ಬೆಂಗಳೂರು: ಮಂಗಳವಾರ ಈ ಪ್ರದೇಶಗಳಲ್ಲಿ ವಿದ್ಯುತ್ ಇರಲ್ಲ, ಆನ್‌ಲೈನ್ ಸೇವೆಗಳೂ ಬಂದ್!

0
16

ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಕೈಗೊಳ್ಳಲಿರುವ ತುರ್ತು ನಿರ್ವಹಣಾ ಕಾಮಗಾರಿಯ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಅಕ್ಟೋಬರ್ 28, ಮಂಗಳವಾರದಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಇದಲ್ಲದೆ, ರಾಜ್ಯಾದ್ಯಂತ ಎಲ್ಲಾ ಐದು ವಿದ್ಯುತ್ ಸರಬರಾಜು ಕಂಪನಿಗಳ (ಎಸ್ಕಾಂ) ಆನ್‌ಲೈನ್ ಸೇವೆಗಳಲ್ಲೂ ಸಹ ನಿರ್ವಹಣಾ ಕಾರ್ಯದಿಂದಾಗಿ ಅಡಚಣೆ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಪವರ್ ಕಟ್?: ಬೆಸ್ಕಾಂ ನೀಡಿರುವ ಮಾಹಿತಿಯ ಪ್ರಕಾರ, 66/11ಕೆವಿ ಪುಟ್ಟೇನಹಳ್ಳಿ ಉಪಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ, ಅದರ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಮಂಗಳವಾರ, ಅಕ್ಟೋಬರ್ 28 ರಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ಈ ಸಮಯದಲ್ಲಿ ಸಾರ್ವಜನಿಕರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಕೋರಲಾಗಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರಮುಖ ಪ್ರದೇಶಗಳು: ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್ ಫೋರ್ಸ್ ಪ್ರದೇಶ, ಮಾರಸಂದ್ರ, ಶ್ರೀರಾಮನಹಳ್ಳಿ, ನೆಲಕುಂಟೆ, ಹನಿಯೂರು, ಚೆಲ್ಲಹಳ್ಳಿ, ರಾಮ್ಕಿ ಉತ್ತರ-1, ಮಾರುತಿ ನಗರ, ಪ್ರೆಸ್ಟೀಜ್ ನಗರ, ಕೋಗಿಲು, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್ಕ್ಲೇವ್, ಎಸ್‌.ಎನ್. ಹಳ್ಳಿ, ಮೈಲಪನಹಳ್ಳಿ ಮತ್ತು ಸುತ್ತಮುತ್ತಲಿನ ಇತರೆ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.

ರಾಜ್ಯಾದ್ಯಂತ ಎಸ್ಕಾಂ ಆನ್‌ಲೈನ್ ಸೇವೆಗಳಲ್ಲಿ ವ್ಯತ್ಯಯ: ಇದಲ್ಲದೆ, ಮಾಹಿತಿ ತಂತ್ರಜ್ಞಾನ (ಐಟಿ) ವ್ಯವಸ್ಥೆಯ ತುರ್ತು ನಿರ್ವಹಣಾ ಕಾರ್ಯದ ಪ್ರಯುಕ್ತ, ರಾಜ್ಯದ ಎಲ್ಲಾ ಐದು ಎಸ್ಕಾಂಗಳಾದ ಬೆಸ್ಕಾಂ, ಸೆಸ್ಕ್, ಮೆಸ್ಕಾಂ, ಜೆಸ್ಕಾಂ ಮತ್ತು ಹೆಸ್ಕಾಂನ ಆನ್‌ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿವೆ.

ಸೇವೆ ಅಲಭ್ಯವಾಗುವ ಸಮಯ: ಅಕ್ಟೋಬರ್ 27, ಸೋಮವಾರ ರಾತ್ರಿ 8 ಗಂಟೆಯಿಂದ ಅಕ್ಟೋಬರ್ 28, ಮಂಗಳವಾರ ಬೆಳಿಗ್ಗೆ 11 ಗಂಟೆಯವರೆಗೆ.

ಈ ಅವಧಿಯಲ್ಲಿ, ವಿದ್ಯುತ್ ಬಿಲ್ ಪಾವತಿ, ಹೊಸ ಸಂಪರ್ಕಕ್ಕಾಗಿ ಅರ್ಜಿ, ಹೆಸರು ಅಥವಾ ಜಕಾತಿ ಬದಲಾವಣೆ ಸೇರಿದಂತೆ ಎಲ್ಲಾ ಆನ್‌ಲೈನ್ ಆಧಾರಿತ ಸೇವೆಗಳು ಲಭ್ಯವಿರುವುದಿಲ್ಲ. ಬೆಸ್ಕಾಂ ಮಿತ್ರ ಆಪ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇರಿದಂತೆ ಯಾವುದೇ ಥರ್ಡ್-ಪಾರ್ಟಿ ಪಾವತಿ ವಿಧಾನಗಳ ಮೂಲಕವೂ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಗುಲ್ಬರ್ಗ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ನಗರ ಪ್ರದೇಶಗಳ ಗ್ರಾಹಕರ ಮೇಲೆ ಇದು ಪರಿಣಾಮ ಬೀರಲಿದೆ.

ಈ ಎರಡೂ ನಿರ್ವಹಣಾ ಕಾರ್ಯಗಳಿಂದಾಗಿ ಗ್ರಾಹಕರಿಗೆ ಉಂಟಾಗುವ ಅನಾನುಕೂಲತೆಗಾಗಿ ಬೆಸ್ಕಾಂ ವಿಷಾದ ವ್ಯಕ್ತಪಡಿಸಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮನವಿ ಮಾಡಿದೆ. ತಮ್ಮ ಆನ್‌ಲೈನ್ ವ್ಯವಹಾರಗಳನ್ನು ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳಲು ಗ್ರಾಹಕರಿಗೆ ಸೂಚಿಸಲಾಗಿದೆ.

Previous articleಪಕ್ಕದಲ್ಲೇ ಮಗಳು ಮಲಗಿದ್ದಳು, ಪತ್ನಿಯ ಉಸಿರು ನಿಲ್ಲಿಸಿದ ಪತಿ: ಆತ್ಮಹತ್ಯೆ ನಾಟಕ
Next article‘ಮೋಂಥಾ’ ಚಂಡಮಾರುತದ ಅಬ್ಬರ: ರಾಜ್ಯಗಳಲ್ಲಿ ಮುಂದಿನ 48 ಗಂಟೆಗಳು ನಿರ್ಣಾಯಕ!

LEAVE A REPLY

Please enter your comment!
Please enter your name here