ರಾಮನಗರ: ಬಿಡದಿ ಟೌನ್‍ಶಿಪ್​ ಯೋಜನೆಗೆ ಅಪಸ್ವರ

0
46

ರಾಮನಗರ ಜಿಲ್ಲೆಯ ಬಿಡದಿ ಇಂಟಿಗ್ರೇಟೆಡ್ ಟೌನ್‍ಶಿಪ್​ ಹೆಸರಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆದಿದ್ದು, ಮನೆ ಮಗ ಎನ್ನುತ್ತಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ರೈತರ ಮೇಲೆ ಸೌಧ ಕಟ್ಟಲು ಹೊರಟಿದ್ದಾರೆ. ಇದರ ವಿರುದ್ಧ ರೈತರು ನ್ಯಾಯ ಸಿಗುವವರೆಗೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ತಿಳಿಸಿದರು.

ಬಿಡದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಾವು ಎಲ್ಲಿ ವಾಸ ಮಾಡುತ್ತಿದ್ದೇವೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದ್ದೇವಾ ಎಂಬ ಅನುಮಾನ ನಮ್ಮನ್ನು ಕಾಡುತ್ತಿದೆ. ಹಳ್ಳಿಗಳಲ್ಲಿ ರೈತರಿಗೆ ಬಿಡದಿ ಟೌನ್ ಶಿಪ್ ಯೋಜನೆ ಇಷ್ಟ ಇದೆಯೆ ಇಲ್ಲವೆ ಎಂಬುದರ ಬಗ್ಗೆ ಮುಖ್ಯಮಂತ್ರಿಗಳಾಗಲಿ, ಶಾಸಕರಾಗಲಿ ಸಭೆಗಳನ್ನು ಮಾಡಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

“ಜಿಲ್ಲೆಯ ಪ್ರತಿನಿಧಿಯಾಗಿರುವ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ಅಭಿವೃದ್ಧಿ ಮಾಡುತ್ತೇನೆ ಎಂದು ಪ್ರತಿ ಭಾಷಣದಲ್ಲೂ ಹೇಳುತ್ತಾರೆ. ನ್ಯಾಯ ಕೇಳಲು ಬಂದ ರೈತರಿಗೆ ಬೀದಿ ನಾಯಿಗಳಂತೆ ಗದರಿಸಿ ಧಮಕಿ ಹಾಕುತ್ತಾರೆ. ಈಲ್ಲೆಯಲ್ಲಿ ಜನರು ನಿಮಗೆ ಅಧಿಕಾರ ಕೊಟ್ಟಿದ್ದಕ್ಕೆ, ನೀವು ರೈತರಿಗೆ ಕೊಡುವ ಕೊಡುಗೆ ಇದೇನಾ?” ಎಂದು ಪ್ರಶ್ನಿಸಿದರು.

ರೈತರ ಜೊತೆ ಸಭೆ ಮಾಡಿಲ್ಲ: “ಶಾಸಕ ಬಾಲಕೃಷ್ಣ ಬಹಳಷ್ಟು ಬಾರಿ ಸಭೆ ಮಾಡಿದ್ದೇವೆ ಎನ್ನುತ್ತಾರೆ. ಎಷ್ಟು ಸಭೆ, ಯಾವಾಗ ಮಾಡಿದ್ದೀರಿ ಎಂಬ ರೈತರ ಪ್ರಶ್ನೆಗೆ ಉತ್ತರ ಕೊಡಿ. ಖ.ಕೆ.ಶಿವಕುಮಾರ್ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲಿ. ಮಾತೆತ್ತಿದರೆ ಕುಮಾರಸ್ವಾಮಿ ಅವರ ಯೋಜನೆ ಎನ್ನುತ್ತಿರಿ ಈಗ ಯೋಜನೆಗೆ ಸ್ವಾಗತ ಮಾಡಿರೋ ಕೆಲ ರೈತರು ಕುಮಾರಸ್ವಾಮಿ ಕಾಲದಲ್ಲಿ ವಿರೋಧ ಮಾಡಿದ್ದರು. ಈಗ ಟೌನ್ ಶಿಪ್ ಬೇಕು ಎನ್ನುತ್ತಿರುವವರು ಆಗ ಟೌನ್‍ಶಿಪ್​ ಬೇಡ ಎಂದು ಹೋರಾಟ ಮಾಡಿದ್ದರು. ಈಗ ಟೌನ್‍ಶಿಪ್​ ಬೇಕು ಎನ್ನುತ್ತಿದ್ದಾರೆ” ಎಂದರು.

“ಬಿಡದಿ ಟೌನ್‍ಶಿಪ್​ ಅನ್ನು ಎಐ ಇಂಟಿಗ್ರೇಟೆಡ್ ಟೌನ್‍ಶಿಪ್​ ಎಂದು ಬಿಂಬಿಸುತ್ತಿದ್ದಾರೆ. ಇದು ಜನರಿಗೆ ಹೂ ಮುಡಿಸುವ ಯೋಜನೆಯಾಗಿದೆ, ನ್ಯಾವ್ಯಾರು ಹೂ ಮುಡಿದುಕೊಳ್ಳಲು ಸಿದ್ದರಿಲ್ಲ. ಕತ್ತಲೆ ಕೋಣೆಯಲ್ಲಿ ರೈತರನ್ನು ಕೂರಿಸಿ ಮಂಕು ಬೂದಿ ಎರಚುತ್ತಿದ್ದೀರಿ. ಈಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳನ್ನು ನಿಮ್ಮ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದೀರಿ. ಈಲ್ಲೆಯ ಜನರು ಋಣ ತೀರಿಸಬೇಕಾದರೆ ಇಂಟಿಗ್ರೇಟೆಡ್ ಟೌನ್‍ಶಿಪ್ ಯೋಜನೆ ಕೈ ಬಿಡಿ” ಎಂದು ಹೇಳಿದರು.

“ಇಂಟಿಗ್ರೇಟೆಡ್ ಟೌನ್‍ಶಿಪ್​ ಯೋಜನೆಯಿಂದ ಡಿ.ಕೆ.ಶಿವಕುಮಾರ್ ರಾಜಕೀಯ ಉತ್ತುಂಗಕ್ಕೆ ಹೋಗುತ್ತೇನೆ ಎನ್ನುವುದು ಭ್ರಮೆಯಾಗಿದೆ. ಸರ್ಕಾರ ಬಿದ್ದರೆ ರೈತರು ಬೀದಿ ಪಾಲಾಗುತ್ತಾರೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಕ್ತವಲ್ಲದ ಚೈಲ್ಡ್ ವ್ಯಕ್ತಿತ್ವದವನೊಬ್ಬನನ್ನ ಅಧ್ಯಕ್ಷನನ್ನಾಗಿ ಮಾಡಿ ಟೌನ್‍ಶಿಪ್​ ಮಾಡಲು ಹೊರಟಿದ್ದೀರಿ. ಮಾಜಿ ಸಂಸದ ಡಿ.ಕೆ.ಸುರೇಶ್ ನಿರ್ದೇಶಕರನ್ನಾಗಿ ಮಾಡಿಕೊಂಡು ಹಾಲಿ ಸಂಸದರನ್ನು ಕೈಬಿಟ್ಟಿರುವುದು ಸರಿಯಲ್ಲ” ಎಂದು ಕಿಡಿಕಾರಿದರು.

ಪರಿಹಾರ ಕೇಳಿಲ್ಲ : “ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಪರಿಹಾರ ಕೇಳಿಲ್ಲ, ನಮ್ಮ ಜಮೀನಿಗೆ ಸಂಬಂಧಿಸಿದ ಪತ್ರ ವ್ಯವಹಾರವನ್ನು ನಮ್ಮೊಂದಿಗೆ ಮಾಡಿ ಎಂದಿದ್ದಾರೆ. ಅನಿತಾ ಕುಮಾರಸ್ವಾಮಿ, ನಿಖಿಲ್ ಅವರು ಪರಿಹಾರಕ್ಕೆ ಅರ್ಜಿ ಹಾಕಿದ್ದಾರೆ ಅಂದಿದ್ದೀರಿ. ಅದನ್ನ ಸಾಬೀತು ಮಾಡಬೇಕಲ್ಲ. ಸಾಬೀತು ಮಾಡದೇ ಯಾಕೆ ತಪ್ಪಿಸಿಕೊಂಡು ಓಡಾಡ್ತಿದ್ದೀರಾ.? ಸರ್ಕಾರ ರೈತರ ಎದೆಮೇಲೆ ಮಣ್ಣು ಹಾಕಲು ಮುಂದಾಗಿದೆ. ಶಾಸಕ ಬಾಲಕೃಷ್ಣ ಶೇ. 80ರಷ್ಟು ರೈತರು ಒಪ್ಪಿಗೆ ನೀಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಭೈರಮಂಗಲ ಸರ್ಕಲ್ ನಲ್ಲಿ ರೈತರ ಸಭೆ ಕರೆಯಿರಿ, ಎಷ್ಟು ರೈತರು ಯಾರ ಪರ ಇದ್ದಾರೆ? ಎಂಬುದು ಗೊತ್ತಾಗುತ್ತದೆ” ಎಂದು ಸವಾಲ್ ಹಾಕಿದರು

ಹೋರಾಟಕ್ಕೆ ಹೆಚ್‍ಡಿಡಿ, ಹೆಚ್‍ಡಿಕೆ: “ಇಂಟಿಗ್ರೇಟೆಡ್ ಟೌನ್‍ಶಿಪ್​ ಯೋಜನೆ ವಿರೋಧಿಸಿ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ. ರೈತರ ಎದೆಯ ಮೇಲೆ ಟೌನ್‍ಶಿಪ್​ ನಿರ್ಮಿಸಲು ಬಿಡುವುದಿಲ್ಲ. ಯೋಜನೆ ಕೈ ಬಿಡದಿದ್ದರೆ ಮುಂದಿನ ದಿನಗಳಲ್ಲಿ ಆಗುವ ರಕ್ತಪಾತಕ್ಕೆ ಸರ್ಕಾರವೇ ನೇರ ಹೊಣೆಯಾಗುತ್ತದೆ. ಈ ಯೋಜನೆಗೆ ಹುಡ್ಕೊದಿಂದ 20 ಸಾವಿರ ಸಾಲು ಮಾಡಿ ಮಾಡು ಹೊರಟಿದ್ದಾರೆ. ಟೌನ್ ಶಿಪ್ ಸರ್ಕಾರದ ನಿಲುವು ಅನ್ನುವುದಾದರೆ ನಾವು ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹೋರಾಟಗಾರರಿಗೆ ಬೆಂಬಲ ಸೂಚಿಸುವ ಸಲುವಾಗಿ ಮಾಜಿ ಪ್ರಧಾನಿ ದೇವೇಗೌಡ ಹಾಗೂ ನಿಖಿಲ್ ಕುಮಾರಸ್ವಾಮಿ ಅವರನ್ನು ಕರೆಸಲಾಗುತ್ತದೆ” ಎಂದು ಎ.ಮಂಜುನಾಥ್ ತಿಳಿಸಿದರು.

“ಇಂಟಿಗ್ರೇಟೆಡ್ ಟೌನ್‍ಶಿಪ್​ ಹೆಸರಿನಲ್ಲಿ ದಕ್ಷ ಅಧಿಕಾರಿಗಳು ಎಂದು ಬಿಂಬಿತರಾದವರು ಭ್ರಷ್ಟಾಚಾರ ನಡೆಸಿದ್ದು, ಈ ಬಗ್ಗೆ ಮಾಹಿತಿ ಇದೆ. ಸೂಕ್ತ ಕಾಲದಲ್ಲಿ ಎಲ್ಲವನ್ನು ತೆರೆದಿಡುತ್ತೇವೆ” ಎಂದು ಎ.ಮಂಜುನಾಥ್ ತಿಳಿಸಿದರು.

Previous articleಜಿಬಿಎ ಚುನಾವಣೆಗೆ ಕಾಂಗ್ರೆಸ್ ಭರದ ಸಿದ್ಧತೆ
Next articleಬಳ್ಳಾರಿ: ಕಾರ್ಪೋರೆಟ್ ಗೋವಿಂದರಾಜು‌ ಮನೆ ಮೇಲೆ ಸಿಬಿಐ ದಾಳಿ

LEAVE A REPLY

Please enter your comment!
Please enter your name here