ದೇವನಹಳ್ಳಿಯಲ್ಲಿ ಮಳೆ ಮತ್ತು ವಾತಾವರಣದಲ್ಲಿ ವೈಪರೀತ್ಯದಿಂದಾಗಿ ಹಾಗೂ ಗುಣಮಟ್ಟದ ಕೊರತೆ, ಬೇಡಿಕೆ ಕಾರಣಗಳಿಂದ ತರಕಾರಿ ದರ ಕುಸಿತವಾಗಿದೆ. ಆದ್ದರಿಂದ ರೈತರು ಚಿಂತೆ ಗೀಡಾಗಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೈತರು ಅಲ್ಪಸ್ವಲ್ಪದ ನೀರಿನಲ್ಲಿ ವಿವಿಧ ತರಕಾರಿ ಬೆಳೆಗಳನ್ನು ಬೆಳೆದು ಜೀವನ ಸಾಗಿಸುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರ ಇರುವುದರಿಂದ ರೈತರ ತಾವು ಬೆಳೆದ ತರಕಾರಿ, ಹಣ್ಣು ಮತ್ತು ಹೂಗಳನ್ನು ಮಾರುಕಟ್ಟೆಗಳಿಗೆ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಸಾವಿರಾರು ರೈತರು ಕೃಷಿ ಅವಲಂಬಿಸಿದ್ದಾರೆ. 69 ಸಾವಿರ ಹೆಕ್ಟೇರ್ ಮುಂಗಾರು ಬಿತ್ತನೆ ಇದ್ದರೆ, 30,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆ ಬೆಳೆಯಲಾಗುತ್ತಿದೆ. ಇದರ ಜೊತೆಗೆ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಪ್ರದೇಶದಲ್ಲಿ ಹೂ ಬೆಳೆ ಹೆಚ್ಚಾಗಿದೆ.
ವಾತಾವರಣ ವೈಪರೀತ್ಯದಿಂದ ಎಲ್ಲಾ ರೀತಿಯ ಬೆಳೆಗಳ ಮೇಲು ಪರಿಣಾಮ ಬೀರಿದೆ. ಬಿತ್ತನೆ ಮಾಡಲಾದ ಬೆಳೆಗಳು ಕೂಡ ಉತ್ತಮ ಇಳುವರಿ ತರುವ ಸಾಧ್ಯತೆ ಕಡಿಮೆ. ಹೂಗಳ ದರವು ಸಹ ಕಡಿಮೆಯಾಗಿದೆ. ದಾಳಿಂಬೆ ಬೆಳೆಯ ಮೇಲೆ ಮಳೆ ಪರಿಣಾಮ ಬೀರಿದೆ. ಪ್ರತಿ ಕೆಜಿಗೆ 60 ರಿಂದ 80 ರೂಪಾಯಿಗೆ ಮಾರಾಟವಾಗುತ್ತಿದೆ. ಇದರಿಂದ ರೈತರು ನಷ್ಟ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ.
30,000ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆಯುವ ತರಕಾರಿಯನ್ನು ಬೆಂಗಳೂರಿನ ನಗರ, ಚಿಕ್ಕಬಳ್ಳಾಪುರ ಮಾರುಕಟ್ಟೆ, ವಿವಿಧ ಜಿಲ್ಲೆ, ವಿವಿಧ ರಾಜ್ಯ, ಸ್ಥಳೀಯ ಎಪಿಎಂಸಿ, ವಿವಿಧ ಕಂಪನಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.
ಆಗಸ್ಟ್ ತಿಂಗಳಲ್ಲಿ ವಾಡಿಕೆ ಮಳೆಗಿಂತ 4 ತಾಲೂಕುಗಳಲ್ಲಿ ಶೇಕಡ 100ಕ್ಕಿಂತ ಹೆಚ್ಚು ಮಳೆಯದ ಪರಿಣಾಮದಿಂದ ತರಕಾರಿ ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಶ್ರಾವಣ ಮಾಸ ಮುಗಿದ ನಂತರ ತರಕಾರಿಗಳ ಬೇಡಿಕೆ ಕುಸಿದಿದೆ. ಮಾರುಕಟ್ಟೆಗೆ ಬರುವ ತರಕಾರಿಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತದೆ. ಬಹುತೇಕ ಎಲ್ಲಾ ತರಕಾರಿ 15-20 ರೂಪಾಯಿಗೆ ಮಾರಾಟವಾಗುತ್ತಿದ್ದು. ರೈತರಿಗೆ ಆತಂಕ ಮನೆ ಮಾಡಿದೆ.
ಪಾತಳಕ್ಕೆ ಟೋಮೋಟೋ ದರ: ಕೆಂಪು ಸುಂದರಿ ಟೋಮೋಟೋ ಬೆಲೆ ಸಹ ಪಾತಾಳಕ್ಕೆ ಇಳಿದಿದೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ 18 ರಿಂದ 20 ಎರಡು ಕೆಜಿ ತೂಗುವ ಟೋಮೇಟೊವನ್ನು ಚೀಲಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಟೋಮೇಟೋ ಚೀಲಗಳಿಗೆ ಸಾಮಾನ್ಯವಾಗಿ 250 ರಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿತ್ತು. ಬೇಡಿಕೆ ಹೆಚ್ಚಿರುವ ಸಂದರ್ಭದಲ್ಲಿ 500 ರೂಪಾಯಿಗೂ ಸಿಗುವುದಿಲ್ಲ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲವು ಬೆಳೆಗೆ ಹಾನಿಯಾಗಿಲ್ಲ. ಉಳಿದಂತೆ ಅನೇಕ ಟೊಮ್ಯಾಟೋ ಮೇಲೆ ಮಚ್ಚೆ ಕಂಡುಬರುತ್ತಿದೆ. ಇದರಿಂದ ಪ್ರತಿ ಚೀಲ ಟೋಮೇಟೋ ಕೇವಲ ನೂರರಿಂದ 120ಗೆ ಮಾರಾಟವಾಗುತ್ತಿದೆ. ಪ್ರತಿ ಕೆಜಿ ಹೇಗೆ 5 ರೂ. ಗಿಂತ ಕಡಿಮೆ ದರ ಸಿಗುತ್ತಿದೆ.
ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ
- ಆಲೂಗಡ್ಡೆ 30
- ಈರುಳ್ಳಿ 25 ರಿಂದ 30
- ಟೋಮೋಟೋ 15
- ಬೀನ್ಸ್ 40
- ಎಲೆಕೋಸು 20
- ಮೂಲಂಗಿ 20
- ಹೀರೆಕಾಯಿ 40
- ಕ್ಯಾಪ್ಸಿಕಂ 60
- ಕ್ಯಾರೆಟ್ 60 ರೂ ಗಳಿಗೆ ಮಾರಾಟವಾಗುತ್ತಿದೆ.
ತರಕಾರಿ ವ್ಯಾಪಾರಿ ಆನಂದ್ ಮಾತನಾಡಿ,”ಮಾರುಕಟ್ಟೆಗಳಿಂದ ತರಕಾರಿ ಸಮರ್ಪಕವಾಗಿ ಬರುತ್ತಿಲ್ಲ. ತರಕಾರಿಗಳು ಬೆಲೆ ಇಳಿಕೆ ಕಂಡಿದೆ. ವಿವಿಧ ಮಾರುಕಟ್ಟೆಗಳಿಂದ ತರಕಾರಿಯನ್ನು ತೆಗೆದುಕೊಂಡು ಬರುತ್ತಿದ್ದೇವೆ” ಎಂದು ಹೇಳದ್ದಾರೆ.
“ಮಳೆ ಮತ್ತು ಇತರೆ ಸಮಸ್ಯೆಗಳಿಂದ ತರಕಾರಿ ಬೆಳೆಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ತರಕಾರಿ ಬೆಳೆಗೆ ತಾವು ಹಾಕಿದ ಬಂಡವಾಳವು ಸಹ ಬಾರದ ರೀತಿ ಆಗಿದೆ. ಸಾಲ ಹೊಲ ಮಾಡಿ ತರಕಾರಿ ಬೆಳೆದರೂ ಸಹ ಬೆಲೆ ಇಲ್ಲದಿರುವುದು ನಮ್ಮ ನಿದ್ದೆ ಕೆಡಿಸಿದೆ” ಎಂದು ರೈತ ಮಂಜುನಾಥ್ ಹೇಳಿದ್ದಾರೆ.