ಚಾಮರಾಜನಗರ: ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಭಕ್ತರ ದಂಡು

0
51

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಗುರುವಾರ ಮಳೆ ನಡುವೆಯೂ ಭಕ್ತ ಸಾಗರವೇ ಹರಿದು ಬಂದಿತ್ತು.

ಗಣೇಶ ಚತುರ್ಥಿ ಮಾರನೇ ದಿನವಾದ ಹಿನ್ನಲೆ ರಜೆ ಮೇಲೆ ಸ್ವ-ಗ್ರಾಮಗಳಿಗೆ ಬಂದಿದ್ದ ಸುತ್ತಮುತ್ತಲ ಜಿಲ್ಲೆ, ತಾಲೂಕಿನ ನೂರಾರು ಮಂದಿ ಯುವಕರ ತಂಡ ಬೆಟ್ಟಕ್ಕೆ ಭೇಟಿ ನೀಡಿ ಗೋಪಾಲ ಸ್ವಾಮಿ ದರ್ಶನ ಪಡೆದರು.

ರಜೆ ಹಿನ್ನೆಲೆ ಕೇರಳದಿಂದಲೂ ಅಧಿಕ ಮಂದಿ ಭಕ್ತರು ಬೆಟ್ಟಕ್ಕೆ ಲಗ್ಗೆ ಇಟ್ಟಿದ್ದರು. ಮಧ್ಯಾಹ್ನ 12 ಗಂಟೆ ವೇಳೆ ಸಾವಿರಾರು ಮಂದಿ ಆಗಮಿಸಿದ ಪರಿಣಾಮ ಬೆಟ್ಟದ ತಪ್ಪಲಿನಲ್ಲಿ ಸುಮಾರು 2 ಕಿ.ಮೀ.ದೂರದವರೆಗೆ ತುಂತುರು ಮಳೆ ನಡುವೆಯೂ ಛತ್ರಿಗಳನ್ನು ಹಿಡಿದು ಸರತಿ ಸಾಲಿನಲ್ಲಿ ಭಕ್ತರು ನಿಂತಿದ್ದ ದೃಶ್ಯ ಕಂಡುಬಂತು.

ತುಂತುರು ಮಳೆ ನಡುವೆ ಗೋಪಾಲನ ದರ್ಶನ: ಗೋಪಾಲಸ್ವಾಮಿ ಬೆಟ್ಟದಲ್ಲಿ ತುಂತುರು ಮಳೆ ಆಗಾಗ್ಗೆ ಸುರಿಯುತ್ತಿದ್ದ ಪರಿಣಾಮ ಚಳಿಯ ವಾತಾವರಣ ಹೆಚ್ಚಿತ್ತು. ಹೀಗಿದ್ದರೂ ಕೂಡ ಪ್ರವಾಸಿಗರು ಹಾಗೂ ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ದೇವರಿಗೆ ಜಯ ಘೋಷ ಕೂಗುತ್ತ ಗೋಪಾಲನ ದರ್ಶನ ಪಡೆದರು.

ಜೊತೆಗೆ ಸುತ್ತಮುತ್ತಲ ವಾತಾವರಣ ಹಚ್ಚ ಹರಿಸಿರಾಗಿದ್ದ ಪರಿಣಾಮ ಪ್ರಕೃತಿ ಸೌಂದರ್ಯ ಸವಿದು ಸೆಲ್ಫಿ ಮತ್ತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ತಪ್ಪಲಿನಿಂದ ಬೆಟ್ಟಕ್ಕೆ ತೆರಳಲು ಕೆಎಸ್‍ಆರ್‌ಟಿಸಿಯ 15ಕ್ಕೂ ಹೆಚ್ಚು ಬಸ್‍ಗಳನ್ನು ಬಿಡಲಾಗಿತ್ತು.

ಗುಂಡ್ಲುಪೇಟೆಯಿಂದ ಪ್ರವಾಸಿಗರು ತಮ್ಮ ಖಾಸಗಿ ವಾಹನದಲ್ಲೇ ಆಗಮಿಸಿದ್ದರು. ಬೆಟ್ಟದ ತಪ್ಪಲಿನಲ್ಲಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಹೆಚ್ಚು ಭಕ್ತರು ಬೆಟ್ಟಕ್ಕೆ ಆಗಮಿಸುವ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಲಾಗಿತ್ತು.

Previous articleಬೆಳಗಾವಿ: ಶಿಂಧಿಕುರಬೇಟ ಗ್ರಾಪಂ ಅಧ್ಯಕ್ಷೆ, ಉಪಾಧ್ಯಕ್ಷರು ಸೇರಿ 28 ಮಂದಿ ಅನರ್ಹ
Next articleಹುಬ್ಬಳ್ಳಿ-ಜೋಧಪುರ್‌ ನೇರ ರೈಲು, ವೇಳಾಪಟ್ಟಿ

LEAVE A REPLY

Please enter your comment!
Please enter your name here