ಕೋಲಾರದಲ್ಲಿ ಸರ್ಕಾರಿ ಕಾಮಗಾರಿಯೊಂದರ ಚಿತ್ರಣ ಎರಡು ತಿಂಗಳಿನಲ್ಲಿಯೇ ಹೊರ ಬಂದಿದೆ. ತಾಲೂಕಿನ ಹುತ್ತೂರು ಹೋಬಳಿ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದ ನೆರ್ನಹಳ್ಳಿ ಗ್ರಾಮದಿಂದ ವಿಟಪನಳ್ಳಿಗೆ ಹೋಗುವ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ಬಿಜೆಪಿ ವಕ್ತಾರ ಕೆಂಬೋಡಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಸ್ಥಳೀಯ ಶಾಸಕರ ಅನುದಾನದಲ್ಲಿ ಬಿಡುಗಡೆಯಾಗಿರುವ 50-54ಹೆಡ್‌ನಲ್ಲಿ ಕೈಗೊಂಡಿರುವ ರಸ್ತೆ ಕಾಮಗಾರಿ ಕಳಪೆಯಾಗಿದ್ದು ಎರಡೇ ತಿಂಗಳಲ್ಲಿ ರಸ್ತೆ ಕಿತ್ತು ಹೋಗಿದೆ. ಇದರ ಚಿತ್ರಗಳನ್ನು ಎಲ್ಲಾ ಕಡೆ ಶೇರ್ ಮಾಡಲಾಗುತ್ತಿದೆ.
ಇದು 50% ಕಮಿಷನ್ ರಸ್ತೆಯಾಗಿದ್ದು ಸಂಪೂರ್ಣ ಹಾಳಾಗಿದೆ. ಜಿಲ್ಲಾಧಿಕಾರಿಗಳು ರಸ್ತೆ ಪರಿಶೀಲನೆ ಮಾಡಿಸಿ ಸಂಬಂಧಪಟ್ಟ ಅಧಿಕಾರಿ ಹಾಗೂ ಕಾಮಗಾರಿ ನಿರ್ವಹಿಸಿದ ಕಂಟ್ರಾಕ್ಟರ್ ವಿರುದ್ಧ ಕ್ರಮ ಕೈಗೊಂಡು ಈ ಕೂಡಲೇ ರಸ್ತೆಯನ್ನು ಮರು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.