ವಿದ್ಯಾಧಿಪತಿ ಗಣಪನಿಗೆ ನಮೋ ನಮೋ

0
27

ಎಸ್‌ಎನ್‌ಯು
ಗಣೇಶ ಚತುರ್ಥಿಯು ಭಾರತದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದಾಗಿದೆ. ಇದು ವಿದ್ಯೆಯ ಮತ್ತು ಜ್ಞಾನದ ಅಧಿಪತಿ, ಸಂಪತ್ತು ಮತ್ತು ಅದೃಷ್ಟದ ಅಧಿನಾಯಕನಾದ ಮೂಷಿಕ ವಾಹನನ ಜನನವನ್ನು ಸಾರುವ ಹಬ್ಬ. ಇದನ್ನು ಹಿಂದೂಗಳೆಲ್ಲರೂ ಶ್ರದ್ಧಾ ಭಕ್ತಿಗಳಿಂದ ಆಚರಿಸುತ್ತಾರೆ.

ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಹಿಂದಿನ ದಿನ ತಾಯಿ ಪಾರ್ವತಿಯ ಅಂದರೆ ಸ್ವರ್ಣಗೌರಿಯ ಹಬ್ಬವಾದರೆ ಮಾರನೇ ದಿನವೇ ಮಗ ಗಣೇಶನ ಹಬ್ಬ.

ಪುರಾಣಗಳ ಪ್ರಕಾರ, ದೇವಿ ಪಾರ್ವತೀ ತಾಯಿ ತಾನು ಬಳಸಿದ ಹಳದಿ ಮಣ್ಣಿನಿಂದ ಚಿಕ್ಕ ವಿಗ್ರಹವನ್ನು ರೂಪಿಸಿ ಅದಕ್ಕೆ ಪ್ರಾಣ ತುಂಬಿದರು. ಅದೇ ಗಣೇಶ. ತಾಯಿಯ ಆಜ್ಞೆಯನ್ನು ಪಾಲಿಸುತ್ತಾ ಗಣೇಶನು ಶಿವನಿಗೂ ದಾರಿ ತಡೆದಾಗ, ಕೋಪಗೊಂಡ ಶಿವನು ಆತನ ತಲೆಯನ್ನು ಕಡಿದನು. ನಂತರ ಪಾರ್ವತಿಯ ವಿಲಾಪದಿಂದ ದಿಗ್ಭ್ರಮೆಗೊಂಡ ಶಿವನು ಆತನಿಗೆ ಆನೆಯ ತಲೆ ಅಳವಡಿಸಿ ಪುನರ್ಜನ್ಮ ನೀಡಿದ. ಆ ದಿನವೇ ಭಾದ್ರಪದ ಶುಕ್ಲ ಚತುರ್ಥಿ.

ಗಣೇಶನು ವಿಘ್ನವಿನಾಯಕ ಎಂಬ ಬಿರುದಿನಿಂದ ಪ್ರಸಿದ್ಧ. ಯಾವುದೇ ಕಾರ್ಯವನ್ನು ಆರಂಭಿಸುವ ಮೊದಲು ಗಣಪತಿಯನ್ನು ಸ್ಮರಿಸುವುದರಿಂದ ಅಡೆತಡೆಗಳು ದೂರವಾಗುತ್ತವೆ ಎಂಬ ನಂಬಿಕೆ ಮೊದಲಿನಿಂದಲೂ ಬೆಳೆದುಬಂದಿದೆ. ಪಿತೃಪರಂಪರೆಯಿಂದ ಬಂದಿರುವ ಮೊದಕ, ಕಡಬು, ಲಡ್ಡುಗಳನ್ನು ಗಣೇಶನಿಗೆ ಸಮರ್ಪಿಸಿ ಆನಂತರ ಭಕ್ತರು ಹಂಚಿಕೊಳ್ಳುವುದು ಭಕ್ತಿಯ ಪ್ರತೀಕ. ಕೊನೆಯ ದಿನ ವಿಗ್ರಹ ವಿಸರ್ಜನೆಯಾಗುವಾಗ, ಇದು ಮಣ್ಣಿನಿಂದ ಬಂದದ್ದು ಮಣ್ಣಿಗೇ ಸೇರುತ್ತದೆ ಎಂಬ ತತ್ವವನ್ನು ಸ್ಮರಿಸಿ ಪ್ರಕೃತಿಯೊಡನೆ ಮಾನವನ ನಂಟನ್ನು ನೆನಪಿಸಲಾಗುತ್ತದೆ. ಹೀಗೆ ಗಣೇಶ ಚತುರ್ಥಿ ಭಕ್ತಿ, ಬಾಂಧವ್ಯ ಮತ್ತು ಪರಿಸರ ಪ್ರೀತಿಯ ಸಂದೇಶವನ್ನು ಪೀಳಿಗೆಯಿಂದ ಪೀಳಿಗೆ ಸಾಗಿಸುತ್ತಿದೆ.

ಗಣಪತಿಯು ಆಕಾಶಾಭಿಮಾನಿ ದೈವವಾಗಿರುವುದರಿಂದಲೇ ಎಲ್ಲಾ ಪೂಜಾಕರ್ಮಗಳಲ್ಲಿ ಪ್ರಥಮ ಪೂಜೆ ಅವನಿಗೆ ಸಲ್ಲುತ್ತದೆ. ಕೆಲವೊಮ್ಮೆ ಅವಕಾಶವಿಲ್ಲದಿದ್ದರೂ ಕನಿಷ್ಠ ಗಣಪತಿಪೂಜೆಯನ್ನು ಮಾಡಿದರೆ ಸಾಕು ಎಂಬ ನಂಬಿಕೆ ಇದೆ.

ಅಂದರೆ ಗಣಪತಿ ಕೆಂಪು ವಸ್ತ್ರ, ಕೆಂಪು ದೇಹ, ಕೆಂಪು ಮಾಲೆ ಹಾಗೂ ಕೆಂಪಾದ ಅಲಂಕಾರಗಳಿಂದ ಅಲಂಕರಿಸಿಕೊಂಡಿರುತ್ತಾನೆ. ಆದ್ದರಿಂದ ಗಣಪತಿಗೆ ಕೆಂಪು ವಸ್ತ್ರವನ್ನು ಕುಂಕುಮ ಅಥವಾ ಸಿಂಧೂರದಿಂದ ಅಭಿಷೇಕಿಸಿ ಅರ್ಪಿಸಬೇಕು.

ಪೂಜಾ ವಿಧಾನ: ಮಣ್ಣಿನ ಮೂರ್ತಿಗೆ ಗಣಪತಿಯನ್ನು ಆವಾಹನೆ ಮಾಡಬೇಕು. ಯಥಾಶಕ್ತಿಯಿಂದ ಭಕ್ತಿಪೂರ್ವಕವಾಗಿ ಷೋಡಶೋಪಚಾರ ಮಾಡಬೇಕು. ಅರ್ಘ್ಯ ಸಮರ್ಪಿಸಬೇಕು, ಪಾದಪೂಜೆ ಮಾಡಬೇಕು, ತಲೆ ಮೇಲೆ ಆ ನೀರು ಪ್ರೋಕ್ಷಣೆ ಮಾಡಿಕೊಂಡು, ಇತರರಿಗೆ ಪ್ರೋಕ್ಷಣೆ ಮಾಡಬೇಕು, ಆಮೇಲೆ ಆಚಮನ ಮಾಡಬೇಕು. ಮಧುಪರ್ಕ ನೀಡಬೇಕು. ಮತ್ತೆ ಆಚಮನ. ಕೈ ಜೋಡಿಸಿ ಪ್ರಾರ್ಥಿಸಿ, ಅಭಿಷೇಕ ಆರಂಭಿಸಬೇಕು. ಕೆಂಪನೆಯ ಎರಡು ರೇಷ್ಮೆ ವಸ್ತçವನ್ನು ಅರ್ಪಣೆ ಮಾಡಬೇಕು. ಮಂತ್ರಾಕ್ಷತೆಯನ್ನು ಹಾಕಿ. ಯಜ್ಞೋಪವೀತವನ್ನು ಅರ್ಪಿಸಬೇಕು. ಗಂಧವನ್ನು ಅರ್ಪಿಸಬೇಕು. ಮೂರ್ತಿಯ ಹಣೆಗೆ ಕುಂಕುಮ ಇಡಬೇಕು.

ಪುಷ್ಪಾರ್ಚನೆಯನ್ನು ಮಾಡಬೇಕು. ಗರಿಕೆಯನ್ನು ಅರ್ಪಿಸಬೇಕು. ಧೂಪ ದೀಪವನ್ನು ಅರ್ಪಿಸಬೇಕು. ಗಣಪತಿಯ ಬಲ ಭಾಗಕ್ಕೆ ಮಂಡಲವನ್ನು ಮಾಡಿ, ಬಾಳೆ ಎಲೆಯನ್ನು ಹಾಸಿ, ತುಪ್ಪ ಹಾಕಿ, ಆ ದಿನ ಮಾಡಿದ ಎಲ್ಲ ಅಡುಗೆಯನ್ನು ಬಡಿಸಿ, ವಿವಿಧ ಭಕ್ಷ÷್ಯಗಳನ್ನು, ಮೋದಕ- ಕಡುಬುಗಳನ್ನು (ಇಪ್ಪತ್ತೊಂದರ ಸಂಖ್ಯೆಯಲ್ಲಿ), ಹಣ್ಣುಗಳನ್ನು, ತಾಂಬೂಲವನ್ನು ಇಟ್ಟು, ಪ್ರಾರ್ಥನೆ ಮಾಡುತ್ತಾ ನೈವೇದ್ಯವನ್ನು ಮಾಡಬೇಕು.

ಗರಿಕೆ ಏಕೆ ಅರ್ಪಿಸುತ್ತಾರೆ?: ಗಣಪತಿಯನ್ನು ವಿವಾಹವಾಗಬೇಕೆಂದು ಅಪ್ಸರೆಯೊಬ್ಬಳು ಧ್ಯಾನಮಗ್ನನಾಗಿದ್ದ ಗಣಪತಿಯ ಧ್ಯಾನಭಂಗ ಮಾಡಿದಳು. ವಿವಾಹಕ್ಕೆ ನಿರಾಕರಿಸಿದ್ದರಿಂದ ಅಪ್ಸರೆಯು ಗಣಪತಿಗೆ ಶಾಪ ಕೊಟ್ಟಳು. ಇದರಿಂದ ಗಣಪತಿಯ ತಲೆಗೆ ದಾಹವಾಗತೊಡಗಿತು. ಈ ದಾಹವನ್ನು ಕಡಿಮೆ ಮಾಡಿಕೊಳ್ಳಲು ಗಣಪತಿಯು ತಲೆಯ ಮೇಲೆ ಗರಿಕೆಗಳನ್ನು ಧರಿಸಿದನು. ಈ ಕಾರಣಕ್ಕಾಗಿ ಗಣಪತಿಗೆ ಗರಿಕೆಗಳನ್ನು ಅರ್ಪಿಸುತ್ತಾರೆ ಎಂಬುದು ಪ್ರತೀತಿ.

ಗಣಪತಿಗೆ ಎಳೆಯ ಗರಿಕೆಗಳನ್ನು ಅರ್ಪಿಸಬೇಕು. ಎಳೆಯ ಗರಿಕೆಗೆ `ಬಾಲತೃಣಮ್’ ಎನ್ನುತ್ತಾರೆ. ಬಲಿತಿರುವ ಗರಿಕೆಯು ಒಂದು ರೀತಿಯ ಹುಲ್ಲಿನಂತೆಯೇ ಇರುತ್ತದೆ. ಗರಿಕೆಗಳಿಗೆ 3, 5, 7 ಹೀಗೆ ಬೆಸ ಸಂಖ್ಯೆಯ ಗರಿಗಳಿರಬೇಕು.

Previous articleಹುಬ್ಬಳ್ಳಿ: 6 ಲಕ್ಷ ರೂ. ವೆಚ್ಚದಲ್ಲಿ ಡೈಮಂಡ್ ಗಣಪತಿ
Next articleಕೊಪ್ಪಳ: ಜನರ ಮನ ಗೆದ್ದ ವಿಜೃಂಭಣೆಯ ತುಂಗಾರತಿ ಮಹೋತ್ಸವ

LEAVE A REPLY

Please enter your comment!
Please enter your name here