ಏಷ್ಯಾಕಪ್‌: ಅಭಿಷೇಕ ಹ್ಯಾಟ್ರಿಕ್ ಅರ್ಧಶತಕ, ಭಾರತ ಬೃಹತ್‌ ಮೊತ್ತ

0
51

ದುಬೈ: ಪ್ರಸಕ್ತ ಏಷ್ಯಾಕಪ್‌ನ ಔಪಚಾರಿಕ ಪಂದ್ಯದಲ್ಲೂ ಭಾರತದ ಅಬ್ಬರ ಮುಂದುವರೆದಿದೆ. ಶ್ರೀಲಂಕಾ ವಿರುದ್ಧದ ಸೂಪರ್ 4 ಹಂತದ ಕೊನೆ ಪಂದ್ಯದಲ್ಲಿ ಮತ್ತೆ ವಿಜೃಂಭಿಸಿದ ಅಭಿಷೇಕ್ ಶರ್ಮಾ ಅರ್ಧಶತಕ ಬಾರಿಸಿ, ಸಿಂಹಸ್ವಪ್ನರಾಗಿದ್ದಾರೆ. ಅಲ್ಲದೇ ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್‌ರ ಸಮಯೋಚಿತ ಬ್ಯಾಟಿಂಗ್‌ನಿಂದ ಭಾರತ ನಿಗದಿತ 20 ಓವರ್‌ಗಳಲ್ಲಿ 202 ರನ್‌ಗಳಿಸಿ ಗೆಲ್ಲುವ ವಿಶ್ವಾಸ ಮೂಡಿಸಿದೆ.

ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದರಿಂದ ಶ್ರೀಲಂಕಾ ತಂಡಕ್ಕೆ ಕಳೆದುಕೊಳ್ಳುವಂತದ್ದೇನೂ ಇರಲಿಲ್ಲ. ಅದಾಗ್ಯೂ ಟಾಸ್ ಗೆದ್ದ ಲಂಕಾ ನಾಯಕ ಚರಿತ್ ಅಸಲಂಕಾ ನೇರವಾಗಿ ಎದುರಾಳಿಗಳನ್ನೇ ಬ್ಯಾಟಿಂಗ್‌ಗೆ ಆಹ್ವಾನಿಸಿದರು. ಒತ್ತಡರಹಿತ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇದರಿಂದ, ಭಾರತ ಮೊದಲ ಪವರ್‌ಪ್ಲೇನಲ್ಲೇ 71 ರನ್‌ಗಳನ್ನು ಕಲೆ ಹಾಕಿತು. ಅಲ್ಲದೇ, ಅಭಿಷೇಕ್ ಶರ್ಮಾ ಕೂಡ 23 ಎಸೆತಗಳಲ್ಲಿ ಫಿಫ್ಟಿ ಪೂರ್ಣಗೊಳಿಸಿ, ಸಂಭ್ರಮಿಸಿದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯಧಿಕ ರನ್ ಸರದಾರ ಎನ್ನಿಸಿಕೊಂಡಿದ್ದ ಆರಂಭಿಕ ಆಟಗಾರ ಹಾಗೂ ಉಪನಾಯಕ ಶುಭಮನ್ ಗಿಲ್ ಈ ಏಷ್ಯಾಕಪ್‌ನಲ್ಲಿ ನೀರಸ ಬ್ಯಾಟಿಂಗ್ ಅನ್ನು ಮುಂದುವರೆಸಿ, ಲಂಕಾ ವಿರುದ್ಧವೂ ಕೇವಲ 4 ರನ್‌ಗಳಿಗೆ ವಿಕೆಟ್ ನೀಡಿದರು.

ಅಷ್ಟೇ ಅಲ್ಲದೇ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಈ ಟೂರ್ನಿಯಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ನಡೆಸಲಾಗಲಿಲ್ಲ. ಶುಕ್ರವಾರವೂ ಕೂಡ ಸೂರ್ಯ 13 ಎಸೆತಗಳಲ್ಲಿ ಗಳಿಸಿದ್ದು ಕೇವಲ 12 ರನ್. ಸ್ಪಿನ್ನರ್ ವನಿಂಧು ಹಸರಂಗಾ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದ ನಾಯಕ, ಪೆವಿಲಿಯನ್‌ಗೆ ಹಿಂದಿರುಗಿದರು. ಇದಾದ ಬಳಿಕ 61 ರನ್‌ಗಳಿಸಿದ ಅಭಿಷೇಕ್ ಶರ್ಮಾ ಕೂಡ ಅಸಲಂಕಾಗೆ ವಿಕೆಟ್ ನೀಡಿ ಹೊರ ನಡೆದರು.

ಸಂಜು-ತಿಲಕ್ 66 ರನ್ ಜೊತೆಯಾಟ: ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ ಹಾಗೂ ಸಂಜು ಸ್ಯಾಮ್ಸನ್ ಮಾತ್ರ ಲಂಕಾ ಬೌಲರ್‌ಗಳ ಎದುರು ಬಹುಬೇಗನೇ ರನ್ ಸಾಧಿಸುತ್ತಾ ಸಾಗಿದರು. ಇದರಿಂದ, ಭಾರತ 15 ಓವರ್‌ಗಳಲ್ಲಿ 150ರ ಗಡಿ ತಲುಪಿತು.

ಈ ವೇಳೆ 4 ರನ್‌ಗಳ ಅಂತರದಲ್ಲಿ 39 ರನ್‌ಗಳಿಸಿದ್ದ ಸಂಜು ಹಾಗೂ 2 ರನ್ ಗಳಿಸಿ ಹಾರ್ದಿಕ್ ಪಾಂಡ್ಯ ವಿಕೆಟ್ ಒಪ್ಪಿಸಿದರು. ಆಕರ್ಷಕ ಬ್ಯಾಟಿಂಗ್ ನಡೆಸಿದ ತಿಲಕ್ ವರ್ಮಾ ಅಜೇಯರಾಗಿ ಉಳಿದುಕೊಂಡರೂ ಕೇವಲ 1 ರನ್‌ನಿಂದ ಅರ್ಧಶತಕದಿಂದ ವಂಚಿತರಾದರು. ಸ್ಲಾಗ್ ಓವರ್‌ಗಳಲ್ಲಿ ಅಕ್ಷರ್ ಪಟೇಲ್ 21 ರನ್‌ಗಳಿಸಿದ್ದರಿಂದ ಭಾರತ ಇನ್ನೂರರ ಗಡಿ ದಾಟಿತು.

ಅಭಿಷೇಕ್ ದಾಖಲೆ: ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 61 ರನ್‌ಗಳಿಸಿದ್ದಲ್ಲದೇ ಈ ಟೂರ್ನಿಯಲ್ಲಿ ಒಟ್ಟು 307 ರನ್‌ಗಳಿಸಿದ್ದಾರೆ. ಈ ಮೂಲಕ ಏಷ್ಯಾಕಪ್ ಇತಿಹಾಸದಲ್ಲಿ ಆಡಿದ ಒಂದು ಟೂರ್ನಿಯಲ್ಲಿ ಅತ್ಯಧಿಕ ರನ್ ಗಳಿಸಿದ ಸಾಧನೆಗೆ ಒಳಗಾದರು.

Previous articleಬೆಳಗಾವಿ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Next articleವಿಶ್ವ ಪ್ರವಾಸೋದ್ಯಮ ದಿನ ಸೆ. 27: ಜಗವನು ಅರಿತು, ಮನವನು ಬೆಳಗುವ ಪಯಣ

LEAVE A REPLY

Please enter your comment!
Please enter your name here