ಬೆಂಗಳೂರು: ಇತಿಹಾಸ ಪಾಠಗಳು ಕೇವಲ ಪುಸ್ತಕದ ಪುಟಗಳಲ್ಲಿ ಸೀಮಿತವಾಗಬಾರದು, ಅದು ಮಕ್ಕಳ ಜೀವನದ ಅನುಭವವಾಗಬೇಕು ಎಂಬ ಆಲೋಚನೆಯೊಂದಿಗೆ ಬೆಂಗಳೂರಿನಲ್ಲಿ ಹೊಸ ಪ್ರಯೋಗಾತ್ಮಕ ಶಿಬಿರ ಆರಂಭವಾಗುತ್ತಿದೆ. “ಪರಮ್ ಹಿಸ್ಟರಿ ಸೆಂಟರ್” ಆಯೋಜಿಸಿರುವ “ಹಿಸ್ಟರಿ ಮೇಕರ್ಸ್” ಎಂಬ ವಿಶಿಷ್ಟ ರಂಗಭೂಮಿ ಕಾರ್ಯಾಗಾರವು 8 ರಿಂದ 16 ವರ್ಷದ ಮಕ್ಕಳಿಗೆ ಉದ್ದೇಶಿತವಾಗಿದೆ.
ಈ ಕಾರ್ಯಾಗಾರದಲ್ಲಿ ಮಕ್ಕಳು ರಂಗಭೂಮಿಯ ಮೂಲಕ ಭಾರತದ ಭವ್ಯ ಇತಿಹಾಸವನ್ನು ಅನುಭವಿಸುವುದರೊಂದಿಗೆ ತಮ್ಮ ವ್ಯಕ್ತಿತ್ವ, ಮಾತನಾಡುವ ಕೌಶಲ, ಕಥನ ಶಕ್ತಿ, ವೇದಿಕೆ ವಿಶ್ವಾಸ, ಮತ್ತು ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಲಿದ್ದಾರೆ.
ಶಿಬಿರದ ವೈಶಿಷ್ಟ್ಯಗಳು
8 ವಾರಾಂತ್ಯಗಳ ಕಲಿಕೆ: ನವೆಂಬರ್ 1 ರಿಂದ ಡಿಸೆಂಬರ್ 21 ರವರೆಗೆ ಪ್ರತೀ ಶನಿವಾರ (ಸಂಜೆ 5:30–7:00) ಹಾಗೂ ಭಾನುವಾರ (ಬೆಳಗ್ಗೆ 10:30–12:00) ವೇಳೆಯಲ್ಲಿ ತರಬೇತಿ ನಡೆಯಲಿದೆ.
ಸ್ಥಳ: ಬೆಂಗಳೂರಿನ ಜಯನಗರ 7ನೇ ಬ್ಲಾಕ್, 32ನೇ ಕ್ರಾಸ್‌ನಲ್ಲಿರುವ ಮೇಕರ್ಸ್ ಅಡ್ಡಾ.
ವಯಸ್ಸು: 8 ರಿಂದ 16 ವರ್ಷದ ಮಕ್ಕಳು.
ನೋಂದಣಿ ಮಾಹಿತಿ: ಸಂಪರ್ಕ — 90350 34728 / ಜಾಲತಾಣದ ಮೂಲಕವು ನೋಂದಣಿ ಮಾಡಬಹುದಾಗಿದೆ events@paramexp.org
ರಂಗಭೂಮಿಯ ಮೂಲಕ ಇತಿಹಾಸದ ಅರಿವು: ಶಿಬಿರದಲ್ಲಿ ಮಕ್ಕಳು ಭಗತ್ ಸಿಂಗ್, ಸಾವರ್ಕರ್, ಶಿವಾಜಿ ಮಹಾರಾಜ್ ಮುಂತಾದ ಇತಿಹಾಸ ಪ್ರಸಿದ್ಧ ನಾಯಕರ ಪಾತ್ರಗಳನ್ನು ಅಭಿನಯದ ಮೂಲಕ ಅನಾವರಣಗೊಳಿಸಲಿದ್ದಾರೆ. “ಲಾಲ್ ಬಾಲ್ ಪಾಲ್ ಇಂದಿನ ಯುಗದಲ್ಲಿ ಇದ್ದರೆ ಏನು ಮಾಡುತ್ತಿದ್ದರು?” ಎಂಬ ಪ್ರಶ್ನೆಗಳಿಗೆ ಮಕ್ಕಳು ಪಾತ್ರಾಭಿನಯದ ರೂಪದಲ್ಲಿ ಸೃಜನಾತ್ಮಕ ಉತ್ತರ ನೀಡಲಿದ್ದಾರೆ.
ಕೈಯಾರೆ ಕಲಿಕೆಯ ಅನುಭವ: ಮಕ್ಕಳು ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, ರಂಗಪರಿಕರಗಳಾದ ಈಟಿ, ಕತ್ತಿ, ಟೋಪಿ ಇತ್ಯಾದಿ ಸ್ವತಃ ತಯಾರಿಸುತ್ತಾರೆ. ಇದರಿಂದ ಅವರು ಪಾತ್ರದ ಒಳಭಾಗದ ಭಾವನೆಗೆ ಹೆಚ್ಚು ಹತ್ತಿರವಾಗುತ್ತಾರೆ.
ಎಂಟನೇ ವಾರಾಂತ್ಯದಲ್ಲಿ ನಡೆಯುವ ಅಂತಿಮ ಪ್ರದರ್ಶನ ಕಾರ್ಯಾಗಾರದ ಪ್ರಮುಖ ಹಂತವಾಗಿದ್ದು, ಮಕ್ಕಳು ತಮ್ಮದೇ ಸ್ಕ್ರಿಪ್ಟ್ ಮತ್ತು ವೇಷಭೂಷಣದೊಂದಿಗೆ ಐತಿಹಾಸಿಕ ಕಿರುನಾಟಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.
“ಹಿಸ್ಟರಿ ಮೇಕರ್ಸ್” ಶಿಬಿರವು ಪಠ್ಯಪುಸ್ತಕದ ಇತಿಹಾಸವನ್ನು ಜೀವಂತ ಅನುಭವವಾಗಿ ಪರಿವರ್ತಿಸಿ, ಮಕ್ಕಳ ವ್ಯಕ್ತಿತ್ವವನ್ನು ಹೊಸ ರೂಪದಲ್ಲಿ ಗಟ್ಟಿಗೊಳಿಸಲು ಉದ್ದೇಶಿಸಿದೆ.


























