ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಗುರುವಾರದ ಸಂಪಾದಕೀಯ
ನಮ್ಮೆಲ್ಲರ ಪ್ರತಿನಿಧಿಯಾಗಿ ಹೋಗಿದ್ದ ಶುಭಾಂಶು ಶುಕ್ಲಾ ಆರಂಭದಲ್ಲೇ ಎಲ್ಲರ ಮನಗೆದ್ದಿದ್ದರು. ಈಗ ಹಿಂತಿರುಗಿ ಬಂದಮೇಲೆ ಇಡೀ ದೇಶ ಅವರ ದರ್ಶನಕ್ಕಾಗಿ ಕಾಯುತ್ತಿದೆ.
ಇಂದಿನಿಂದ ಅಂತರಿಕ್ಷ ಸಂಶೋಧನೆಯಲ್ಲಿ ಭಾರತ ದಾಪುಗಾಲು ಇಡಲಿದೆ. ಶುಭಾಂಶು ಶುಕ್ಲಾ ಅಂತರಿಕ್ಷ ಕೇಂದ್ರದಲ್ಲಿದ್ದು ಹಲವು ಪ್ರಯೋಗಗಳನ್ನು ಕೈಗೊಂಡು ಭೂಮಿಗೆ ಸುರಕ್ಷಿತವಾಗಿ ಹಿಂತಿರುಗಿ ಬಂದಿರುವುದು ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತಂದಿದೆ. ನಮ್ಮೆಲ್ಲರ ಪ್ರತಿನಿಧಿಯಾಗಿ ಹೋಗಿದ್ದ ಶುಕ್ಲಾ ಆರಂಭದಲ್ಲೇ ಎಲ್ಲರ ಮನಗೆದ್ದಿದ್ದರು. ಈಗ ಹಿಂತಿರುಗಿ ಬಂದಮೇಲೆ ಇಡೀ ದೇಶ ಅವನ ದಶಧನಕ್ಕಾಗಿ ಕಾಯುತ್ತಿದೆ. ಅದರಲ್ಲೂ ಯುವ ಜನಾಂಗ ಶುಕ್ಲಾ ಅವರ ಅನುಭವವನ್ನು ಕೇಳಲು ಕಾತುರದಿಂದ ಕಾಯುತ್ತಿದೆ.
ಶುಕ್ಲಾ ಅಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದ್ದು ಅದರ ಪರಿಣಾಮವನ್ನು ತಜ್ಞರು ಅಧ್ಯಯನ ನಡೆಸಬೇಕಿದೆ. ಇದರಿಂದ ಮುಂದಿನ ಸಂಶೋಧನೆಗಳಿಗೆ ಇಂಬು ದೊರಕಲಿದೆ. ಧಾರವಾಡದ ಕೃಷಿ ವಿವಿ ನೀಡಿದ್ದ ಮೆಂತ್ಯೆ ಮತ್ತು ಹೆಸರು ಮೊಳಕೆಕಾಳು ತೆಗೆದುಕೊಂಡು ಹೋಗಿದ್ದರು. ಅಲ್ಲಿಯ ವಾತಾವರಣದಲ್ಲಿ ಅದರ ಬೆಳವಣಿಗೆ ಹೇಗಿತ್ತು ಎಂಬುದನ್ನು ಕೃಷಿ ತಜ್ಞರು ಅಧ್ಯಯನ ಮಾಡಲಿದ್ದಾರೆ. ಇದರಿಂದ ಮುಂಬರುವ ದಿನಗಳಲ್ಲಿ ಅಂತರಿಕ್ಷದಲ್ಲಿ ಕೃಷಿ ಬೆಳವಣಿಗೆ ಬಗ್ಗೆ ಬೆಳಕು ಚೆಲ್ಲಲು ಸಾಧ್ಯವಾಗಲಿದೆ.
ಅಲ್ಲಿ ಅತಿ ಕಡಿಮೆ ಗುರುತ್ವಾಕರ್ಷಣೆ ಇರುವುದರಿಂದ ತೇಲುವುದು ಸಾಮಾನ್ಯ. ಇದರಿಂದ ನಮ್ಮ ಸ್ನಾಯುಗಳ ಮೇಲೆ ಕೆಲವು ಪರಿಣಾಮಗಳಾಗಲಿದೆ. ಇದರ ಬಗ್ಗೆ ಶುಕ್ಲಾ ಪ್ರಯೋಗಗಳು ಕೆಲವು ಕುತೂಹಲಕಾರಿ ವಿಷಯಗಳನ್ನು ಬಹಿರಂಗಪಡಿಸಲಿದೆ. ಅಂತರಿಕ್ಷದಲ್ಲಿ ನಾವು ಇಲ್ಲಿ ಬಳಸುವ ಆಹಾರ ಯಾವ ಸ್ವರೂಪ ಪಡೆಯಲಿದೆ ಎಂಬುದನ್ನು ನೋಡಬೇಕಿದೆ. ಇದರ ಮೇಲೆ ಮುಂದಿನ ದಿನಗಳಲ್ಲಿ ಜೀವಿಗಳು ಹೋಗಿ ಅಲ್ಲೇ ನೆಲೆಸುವ ಬಗ್ಗೆ ಆಲೋಚಿಸಬಹುದು.
ಗುರುತ್ವಾಕರ್ಷಣೆ ಕಡಿಮೆ ಇರುವ ವಾತಾವರಣದಲ್ಲಿ ನಮ್ಮ ವಂಶವಾಹಿ ಗುಣಗಳು ಹೇಗೆ ರೂಪಾಂತರ ಪಡೆಯುತ್ತವೆ ಎಂಬುದರ ಬಗ್ಗೆ ಭಾರತೀಯ ವಿಜ್ಞಾನ ಮಂದಿರ ಸಂಶೋಧನೆ ಕೈಗೊಂಡಿದೆ. ಇದಲ್ಲದೆ ೨೦೩೫ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನೆ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಬೇಕಿದೆ. ಅದಕ್ಕೆ ಈಗಾಗಲೇ ಸಿದ್ಧತೆ ನಡೆಸಲಾಗಿದೆ. ಶುಭಾಂಶು ಶುಕ್ಲಾ ಅವರ ಅನುಭವ ನಮ್ಮ ಭಾರತೀಯ ಗಗನಯಾತ್ರಿಗಳಿಗೆ ದಾರಿದೀಪವಾಗಲಿದೆ.
ಹಿಂದೆ ೧೯೮೪ರಲ್ಲಿ ರಾಕೇಶ್ ಶರ್ಮ ಗಗನಯಾನ ಕೈಗೊಂಡು ಬಂದಿದ್ದರು. ಅವರ ತರುವಾಯ ೪೧ ವರ್ಷಗಳ ನಂತರ ಶುಭಾಂಶು ಶುಕ್ಲಾ ಹೊಸ ಅಧ್ಯಾಯ ತೆರೆದಿದ್ದಾರೆ. ೨೦೪೦ಕ್ಕೆ ಭಾರತೀಯ ಚಂದ್ರನ ಮೇಲೆ ಕಾಲಿಡಬೇಕಿದೆ. ಈ ಎಲ್ಲ ಪ್ರಯೋಗಗಳಿಗೆ ಇಂದಿನ ಯಶಸ್ಸು ಸ್ಫೂರ್ತಿಯ ಸೆಲೆಯಾಗಲಿದೆ. ಮುಂಬರುವ ದಿನಗಳಲ್ಲಿ ಆಹಾರ, ಭೂಮಿ, ನೀರು, ಇಂಧನದ ಕೊರತೆ ತಲೆದೋರಲಿದೆ. ಅದಕ್ಕೆ ಬೇರೆ ಗ್ರಹಗಳಲ್ಲಿ ಇವುಗಳ ಲಕ್ಷಣಗಳನ್ನು ಹುಡುಕುವುದು ಅಗತ್ಯ.
ಒಂದು ವೇಳೆ ಬೇರೆ ಗ್ರಹಗಳಲ್ಲಿ ಇವುಗಳು ಲಭ್ಯ ಎಂದಾದರೆ ಜನ ಅಲ್ಲಿಗೂ ಲಗ್ಗೆ ಹಾಕುವುದು ನಿಶ್ಚಿತ. ಭೂಮಿಯ ಗುರುತ್ವಾಕರ್ಷಣೆ ಇಲ್ಲದೆ ಬದುಕುವುದು ಹೇಗೆ ಎಂಬುದನ್ನು ಮನುಷ್ಯ ಕಲಿಯಬೇಕಿದೆ. ಅದು ಸಿದ್ಧಿಸಿದರೆ ಬೇರೆ ಗ್ರಹದಲ್ಲಿ ಹೋಗಿ ನೆಲೆಸುವುದು ಕನಸಿನ ಮಾತಾಗಿ ಉಳಿಯುವುದಿಲ್ಲ. ಶುಭಾಂಶು ಶುಕ್ಲಾ ಮುಂದಿನ ತಲೆಮಾರಿಗೆ ಹೊಸ ಮಾರ್ಗವನ್ನು ತೋರಿದ್ದಾರೆ. ಶುಕ್ಲಾ ಅವರ ಸಾಹಸದ ಹಿಂದೆ ನೂರಾರು ವಿಜ್ಞಾನಿಗಳು, ತಂತ್ರಜ್ಞರ ಪರಿಶ್ರಮವಿದೆ.
ಅವರು ಹಲವು ಪ್ರಯೋಗಗಳನ್ನು ಕೈಗೊಂಡು ಅದರ ಪರಿಣಾಮ ಅಂತರಿಕ್ಷದಲ್ಲಿ ಹೇಗಿರುತ್ತದೆ ಎಂಬುದನ್ನು ನೋಡಲು ಶುಭಾಂಶು ಶುಕ್ಲಾ ಅವರ ನೆರವನ್ನು ಪಡೆದಿದ್ದಾರೆ. ಶುಕ್ಲಾ ಅವರ ಸಾಹಸ ಈ ರೀತಿ ವೈಜ್ಞಾನಿಕ ಬೆಳವಣಿಗೆ ಕಾರಣವಾಗಿದೆ ಎಂಬುದು ಸಂತಸದ ಸಂಗತಿ. ಈ ಅಂತರಿಕ್ಷ ಯಾನ ದುಬಾರಿ ಹಣ ವೆಚ್ಚವಾದರೂ ಇದರಿಂದ ಮನುಕುಲಕ್ಕೆ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಇದಕ್ಕೆ ಮಾಡಿದ ವೆಚ್ಚ ವ್ಯರ್ಥವಾಗುವುದಿಲ್ಲ. ಅದರಲ್ಲೂ ಕೃಷಿಯ ಬೆಳವಣಿಗೆಗೆ ಶುಕ್ಲಾ ಅಂತರಿಕ್ಷದಲ್ಲಿ ನಡೆಸಿದ ಪ್ರಯೋಗಗಳು ಮೈಲಿಗಲ್ಲಾಗಲಿದೆ.
ಈಗ ಅವರು ಸುರಕ್ಷಿತವಾಗಿ ಹಿಂತಿರುಗಿ ಬಂದಿರುವುದು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಅಂತರಿಕ್ಷಕ್ಕೆ ಹೋಗಲು ಪ್ರೇರಣೆ ನೀಡಲಿದೆ. ಮುಂಬರುವ ದಿನಗಳಲ್ಲಿ ಶುಕ್ಲಾ ನೂರಾರು ಯುವಕ-ಯುವತಿಯರಿಗೆ ತರಬೇತಿ ನೀಡಬಹುದು. ಅವರ ಸೇವೆಯನ್ನು ಬಳಸಿಕೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಅವಲಂಬಿಸಿದೆ. ಅಲ್ಲದೆ ದೇಶದ ಪ್ರತಿಷ್ಠಿತ ಸಂಸ್ಥೆಗಳು ಇವರ ಅನುಭವದ ಮೇಲೆ ಹಲವು ಪ್ರಯೋಗಗಳನ್ನು ಇಲ್ಲೇ ಕೈಗೊಳ್ಳಬಹುದು. ಅಲ್ಲಿಯ ವಾತಾವರಣವನ್ನು ಕೃತಕವಾಗಿ ಸೃಷ್ಟಿಸಬಹುದು. ಇದರಿಂದ ಅಲ್ಲಿಗೆ ಹೋದಾಗ ಯಾವ ರೀತಿ ವರ್ತಿಸಬೇಕು ಎಂಬ ಅರಿವು ಮೂಡಲಿದೆ.
ವೈದ್ಯಕೀಯ ರಂಗದಲ್ಲಂತೂ ಇದು ಹಲವು ಕ್ರಾಂತಿಕಾರಿ ಬದಲಾವಣೆ ತರಲಿದೆ. ಅತ್ಯಂತ ಕಡಿಮೆ ಗುರುತ್ವಾಷಕರ್ಷಣೆ ಇರುವುದರಿಂದ ನಮ್ಮ ಸ್ನಾಯುಗಳಲ್ಲಿ ಬಿಗಿತ ಕಂಡುಬರುತ್ತದೆ. ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಶುಕ್ಲಾ ಹಲವು ಪ್ರಯೋಗಗಳನ್ನು ನಡೆಸಿ ಬಂದಿದ್ದಾರೆ. ಅದರ ಫಲಿತಾಂಶವನ್ನು ವೈದ್ಯಕೀಯ ತಜ್ಞರು ವಿಶ್ಲೇಷಿಸಬೇಕಿದೆ.
ಈಗ ಭೂಮಿಯ ಮೇಲಿರುವ ಹಲವು ದೈಹಿಕ ಸಮಸ್ಯೆಗಳಿಗೆ ಕಡಿಮೆ ಗುರುತ್ವಾಕರ್ಷಣೆ ಪರಿಹಾರ ನೀಡಿದರೆ ಅದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ. ಭಾರತೀಯ ಅಂತರಿಕ್ಷ ಸಂಶೋಧನೆಗೆ ಶುಕ್ಲಾ ಹೊಸ ಭಾಗ್ಯದ ಬಾಗಿಲು ತೆರೆದಿದ್ದಾರೆ. ಉಪಗ್ರಹ ಉಡಾವಣೆಯಲ್ಲಿ ಭಾರತದ ಸಾಧನೆ ಅಂತರಿಕ್ಷ ಕೇಂದ್ರ ಸ್ಥಾಪನೆಯಲ್ಲಿ ಪ್ರಾಬಲ್ಯ ಸಾಧಿಸಿದರೆ ಅದೊಂದು ಅಂತರಿಕ್ಷ ಪ್ರವಾಸೋದ್ಯಮ ಆಗಲಿದೆ.