ದುಬೈ: ಕ್ರಿಕೆಟ್ ಅಭಿಮಾನಿಗಳ ಕಾತರಕ್ಕೆ ತೆರೆ ಬೀಳುವ ಸಮಯ ಬಂದಿದೆ. ಏಷ್ಯಾಕಪ್ 2025ರ ಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಈಗಾಗಲೇ ಟೂರ್ನಿಯಲ್ಲಿ ಮೂರನೇ ಬಾರಿಗೆ ಈ ಸಾಂಪ್ರದಾಯಿಕ ಎದುರಾಳಿಗಳು ಸೆಣಸಾಡುತ್ತಿದ್ದು, ಈ ಹಿಂದಿನ ಎರಡು ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಹೀಗಾಗಿ ಫೈನಲ್ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳು ಗರಿಗೆದರಿವೆ.
ಬಾಂಗ್ಲಾದೇಶವನ್ನು ರೋಚಕವಾಗಿ ಮಣಿಸಿ ಫೈನಲ್‌ಗೆ ಲಗ್ಗೆ ಇಟ್ಟಿರುವ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ವಿಶ್ವಾಸದಲ್ಲಿದ್ದಾರೆ. “ನಾವು ಯಾವುದೇ ಪ್ರಬಲ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದ್ದೆವೆ, ಅದು ಭಾರತ ತಂಡವಾದರೂ ಸರಿಯೇ,” ಎಂದು ಹೇಳಿದ್ದಾರೆ. ಅವರ ಪ್ರಕಾರ, ಈ ಬಾರಿಯ ಫೈನಲ್‌ನಲ್ಲಿ ಪಾಕಿಸ್ತಾನವು ಭಾರತವನ್ನು ಸೋಲಿಸಲಿದೆಯಂತೆ.
ಆದರೆ, ಈ ಟೂರ್ನಿಯಲ್ಲಿ ಭಾರತ ಈಗಾಗಲೇ ಎರಡು ಬಾರಿ ಪಾಕಿಸ್ತಾನವನ್ನು ಸೋಲಿಸಿರುವುದು ಅವರ ಆತ್ಮವಿಶ್ವಾಸಕ್ಕೆ ಸವಾಲಾಗಿದೆ. ಆಘಾ ಅವರು ತಮ್ಮ ತಂಡದ ಬೌಲಿಂಗ್ ವಿಭಾಗವನ್ನು ಶ್ಲಾಘಿಸಿದ್ದು, ಶಾಹೀನ್ ಅಫ್ರಿದಿ ಮತ್ತು ಹ್ಯಾರಿಸ್ ರೌಫ್ ಅವರಂತಹ ಬೌಲರ್‌ಗಳು ಎದುರಾಳಿಗೆ ನಡುಕ ಹುಟ್ಟಿಸಬಲ್ಲರು ಎಂದು ಹೇಳಿದ್ದಾರೆ. ಬ್ಯಾಟಿಂಗ್‌ನಲ್ಲಿ ಸುಧಾರಣೆ ಅಗತ್ಯವಿದೆ ಎಂದೂ ಅವರು ಒಪ್ಪಿಕೊಂಡಿದ್ದಾರೆ.
ಇತ್ತ ಭಾರತ ತಂಡ, ಈ ಟೂರ್ನಿಯಲ್ಲಿ ಅಜೇಯವಾಗಿ ಸಾಗಿ ಫೈನಲ್ ತಲುಪಿದೆ. ಸೂರ್ಯಕುಮಾರ್ ನಾಯಕತ್ವದ ಭಾರತೀಯ ತಂಡ ಸಮತೋಲಿತ ಪ್ರದರ್ಶನ ನೀಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಬಲಿಷ್ಠವಾಗಿರುವ ಭಾರತ, ಫೈನಲ್‌ನಲ್ಲಿ ಪಾಕಿಸ್ತಾನಕ್ಕೆ ಮತ್ತೊಂದು ಸೋಲಿನ ರುಚಿ ತೋರಿಸಲು ಸಿದ್ಧವಾಗಿದೆ.
ಗನ್ ಫೈಯರ್ ಸೆಲೆಬ್ರೇಷನ್: ಕ್ರಿಕೆಟ್ ಪಂಡಿತರು ಮತ್ತು ಅಭಿಮಾನಿಗಳು ಭಾರತವನ್ನೇ ಫೈನಲ್ ಗೆಲ್ಲುವ ಫೆವರಿಟ್ ತಂಡವೆಂದು ಪರಿಗಣಿಸಿದ್ದಾರೆ. ಏಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಭಾರತ ತೋರಿದ ಪ್ರಾಬಲ್ಯ ಮತ್ತು ಪಾಕಿಸ್ತಾನದ ವಿರುದ್ಧ ಸತತವಾಗಿ ಗೆದ್ದಿರುವ ವಿಶ್ವಾಸವೇ ಇದಕ್ಕೆ ಕಾರಣ. ಸೂಪರ್ ಫೋರ್ ಹಂತದಲ್ಲಿ ಪಾಕ್ ಆಟಗಾರ ಸಾಹಿಬ್‌ಜಾದಾ ಫರ್ಹಾನ್ ಅವರ ‘ಗನ್ ಫೈಯರ್ ಸೆಲೆಬ್ರೇಷನ್’ ಭಾರತದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತಾದರೆ ಇನ್ನೊಂದುಕಡೆ ಫರ್ಹಾನ್ ಗೆ ಸೆಲೆಬ್ರೇಷನ್ ಮಾಡಲು ಸಹಿತ ಬಂದಿಲ್ಲ ಮೂರ್ಖರು ಸಹಿತ ಗನ್ ಬ್ಯಾರಲ್ ಅನ್ನು ತಮ್ಮ ಕಡೆ ಹಿಡಿದುಕೊಂಡು ಫೈಯರ್ ಮಾಡುತ್ತಾರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನಗೆಗಿಡಾಗಿದ್ದಾರೆ.