“ನಾನು ಒಳ್ಳೆಯವರಿಗೆ, ಒಳ್ಳೆಯ ಕೆಲಸಕ್ಕೆ ತಲೆಬಾಗುತ್ತೇನೆ ಭ್ರಷ್ಟಾಚಾರಿಗಳಿಗೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗುವವರೆಗೆ ಬಿಡುವುದಿಲ್ಲ” ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಹೇಳಿದರು. ಹೊಸಕೋಟೆ ಟೌನ್ ಸ್ವಾಮಿ ವಿವೇಕಾನಂದ ನಗರದಲ್ಲಿರುವ ಶ್ರೀ ಲಕ್ಷ್ಮೀ ಕಲ್ಯಾಣ ಮಂಟಪದಲ್ಲಿ ಹೊಸಕೋಟೆ ತಾಲ್ಲೂಕಿನ ಬಾಕಿ ಇರುವ ದೂರುಗಳ ವಿಚಾರಣೆ ಮತ್ತು ಪ್ರಕರಣಗಳ ವಿಲೇವಾರಿ ಸಭೆ ಉದ್ಘಾಟಿಸಿ ಮಾತನಾಡಿದರು.
“ನಮ್ಮ ದೇಶದ ಜನತೆಗೆ ಮೊದಲಿದ್ದ ದೇಶ ಭಕ್ತಿ ಈಗ ಇಲ್ಲದಂತಾಗಿದೆ. ಸ್ವಾತಂತ್ರ ಪೂರ್ವದಲ್ಲಿ ಶೇ 15 ಅಕ್ಷರಸ್ಥರಿದ್ದಾಗ ಇದ್ದ ದೇಶಭಕ್ತಿ, ಪ್ರಸ್ತುತ ಶೇ 95 ಅಕ್ಷರಸ್ಥರಿದ್ದು ಕಡಿಮೆಯಾಗಿದೆ. ಕುವೆಂಪು ಅವರು ತಿಳಿಸಿರುವ ಹಾಗೇ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಅದ್ಭುತ ವಾಕ್ಯವನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು” ಎಂದರು.
“ಸಂವಿಧಾನದ ನಾಲ್ಕು ಅಂಗಗಳು ದುರ್ಬಲವಾಗಿವೆ. ಕೇಂದ್ರದಲ್ಲಿ ಲೋಕಪಾಲ್ ಇದೆ, ರಾಜ್ಯದಲ್ಲಿ ಲೋಕಾಯುಕ್ತ ಸಂಸ್ಥೆಗೆ ಭವ್ಯ ಇತಿಹಾಸವಿದೆ. ಅಧಿಕಾರದಲ್ಲಿದ್ದ ಸಚಿವರನ್ನು ಮತ್ತು ಮುಖ್ಯಮಂತ್ರಿಯನ್ನು ಸಹ ಜೈಲಿಗೆ ಕಳುಹಿಸಿರುವ ಉದಾಹರಣೆ ಇದೆ. ಸರ್ಕಾರಿ ಅಧಿಕಾರಿಗಳು ನಿಷ್ಠೆಯಿಂದ ಸಮಾಜದ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸಬೇಕು” ಎಂದು ಕರೆ ನೀಡಿದರು.
“ಲೋಕಾಯುಕ್ತ ಸಂಸ್ಥೆಯಲ್ಲಿ ಸುಮಾರು 25 ಸಾವಿರ ಪ್ರಕರಣಗಳು ಬಾಕಿಯಿದ್ದು, ಅದನ್ನು ವಿಲೇವಾರಿ ಮಾಡಲು ನಾವು ಬೆಳಿಗ್ಗೆಯಿಂದ ರಾತ್ರಿವರೆಗೂ ಕೆಲಸ ಮಾಡುತ್ತಿದ್ದೇವೆ. ನನ್ನ ದೇಹಕ್ಕೆ ವಯಸ್ಸಾಗಿದೆ, ಆದರೆ ನನ್ನ ದೃಢ ಸಂಕಲ್ಪಕ್ಕೆ ವಯಸ್ಸಾಗಿಲ್ಲ. ನಾವು ಲೋಕಾಯುಕ್ತ ಸಂಸ್ಥೆಯ ತಾಯಿ ಸ್ಥಾನದಲ್ಲಿದ್ದು ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯನ್ನು ನೀಡಲು ಸದಾ ಸಿದ್ಧರಿದ್ದೇವೆ” ಎಂದು ಹೇಳಿದರು.
“ಭವಿಷ್ಯದ ಜನಾಂಗಕ್ಕೆ ದಾರಿ ದೀಪದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಯುವಕರು ಮೊಬೈಲ್ ಗೀಳು ಕಡಿಮೆಮಾಡಿ, ದೇಶ ಪ್ರೇಮ ಅಳವಡಿಸಿಕೊಂಡು, ದೇಶದ ಅಭಿವೃದ್ಧಿಗೆ ಎಚ್ಚೆತ್ತು ಕೊಳ್ಳಬೇಕು. ಒಂದು ದೇಶ ಸಮೃದ್ಧಿಯಾಗಿ ಬೆಳೆಯಲು ಉತ್ತಮ ಸಮಾಜದ ತಳಪಾಯ ಸರಿಯಾಗಿಯಿದ್ದರೆ ಮಾತ್ರ ದೇಶ ಸುಗಮವಾಗುತ್ತದೆ. ನಾವು ಅಡ್ಡದಾರಿಯಲ್ಲಿ ಹಣ ಮಾಡುವುದರಿಂದ ಸರಿಯಾದ ನೆಮ್ಮದಿ ಮತ್ತು ನಿದ್ದೆಯಿರುವುದಿಲ್ಲ. ಹಾಗಾಗಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದರಿಂದ ನಾವು ಎಲ್ಲೇಯಿದ್ದರು ನೆಮ್ಮದಿಯ ಜೀವನ ನಡೆಸಬಹುದು” ಎಂದು ತಿಳಿಸಿದರು.
“ಇಂದಿನ ದಿನಗಳಲ್ಲಿ ತಂದೆ ತಾಯಿಯನ್ನು ನೋಡಿಕೊಳ್ಳಲು ಆಗದೆ ಹಲವಾರು ಜನರು ವೃದ್ಧಾಶ್ರಮಗಳಲ್ಲಿ ಬಿಡುತ್ತಿದ್ದಾರೆ. ಇದು ನಿಮಗೂ ವಯಸ್ಸಾದ ಕಾಲದಲ್ಲಿ ನಿಮ್ಮ ಮಕ್ಕಳು ಸಹ ನಿಮ್ಮನ್ನು ವೃದ್ಧಾಶ್ರಮಗಳಗೆ ಬಿಡುವುದು ಖಚಿತ. ಆದ್ದರಿಂದ ಎಲ್ಲರೂ ಬದುಕಿನ ನೀತಿ ಪಾಠವನ್ನು ಕಲಿಯಬೇಕು. ಪಂಚಾಯತ್ ರಾಜ್ ನ ಮುಖ್ಯ ಉದ್ದೇಶ ಗ್ರಾಮ ಸ್ವರಾಜ್ ಅನ್ನು ನಿರ್ಮಿಸುವುದು. ಆದರೆ ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ವಾರ್ಷಿಕ 1 ರಿಂದ 1.15 ಕೋಟಿ ಸರ್ಕಾರದಿಂದ ಸಿಗುತ್ತದೆ. ಅಲ್ಲಿನ ಗ್ರಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರು, ಸದಸ್ಯರು ಬದಲು ಗಂಡ ಅಧಿಕಾರ ಮಾಡುತ್ತಾರೆ” ಎಂದರು.
“ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮಹಿಳೆಯಾಗಿದ್ದು, ಪತ್ನಿಯ ಬದಲು ಗಂಡ ಅಧಿಕಾರ ಮಾಡುತ್ತಿದ್ದಾನೆ. ಇಂತಹವರ ಜೊತೆಗೆ ಪಿಡಿಒಗಳು ಸೇರಿಕೊಂಡು ಬೋರವೆಲ್ ರಿಪೇರಿ, ನರೇಗಾ ಯೋಜನೆ, ರಸ್ತೆ ದುರಸ್ತಿ, ಬೀದಿ ದೀಪ ಹೀಗೆ ಇತ್ಯಾದಿ ಯೋಜನೆ ಮತ್ತು ಕಾಮಗಾರಿ ಎಂದು ಅಕ್ರಮ ಬಿಲ್ಲುಗಳನ್ನು ಮಾಡಿಕೊಂಡು ಲಕ್ಷಾಂತರ ಹಣವನ್ನು ದೋಚುತ್ತಿದ್ದಾರೆ. ಜಿಲ್ಲೆಯ ಪಂಚಾಯಿತಿಗಳಲ್ಲಿ ಗಂಡ ಅಧಿಕಾರ ಚಲಾಯಿಸುತ್ತಿರುವುದು ಕಂಡಲ್ಲಿ ಕಠಿಣ ಕ್ರಮ ಕೈಗೊಳ್ಳಿ” ಎಂದು ಸಿಇಒಗಳಿಗೆ ಸೂಚಿಸಿದರು.
“ಗ್ರಾಮ ಪಂಚಾಯಿತಿಗಳಲ್ಲಿ ಯಾವುದೇ ಕೆಲಸಕ್ಕೆ ಕೊಟೇಶನ್ ಕರೆದರೆ ಮೂರು ಕೊಟೇಶನ್ ನಲ್ಲಿ ಯಾವುದಕ್ಕೆ ಗ್ರಾಂಟ್ ಆಗಬೇಕು ಅದಕ್ಕೆ ಸಹಿ ಸಮೇತ ಇರುತ್ತದೆ, ಬೇರೆದಕ್ಕೆ ಸಹಿ ಇರುವುದಿಲ್ಲ . ಸೆಕ್ಷನ್ 13 ರಲ್ಲಿ ಭ್ರಷ್ಟ ಅಧಿಕಾರಿಗಳ ಮೇಲೆ ನಾವೇ ಸ್ವಯಂ ಪ್ರೇರಿತವಾಗಿ ಪ್ರಕರಣವನ್ನು ದಾಖಲು ಮಾಡಿಕೊಳ್ಳಬಹುದು. ಇದರಿಂದ ಕನಿಷ್ಠ 3 ವರ್ಷ ಶಿಕ್ಷೆ ಮತ್ತು 5 ಸಾವಿರ ದಂಡವನ್ನು ವಿಧಿಸಲಾಗುವುದು. ಸುಳ್ಳು ಪ್ರಕರಣ ದಾಖಲು ಮಾಡುವುದು ಮತ್ತು ಕೆಲಸ ಮಾಡಲು ಅರ್ಹತೆ ಹೊಂದಿಲ್ಲ ಎಂದು ಕೇಸ್ ದಾಖಲಿಸಬಹುದು. ಆದ್ದರಿಂದ ಅಧಿಕಾರಿಗಳು ನಿಷ್ಠೆಯಿಂದ ಕೆಲಸ ಮಾಡಿದರೆ ಸಮಾಜಕ್ಕೆ ಮತ್ತು ನಿಮಗೆ ಒಳ್ಳೆದು” ಎಂದರು.