ಸಂಪಾದಕೀಯ: ನೇಪಾಳಕ್ಕೆ ಈಗ ಬೇಕು ಹೊಸ ಆಡಳಿತ ವ್ಯವಸ್ಥೆ

0
11

ಸಂಯುಕ್ತ ಕರ್ನಾಟಕ ಪತ್ರಿಕೆ ಶುಕ್ರವಾರದ ಸಂಪಾದಕೀಯ

ನೇಪಾಳ ಈಗ ಸುಟ್ಟು ಬೂದಿಯಾಗಿದೆ. ಹಳೆಯ ಎಲ್ಲ ಆಡಳಿತ ವ್ಯವಸ್ಥೆಯನ್ನು ಯುವಕರು ಸುಟ್ಟು ಬೂದಿ ಮಾಡಿದ್ದಾರೆ. ಹೊಸ ವ್ಯವಸ್ಥೆಯನ್ನು ಕಟ್ಟಬೇಕಿದೆ. ಮರಳಿ ರಾಜರ ಆಡಳಿತಕ್ಕೆ ಹೋಗಬೇಕೆ ಅಥವಾ ಪ್ರಜಾಪ್ರಭುತ್ವ ಸ್ಥಾಪಿಸಿಕೊಳ್ಳಬೇಕೆ ಎಂಬು ದ್ವಂದ್ವದಲ್ಲಿ ನೇಪಾಳದ ಜನ ಇದ್ದಾರೆ. ಸೇನೆ ಎಲ್ಲವನ್ನೂ ವಹಿಸಿಕೊಂಡಿದೆ. ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲ ಕರ್ಕಿ ಈಗ ನಾಯಕತ್ವ ವಹಿಸಿಕೊಳ್ಳಬೇಕಿದೆ. ಸೇನೆ ನಾಗರಿಕ ಸರ್ಕಾರ ರಚನೆಗೆ ಸಹಕಾರಿ ಕೆಲಸ ಮಾಡುತ್ತದೋ ಅಥವಾ ತಾನೇ ಅಧಿಕಾರವಹಿಸಿಕೊಳ್ಳುತ್ತದೋ ಎಂಬುದು ತಿಳಿಯದು. ಯುವಕರ ಪಡೆಯಲ್ಲಿ ಬಂಡಾಯ ಪ್ರವೃತ್ತಿ ಕಂಡು ಬರುತ್ತಿದೆಯೇ ಹೊರತು ಹೊಸ ಸರ್ಕಾರ ರಚಿಸುವ ಚಿಂತನೆ ನಡೆದಿಲ್ಲ. ಯುವಕರಲ್ಲೂ ಒಗ್ಗಟ್ಟು ಮೂಡಿಲ್ಲ. 10-12 ಗುಂಪುಗಳಿವೆ. ಹಿಂದಿನ ಎಲ್ಲ ರಾಜಕಾರಣಗಳನ್ನು ದೂರತಳ್ಳಿ ಯುವ ಪಡೆಯನ್ನು ಅಧಿಕಾರಕ್ಕೆ ತರಬೇಕೆಂಬ ಇರಾದೆ ಮಾತ್ರ ಕಂಡು ಬರುತ್ತಿದೆ. ನೇಪಾಳದ ಸಂವಿಧಾನ ರಚನೆಯಾಗಿದ್ದೇ 2015 ರಲ್ಲಿ. ಮಧ್ಯಂತರ ಸರ್ಕಾರದ ಬಗ್ಗೆ ಸಂವಿಧಾನದಲ್ಲಿ ಏನನ್ನೂ ಹೇಳಿಲ್ಲ.

1990ರಲ್ಲೇ ನೇಪಾಳದಲ್ಲಿ ಒಂದು ರೀತಿಯ ತಳಮಳ ಆರಂಭವಾಗಿತ್ತು. ಒಟ್ಟು 19 ನಾಯಕರು ಆಡಳಿತ ನಡೆಸಿದೆ. 2008 ರಲ್ಲಿ ನಯಾ ನೇಪಾಳ ಆಂದೋಲನ ಆರಂಭವಾಯಿತು. ವಿಶ್ವಸಂಸ್ಥೆ ನೇಪಾಳದ ಪರಿಸ್ಥಿತಿ ಬಗ್ಗೆ ಎಚ್ಚರಿಸಿತ್ತು. ಪ್ರಧಾನಿ ಒಲಿ ಚೀನಾ ಪರ ಒಲವು ತೋರಿದ್ದರು. ನೇಪಾಳ ಈಗ ಹೊತ್ತಿ ಉರಿಯುವುದಕ್ಕೆ ಇಲ್ಲಿಯ ನಾಯಕರ ಮಿತಿಮೀರಿದ ಭ್ರಷ್ಟಾಚಾರ ಮತ್ತು ಅದಕ್ಷತೆಯೇ ಕಾರಣ. ಇದರಿಂದ ಯುವಕರು ಇಡೀ ವ್ಯವಸ್ಥೆಯ ವಿರುದ್ಧ ಸೆಟೆದು ನಿಂತು ಕಾನೂನು ಕೈಗೆತ್ತಿಕೊಂಡರು. ಇದೇ ರೀತಿ ಬಂಗ್ಲಾ, ಶ್ರೀಲಂಕಾದಲ್ಲಿ ನಡೆದದ್ದು. ಭಾರತದ ಸುತ್ತ ಇರುವ ಯಾವ ದೇಶಗಳಲ್ಲಿ ಶಾಂತಿ ನೆಲೆಸಿಲ್ಲ. ಇದಕ್ಕೆ ಭೂತಾನ್ ಅಪವಾದ. ಉಳಿದ ಎಲ್ಲ ದೇಶಗಳಲ್ಲಿ ನಿರುದ್ಯೋಗ, ಬೆಲೆಏರಿಕೆ, ಭ್ರಷ್ಟಾಚಾರ ಮಿತಿಮೀರಿದೆ.

ಬಹುತೇಕ ದೇಶಗಳಲ್ಲಿ ಅಲ್ಲಿಯ ನಾಯಕರು ವಿದೇಶಿ ಬ್ಯಾಂಕ್‌ಗಳಲ್ಲಿ ತಮ್ಮ ಹಣವನ್ನಿಟ್ಟು ದೇಶದ್ರೋಹದ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ತಮ್ಮ ದೇಶ ಪ್ರಗತಿ ಕಾಣಬೇಕು ಎಂಬ ಆಸೆ ಲವಲೇಶವೂ ಇರುವುದಿಲ್ಲ. ನೇಪಾಳ ನಿಸರ್ಗದಿಂದ ಸಂಪದ್ಭರಿತವಾಗಿದ್ದರೂ ರಾಜಕೀಯವಾಗಿ ಸ್ವತಂತ್ರವಾಗಿ ಚಿಂತಿಸಿದ ದಿನವೇ ಇಲ್ಲ. ರಾಜನಿದ್ದರೂ ಅರಾಜಕತೆ ಹುಟ್ಟಿನಿಂದಲೇ ಇದೆ. ಈ ದೇಶ ಒಂದು ರೀತಿಯಲ್ಲಿ ಮಾದಕವಸ್ತುಗಳ ಸಾಮ್ರಾಜ್ಯ. ಇಲ್ಲಿಂದಲ್ಲೇ ಎಲ್ಲ ದೇಶಗಳಿಗೆ ಅಕ್ರಮವಾಗಿ ಮಾದಕ ವಸ್ತುಗಳ ಸರಬರಾಜು ನಡೆಯುತ್ತದೆ.

ಹಿಂದೆ ನಮ್ಮ ವಿಮಾನವನ್ನು ನೇಪಾಳದಿಂದ ಅಪಹರಿಸಿ ಆಫ್ಘಾನಿಸ್ತಾನದ ಕಂದಹಾರ್‌ಗೆ ಉಗ್ರವಾದಿಗಳು ಕೊಂಡೊಯ್ದು ಜೈಲಿನಲ್ಲಿದ್ದ ಒತ್ತೆಯಾಳುಗಳನ್ನು ಬಿಡಿಸಿಕೊಂಡು ಹೋದ ಘಟನೆಯನ್ನು ಈಗಲೂ ಮರೆಯುವ ಹಾಗಿಲ್ಲ. ಬಿಹಾರ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ ಗಡಿಭಾಗದಿಂದ ಅಲ್ಲಿಯ ಜನ ಬರುತ್ತಾರೆ. ವೀಸಾ ಬೇಕಿಲ್ಲ. ಹೀಗಾಗಿ ಮುಕ್ತ ಅವಕಾಶ. ಭಾರತದಲ್ಲಿ 20 ಲಕ್ಷಕ್ಕೂ ಹೆಚ್ಚು ನೇಪಾಳಿಯರು ಕೆಲಸ ಮಾಡುತ್ತಾರೆ.

ಬಹುತೇಕ ಸೆಕ್ಯೂರಿಟಿ ಗಾರ್ಡ್‌ಗಳು ನೇಪಾಳಿಯರೇ. ಈ ದೇಶದ ದೊಡ್ಡ ಸಮಸ್ಯೆ ಎಂದರೆ ಅಲ್ಲಿ ಆಡಳಿತ ನಡೆಸುವವರು ಚೀನಾದ ಸ್ನೇಹ ಬೆಳೆಸುತ್ತಾರೆ. ಹೀಗಾಗಿ ಭಾರತವನ್ನು ಅನಗತ್ಯವಾಗಿ ದ್ವೇಷಿಸುತ್ತಾರೆ. ಆದರೆ ಆಹಾರ, ಇಂಧನ ಎಲ್ಲವೂ ಭಾರತದಿಂದ ಹೋಗಬೇಕು. ಈಗಿನ ಪ್ರಧಾನಿ ಒಲಿ ರಾಜೀನಾಮೆ ನೀಡಿದ್ದರೂ ಗಲಭೆ ನಿಂತಿಲ್ಲ. ಯುವಕ ಪಡೆಯಿಂದ ನಾಯಕ ಮೂಡಿ ಬಂದಿಲ್ಲ. ಚೀನಾ ಇಂಥ ಸಂದರ್ಭವನ್ನು ತನ್ನ ಹಿತಕ್ಕೆ ಬಳಸಿಕೊಳ್ಳುವುದು ನಿಶ್ಚಿತ. ಯುವಕರಿಗೆ ಭವಿಷ್ಯ ಕಂಡು ಬರುತ್ತಿಲ್ಲ. ಅದಕ್ಕಾಗಿ ಅವರು ಕೊಲ್ಲಿ ದೇಶಗಳು, ಮಲೇಷ್ಯಾ, ದಕ್ಷಿಣ ಕೊರಿಯಾಗಳಿಗೆ ವಲಸೆ ಹೋಗುತ್ತಿದ್ದಾರೆ.

ದೇಶ ಚಿಕ್ಕದಾದರೂ ಚೊಕ್ಕ ಆಡಳಿತ ಇದ್ದಲ್ಲಿ ಉತ್ತಮ ಜೀವನ ನಡೆಸಬಹುದು. ಆದರೆ ಬೃಹತ್ ದೇಶಗಳು ಹಣದ ಆಮಿಷವೊಡ್ಡಿ ನಾಯಕರನ್ನು ಸೆಳೆದುಕೊಳ್ಳುತ್ತದೆ. ಆಗ ದೇಶ ಸಾಲದಸುಳಿಯಲ್ಲಿ ಸಿಲುಕಿ ಅರಾಜಕತೆಯತ್ತ ಸಾಗುತ್ತದೆ. ಈಗ ನೇಪಾಳ ಆ ಹಂತದಲ್ಲಿದೆ. ಬಂಗ್ಲಾದೇಶ ಇನ್ನೂ ಚೇತರಿಸಿಕೊಂಡಿಲ್ಲ. ಅದರಲ್ಲೂ ಅಮೆರಿಕ ಮತ್ತು ಚೀನಾ ಕೈವಾಡ ಇದೆ ಎಂದು ಹೇಳಲಾಗಿದೆ. ಭಾರತ ತಟಸ್ಥವಾಗಿದ್ದರೂ ನೆರೆ ದೇಶವಾಗಿರುವುದರಿಂದ ಕೆಲವು ಕಷ್ಟನಷ್ಟಗಳಿಗೆ ಒಳಗಾಗುವುದು ಅನಿವಾರ್ಯ.

ಅದರಲ್ಲೂ ಗಡಿ ಭಾಗದಲ್ಲಿ ಎಚ್ಚರವಹಿಸುವುದು ಅಗತ್ಯ. ಹಿಂದೆ ಇದೇ ದೇಶದ ರಾಜರ ಅರಮನೆಯಲ್ಲಿ ಸಾಮೂಹಿಕ ಹತ್ಯೆ ನಡೆದಿದ್ದವು. ಆಗಲೂ ದೇಶದಲ್ಲಿ ಅರಾಜಕತೆ ಮೂಡಿತ್ತು. ನೇಪಾಳ, ಮ್ಯಾನ್ಮಾರ್, ಬಂಗ್ಲಾ, ಆಫ್ಘಾನಿಸ್ತಾನ ಸೇರಿದಂತೆ ಹಲವು ದೇಶಗಳಲ್ಲಿ ಚುನಾಯಿತ ಸರ್ಕಾರ, ಮಿಲಿಟರಿ ಪಡೆ, ಉಗ್ರವಾದಿಗಳ ಹಾವಳಿ ದಿನನಿತ್ಯದ ಕತೆಗಳಾಗಿವೆ. ಈ ದೇಶಗಳಿಗೆ ಒತ್ತಾಸೆಯಾಗಿ ಬೃಹತ್ ದೇಶಗಳು ತಮ್ಮ ಬೇಳೆ ಬೇಯಿಸಿಕೊಳ್ಳುವುದಕ್ಕೆ ಈ ದೇಶಗಳನ್ನು ಬಳಸಿಕೊಳ್ಳುತ್ತದೆಯೇ ಹೊರತು ಅದು ಸ್ವತಂತ್ರವಾಗಿ ಬದುಕಲು ಬಿಡುವುದಿಲ್ಲ. ಪ್ರಜಾಪ್ರಭುತ್ವ ಉಳಿಸಿಕೊಳ್ಳುವುದು ಕಷ್ಟ ಎಂಬುದು ಈ ದೇಶಗಳ ಪರಿಸ್ಥಿತಿ ನೋಡಿದರೆ ತಿಳಿಯುತ್ತದೆ. ಈ ದೇಶಗಳ ಬಡತನವೇ ಬೃಹತ್ ದೇಶಗಳ ಬಂಡವಾಳ. ಈಗ ನೇಪಾಳದ ಜನ ಕವಲುದಾರಿಯಲ್ಲಿದ್ದಾರೆ. ಭಾರತ-ಚೀನಾ ನಡುವೆ ಮೈತ್ರಿ ಬೆಳೆಯುತ್ತಿರುವುದು ಸಹಕಾರಿಯಾಗಬಹುದು. ಆದರೆ ಅಮೆರಿಕದ ಕಡೆ ವಾಲಿದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

Previous articleವಿಷ್ಣುವರ್ಧನ್, ಸರೋಜಾ ದೇವಿಗೆ ಕರ್ನಾಟಕ ರತ್ನ: ಸಚಿವ ಜೋಶಿ ಸ್ವಾಗತ
Next articleಅಂಕಣ ಬರಹ: ಅಕ್ಕ ಕೇಳವ್ವ ಈ ಅಬಲೆಯರ ಕೂಗನ್ನು

LEAVE A REPLY

Please enter your comment!
Please enter your name here