KSRTC: ಆಗಸ್ಟ್‌ 5ರಂದು ಕೆಎಸ್ಆರ್‌ಟಿಸಿ, ಬಿಎಂಟಿಸಿ ಬಸ್‌ಗಳಿಲ್ಲ?

0
76

ಬೆಂಗಳೂರು: ಕರ್ನಾಟಕದಲ್ಲಿ ಆಗಸ್ಟ್‌ 5ರಂದು ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಕೆಎಸ್ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಕರ್ನಾಟಕದ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. 38 ತಿಂಗಳ ಭತ್ಯೆ ನೀಡಿಲ್ಲ, ವೇತನ ಹೆಚ್ಚಳ ಮಾಡಿಲ್ಲ ಎಂಬುದು ಎರಡು ಪ್ರಮುಖ ಬೇಡಿಕೆಯಾಗಿದೆ.

ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್‌ 5ರ ಬೆಳಗ್ಗೆ 6 ಗಂಟೆಯಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಹೇಳಿದೆ. ಕೆಎಸ್ಆರ್‌ಟಿಸಿ ಸೇರಿದಂತೆ ನಾಲ್ಕು ನಿಗಮಗಳ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದೆ.

ಸರ್ಕಾರ ಜನವರಿಯಲ್ಲಿಯೇ 38 ತಿಂಗಳ ಭತ್ಯೆ ಹೆಚ್ಚಳ ಮಾಡಬೇಕಿತ್ತು. ಆದರೆ ಇದುವರೆಗೂ ಮಾಡಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಆರೋಪಿಸಿದೆ. ಆದ್ದರಿಂದ ಸರ್ಕಾರದ ನಡೆ ಖಂಡಿಸಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆ ನೌಕರರು ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆಯೇ? ಎಂಬುದು ಇನ್ನೂ ಖಚಿತವಾಗಿಲ್ಲ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದು, ರಾಜ್ಯಾದ್ಯಂತ ಬಸ್ ಸಂಚಾರ ವ್ಯತ್ಯಯವಾಗುವ ನಿರೀಕ್ಷೆ ಇದೆ.

ಮುಖ್ಯಮಂತ್ರಿಗಳಿಗೆ ನೋಟಿಸ್: ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಕಾರ್ಮಿಕ ಮುಖಂಡ, ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ನೇತೃತ್ವದಲ್ಲಿ ಮುಷ್ಕರವನ್ನು ನಡೆಸಲಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮುಷ್ಕರದ ನೋಟಿಸ್ ಅನ್ನು ಇ-ಮೇಲ್ ಮೂಲಕ ಕಳಿಸಲಾಗಿದೆ ಎಂದು ಅನಂತ ಸುಬ್ಬರಾವ್ ಹೇಳಿದ್ದಾರೆ.

ಒಟ್ಟು ನಾಲ್ಕು ನಿಗಮದ 1.15 ಲಕ್ಷ ನೌಕರರಿಗೆ38 ತಿಂಗಳ ಭತ್ಯೆ ನೀಡಬೇಕಾಗಿತ್ತು. ಜುಲೈ 7ರಂದು ಸಭೆ ನಡೆಸಿದ್ದ ಸಿದ್ದರಾಮಯ್ಯ ಒಂದು ವಾರದಲ್ಲಿ ವೇತನ ಹೆಚ್ಚಳ, ಭತ್ಯೆ ಪಾವತಿ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಆರೋಪವಾಗಿದೆ.

2024ರ ಡಿಸೆಂಬರ್‌ನಲ್ಲಿಯೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿತ್ತು. ಜನವರಿ 1ರಿಂದಲೇ ಅನ್ವಯವಾಗುವಂತೆ ಬಸ್ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತೇವೆ ಎಂದು ಘೋಷಣೆ ಮಾಡಿತ್ತು.

ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶ ಮಾಡಿದ್ದರು. ಸಾರಿಗೆ ನಿಗಮದ ನೌಕರರ ಸಂಘಟನೆಗಳ ಜೊತೆ ಸಿದ್ದರಾಮಯ್ಯ ಸಭೆ ಬಳಿಕ, ಅವರ ಭರವಸೆಯಂತೆ ಮುಷ್ಕರ ಮುಂದೂಡಲಾಗಿತ್ತು.

ಸಾರಿಗೆ ನೌಕರರಿಗೆ ಜನವರಿ 1,2020ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಲಾಗಿತ್ತು. 2024ರ ಜನವರಿ 1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಯನ್ನು ಆಗ ಸರ್ಕಾರದ ಮುಂದೆ ಇಡಲಾಗಿತ್ತು.

ಹಿಂದೆ ಮುಷ್ಕರದ ಕರೆ ನೀಡಿದಾಗ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, “ಮುಷ್ಕರ ನಡೆಸಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಬಾಕಿ ಉಪಧನ, ಗಳಿಕೆ ನಗದೀಕರಣ ಮೊತ್ತ ಬಿಡುಗಡೆ ಮಾಡಲಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ 5,900 ಕೋಟಿ ಕೋಟಿ ನಷ್ಟ ಉಂಟಾಗಿತ್ತು. ಅದನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದರು.

Previous articleBengaluru Tunnel Road: ಬೆಂಗಳೂರಲ್ಲಿ ಸುರಂಗ ರಸ್ತೆ, ಯೋಜನೆಗೆ ಟೆಂಡರ್ ಆಹ್ವಾನ, ವಿವರ
Next articleರಸ್ತೆ ಗುಂಡಿ ಮುಚ್ಚಿದ ಗ್ರಾಮಸ್ಥರು: ಸರ್ಕಾರದ ಬಳಿ ಒಂದು ಬುಟ್ಟಿ ಮಣ್ಣಿಗೂ ದುಡ್ಡಿಲ್ಲವೇ?

LEAVE A REPLY

Please enter your comment!
Please enter your name here