೇಕು. ಸುಪ್ರೀಂ ಕೋರ್ಟಿನ ನಾಲ್ವರು ನಿವೃತ್ತ ನ್ಯಾಯಾಧೀಶರು ಸೇರಿದಂತೆ ಸಂಬಂಧಪಟ್ಟ ಎಲ್ಲ ಭಾಗಿದಾರರು (ಸ್ಟೇಕ್‌ಹೋಲ್ಡರ್ಸ್) ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಸಕಾರಾತ್ಮಕವಾಗಿಯೇ ಅಭಿಪ್ರಾಯ ನೀಡಿದ್ದಾರೆ ಎಂದು ಕೋವಿಂದ್ ಹೇಳಿದರು.

Previous articleಮರಕ್ಕೆ ಕಟ್ಟಿಹಾಕಿ ಮಹಿಳೆಗೆ ಥಳಿತ: ನಾಲ್ವರ ವಿರುದ್ಧ ಪ್ರಕರಣ
Next articleಮೊಬೈಲ್ ಗೀಳು: ಆತ್ಮಹತ್ಯೆಗೆ ಶರಣಾದ 13ರ ಬಾಲಕ