ಹತ್ತು ಕೊಳವೆಬಾವಿ ಕೊರೆಸಲು ಸಾಲ: ರೈತ ನೇಣಿಗೆ ಶರಣು

ಆತ್ಮಹತ್ಯೆ

ಕುಷ್ಟಗಿ: ತನ್ನ ಜಮೀನಿನಲ್ಲಿ ಹತ್ತಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಲು ಬ್ಯಾಂಕಿನಲ್ಲಿ ಸಾಲ ಮಾಡಿದ್ದ ರೈತ ಸಾಲ ತೀರಿಸಲಾಗದೆ ನೇಣಿಗೆ ಶರಣಾದ ಘಟನೆ ನಡೆದಿದೆ.
ತಾಲೂಕಿನ ಕೆ.ಬೊದರ ತಾಂಡದ ಕೃಷ್ಣಪ್ಪ ಲಕ್ಷ್ಮಪ್ಪ ರಾಥೋಡ್(೫೪) ನೇಣಿಗೆ ಶರಣಾದ ರೈತ. ಇಳಕಲ್ ಎಕ್ಸೆಸ್ ಬ್ಯಾಂಕಿನಲ್ಲಿ ನಾಲ್ಕು ಲಕ್ಷ ರೂ.ಗೂ ಅಧಿಕ ಸಾಲ ಮಾಡಿ ತಮ್ಮ ನಾಲ್ಕು ಎಕರೆ ೧೮ ಗುಂಟೆ ಜಮೀನಿನಲ್ಲಿ ೧೦ ಬೋರ್‌ವೆಲ್ ಹಾಕಿಸಿದ್ದರು. ಅದರಲ್ಲಿ ಕೇವಲ ಒಂದು ಬೊರ್‌ವೆಲ್‌ನಲ್ಲಿ ಮಾತ್ರ ನೀರು ಬಂದಿದೆ ಎನ್ನಲಾಗಿದೆ.
ಅವರಿಗೆ ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು ಇದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್‌ಐ ಮುದ್ದು ರಂಗಸ್ವಾಮಿ ಭೇಟಿ ನೀಡಿ ಪ್ರಕರಣದ ಸತ್ಯತೆ ತಿಳಿದುಕೊಂಡು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.