ಧರ್ಮಸ್ಥಳ ಕೇಸ್: ಕುಂಟುತ್ತಾ ಸಾಗಿದೆ ಎಸ್‌ಐಟಿ ವಿಚಾರಣೆ!

0
41

ಧರ್ಮಸ್ಥಳ ಗ್ರಾಮದ ಸುತ್ತಮುತ್ತ ನೂರಾರು ಶವಗಳನ್ನು ಹೂತು ಹಾಕಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದ ತನಿಖೆ ಗಂಭೀರತೆ ಕಳೆದುಕೊಳ್ಳುತ್ತಿದೆಯೇ? ಎಂಬ ಸಂಶಯ ಮೂಡುವ ವಾತಾವರಣ ನಿರ್ಮಾಣವಾಗಿದೆ. ಸುದೀರ್ಘ ಅವಧಿಯಿಂದ ತನಿಖೆ ನಡೆಯುತ್ತಿದ್ದರೂ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದಿಲ್ಲ.

ಸಾಕ್ಷ್ಯಾಧಾರಗಳಿದ್ದರೂ ಸಂಬಂಧಿತರ ಬಂಧನವಾಗುತ್ತಿಲ್ಲ. ದಿನನಿತ್ಯ ವಿಚಾರಣೆ ನಡೆಯುತ್ತಿದ್ದರೂ ತನಿಖೆಗೆ ಬರುತ್ತಿರುವವರು ತನಿಖೆ ಬಳಿಕ ನಗುಮುಖದಿಂದಲೇ ಮಾಧ್ಯಮದವರ ಮುಂದೆ ಹೇಳಿಕೆ ನೀಡಿ ಹೋಗುತ್ತಿದ್ದಾರೆ!

ದಿನಪೂರ್ತಿ ವಿಚಾರಣೆ ಎದುರಿಸಿದ್ದ ಸೌಜನ್ಯ ಮಾವ ವಿಠಲ ಗೌಡ ಎಸ್‌ಐಟಿ ತನಿಖೆ ಸಮಯ, ಬಂಗ್ಲೆಗುಡ್ಡೆ ಕಾಡಿನಲ್ಲಿ ಹೆಣಗಳ ರಾಶಿಯೇ ಸಿಕ್ಕಿದೆ, ಮಗುವಿನ ಶವದ ಮೂಳೆಗಳೂ ಸಿಕ್ಕಿವೆ ಎಂದು ಯೂಟ್ಯೂಬ್‌ನಲ್ಲಿ ಹೇಳಿರುವುದು ಸಹ ಭಾರೀ ಗೊಂದಲಕ್ಕೆ ಕಾರಣವಾಗಿದೆ. ಎಸ್‌ಐಟಿ ಮುಖ್ಯಸ್ಥರಾಗಿರುವ ಪ್ರಣವ್ ಮೊಹಂತಿ ಆಗೊಮ್ಮೆ ಈಗೊಮ್ಮೆ ಬೆಳ್ತಂಗಡಿಗೆ ಬಂದು ಹೋಗುತ್ತಿದ್ದಾರೆ.

ಆಗಸ್ಟ್ 15ರಿಂದ 30ರ ತನಕ ರಜೆಯಲ್ಲಿದ್ದ ತನಿಖಾ ತಂಡದ ಅನುಚೇತ್ ಬೆಳ್ತಂಗಡಿಗೆ ಬಂದಿಲ್ಲ. ತನಿಖಾಧಿಕಾರಿ ಜಿತೇಂದ್ರ ದಯಾಮ ಚಿನ್ನಯ್ಯನನ್ನು ನ್ಯಾಯಾಲಯಕ್ಕೆ ಒಪ್ಪಿಸಿದ ಬಳಿಕ ಹೆಚ್ಚೇನೂ ಸಕ್ರಿಯವಾಗಿಲ್ಲ. ಎಸ್‌ಐಟಿ ಎಸ್ಪಿ ಸಿ.ಎ.ಸೈಮನ್ ಮತ್ತು ಮಂಜುನಾಥ್ ನೇತೃತ್ವದಲ್ಲಿ ದಿನನಿತ್ಯ ತನಿಖಾ ಪ್ರಕ್ರಿಯೆ ನಡೆಯುತ್ತಿದೆ.

ತಿಮರೋಡಿ ದೂರು ದಾಖಲು: ಧರ್ಮಸ್ಥಳ ಗ್ರಾಮದ ವಿವಿಧ ವಸತಿ ಗೃಹಗಳಲ್ಲಿ 2006 ರಿಂದ 2010ರ ಅವಧಿಯಲ್ಲಿ ಸಂಭವಿಸಿದ ನಾಲ್ಕು ಅಸಹಜ ಸಾವು ಪ್ರಕರಣಗಳ ತನಿಖೆ ನಡೆಸುವಂತೆ ಒತ್ತಾಯಿಸಿ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಎಸ್‌ಐಟಿಗೆ ಗುರುವಾರ ರಾತ್ರಿ ದೂರು ನೀಡಿದ್ದಾರೆ.

ಇವು ಸಂಭಾವ್ಯ ಕೊಲೆ ಪ್ರಕರಣಗಳಾಗಿರುವ ಸಾಧ್ಯತೆ ಇದೆ ಎನ್ನುವುದು ಇವರ ದೂರಿನ ಒಟ್ಟಂಶ. ಈ ದೂರಿಗೆ ಪೂರಕವಾಗಿ ಮಾಹಿತಿ ಹಕ್ಕಿನಲ್ಲಿ ಪಡೆದಿದ್ದ ದಾಖಲೆಗಳನ್ನು ಇವರು ನೀಡಿದ್ದಾರೆ. ಮೂರು ವಸತಿ ಗೃಹಗಳಲ್ಲಿನಡೆದ 4 ಅಸಹಜ ಸಾವುಗಳ ಬಗ್ಗೆ ದೂರಿನಲ್ಲಿ ಪ್ರಸ್ತಾಪಿಸಲಾಗಿದೆ.

ಇವುಗಳನ್ನು ಗುರುತು ಪತ್ತೆಯಾಗದ ಶವಗಳೆಂದು ಘೋಷಿಸಿ ಗ್ರಾಮ ಪಂಚಾಯಿತಿ ಮೂಲಕ ತರಾತುರಿಯಲ್ಲಿ ದಫನ್ ಮಾಡಲಾಗಿದೆ. ಕೊಲೆ ಅಥವಾ ಆತ್ಮಹತ್ಯೆಯ ಸಂಶಯವಿದ್ದರೂ ಈ ಬಗ್ಗೆ ಎಫ್.ಐ.ಆರ್ ದಾಖಲಿಸದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

Previous articleಜಿಎಸ್‌ಟಿ ಸರಳೀಕರಣ ಹೊಡೆತ: ನೋಟ್‌ಬುಕ್ ಬೆಲೆ ಹೆಚ್ಚಳ?
Next articleಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಅಂತಿಮ ಘಟ್ಟಕ್ಕೆ

LEAVE A REPLY

Please enter your comment!
Please enter your name here