ಬೆಂಗಳೂರಿನ ಆಸ್ತಿ ಮಾಲೀಕರೇ, ಇದು ನಿಮಗೆ ಎಚ್ಚರಿಕೆಯ ಕರೆ. ನೀವು ಆಸ್ತಿ ತೆರಿಗೆ ಪಾವತಿಸುವುದನ್ನು ವಿಳಂಬ ಮಾಡುತ್ತಿದ್ದರೆ, ಶೀಘ್ರದಲ್ಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA)ದ ವಿಶೇಷ ವಸೂಲಾತಿ ತಂಡ ನಿಮ್ಮ ಮನೆ ಬಾಗಿಲು ತಟ್ಟಲಿದೆ. ಬರೋಬ್ಬರಿ 694 ಕೋಟಿ ರೂಪಾಯಿ ತೆರಿಗೆ ಬಾಕಿ ವಸೂಲಿ ಮಾಡಲು ಪಾಲಿಕೆ ‘ಟ್ಯಾಕ್ಸ್ ಡ್ರೈವ್’ ಎಂಬ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಸುಸ್ತಿದಾರರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರೇ ಈ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ನವೆಂಬರ್ ತಿಂಗಳಿನಿಂದ ಈ ವಿಶೇಷ ಅಭಿಯಾನ ಆರಂಭವಾಗಲಿದ್ದು, ಎರಡು ಪ್ರಮುಖ ವರ್ಗಗಳನ್ನು ಗುರಿಯಾಗಿಸಲಾಗಿದೆ.
- ಹಲವು ವರ್ಷಗಳಿಂದ ತೆರಿಗೆ ಪಾವತಿಸದ ಸುಸ್ತಿದಾರರು.
- ಆಸ್ತಿಯ ವಿಸ್ತೀರ್ಣವನ್ನು ಕಡಿಮೆ ಘೋಷಿಸಿ, ಕಡಿಮೆ ತೆರಿಗೆ ಪಾವತಿಸುತ್ತಿರುವ ಮಾಲೀಕರು.
694 ಕೋಟಿ ರೂ.ಬಾಕಿ: ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 4.57 ಲಕ್ಷಕ್ಕೂ ಅಧಿಕ ಆಸ್ತಿಗಳಿದ್ದು, ಈ ಆರ್ಥಿಕ ವರ್ಷದಲ್ಲಿ 1,242 ಕೋಟಿ ರೂಪಾಯಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಆದರೆ, ಇದುವರೆಗೆ ಕೇವಲ 548 ಕೋಟಿ ರೂ. ಮಾತ್ರ ಸಂಗ್ರಹವಾಗಿದ್ದು, ಇನ್ನೂ 694 ಕೋಟಿ ರೂ. ಬಾಕಿ ಉಳಿದಿದೆ. ಈ ಬೃಹತ್ ಮೊತ್ತವನ್ನು ವಸೂಲಿ ಮಾಡುವುದು ಪಾಲಿಕೆಗೆ ಅನಿವಾರ್ಯವಾಗಿದೆ.
ಹೇಗಿರಲಿದೆ ಪಾಲಿಕೆಯ ‘ಟ್ಯಾಕ್ಸ್ ಡ್ರೈವ್’?: ಈ ಅಭಿಯಾನಕ್ಕಾಗಿ ಕಂದಾಯ ಇಲಾಖೆಯ ಸಿಬ್ಬಂದಿಯೊಂದಿಗೆ ಇತರ ವಿಭಾಗಗಳ ಸಿಬ್ಬಂದಿಯನ್ನೂ ಸೇರಿಸಿ ‘ವಿಶೇಷ ವಸೂಲಾತಿ ತಂಡ’ಗಳನ್ನು ರಚಿಸಲಾಗಿದೆ. ಈ ತಂಡಗಳು ಪ್ರತಿ ಪ್ರದೇಶಕ್ಕೂ ಭೇಟಿ ನೀಡಿ ಕಾರ್ಯಾಚರಣೆ ನಡೆಸಲಿವೆ.
ನೋಟಿಸ್ ಜಾರಿ: ಈಗಾಗಲೇ 78,565 ಆಸ್ತಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವುದನ್ನು ಗುರುತಿಸಲಾಗಿದ್ದು, ಅವರಿಗೆ ನೋಟಿಸ್ ನೀಡುವ ಪ್ರಕ್ರಿಯೆ ಆರಂಭವಾಗಿದೆ.
ಮರು ಸಮೀಕ್ಷೆ: ಕಡಿಮೆ ವಿಸ್ತೀರ್ಣ ಘೋಷಿಸಿರುವ 1,697 ಆಸ್ತಿಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಮರು ಸಮೀಕ್ಷೆ ಮಾಡಿ, ವ್ಯತ್ಯಾಸದ ಮೊತ್ತವನ್ನು ದಂಡ ಸಹಿತ ವಸೂಲಿ ಮಾಡಲಾಗುವುದು.
ಬೀಗಮುದ್ರೆ ಎಚ್ಚರಿಕೆ: ನೋಟಿಸ್ ನೀಡಿದರೂ ತೆರಿಗೆ ಪಾವತಿಸದ, ಅದರಲ್ಲೂ ವಿಶೇಷವಾಗಿ ವಾಣಿಜ್ಯ ಆಸ್ತಿಗಳಿಗೆ (Non-Residential) ಬೀಗಮುದ್ರೆ (ಸೀಲ್) ಹಾಕಲು ಹಿಂಜರಿಯುವುದಿಲ್ಲ ಎಂದು ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೊಸ ಆಸ್ತಿಗಳ ಸೇರ್ಪಡೆ: ತೆರಿಗೆ ಜಾಲದಿಂದಲೇ ಹೊರಗುಳಿದಿರುವ ಹೊಸ ಆಸ್ತಿಗಳನ್ನು ಪತ್ತೆಹಚ್ಚಿ, ಅವುಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗುವುದು.
ಈ ‘ಟ್ಯಾಕ್ಸ್ ಡ್ರೈವ್’ ಕೇವಲ ದಂಡನಾತ್ಮಕ ಕ್ರಮವಲ್ಲ, ಬದಲಿಗೆ ನಗರದ ಅಭಿವೃದ್ಧಿಗೆ ನಾಗರಿಕರನ್ನು ಪಾಲ್ಗೊಳ್ಳುವಂತೆ ಮಾಡುವ ಪ್ರಯತ್ನವಾಗಿದೆ. ಆದ್ದರಿಂದ, ಆಸ್ತಿ ಮಾಲೀಕರು ಸ್ವಯಂಪ್ರೇರಿತರಾಗಿ ತಮ್ಮ ಬಾಕಿ ತೆರಿಗೆಯನ್ನು ಪಾವತಿಸಿ, ಕಠಿಣ ಕ್ರಮ ಮತ್ತು ದಂಡದಿಂದ ಪಾರಾಗುವಂತೆ ಪಾಲಿಕೆ ಮನವಿ ಮಾಡಿದೆ.

























