ಕೂಡಲಸಂಗಮದಲ್ಲೇ ಮೂಲಪೀಠ, ಭಕ್ತರು ಬಯಸಿದ ಕಡೆ ಶಾಖಾಮಠ

0
54

ಬಾಗಲಕೋಟೆ: ಲಿಂಗಾಯತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲಸಂಗಮದಲ್ಲಿ ನೂತನ ಮಠ ಸ್ಥಾಪನೆಗೆ ಸಂಬಂಧಿಸಿದಂತೆ ಶೀಘ್ರದಲ್ಲಿ ರಾಜ್ಯಮಟ್ಟದ ಭಕ್ತರ ಸಮಾವೇಶ ಸಂಘಟಿಸಲು ಸೋಮವಾರ ನಡೆದ ಪ್ರಮುಖ ನಾಯಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಶಾಸಕರಾದ ಸಿ.ಸಿ. ಪಾಟೀಲ, ಅರವಿಂದ ಬೆಲ್ಲದ ಸಿದ್ದು ಸವದಿ, ಮಾಜಿ ಶಾಸಕ ಎಚ್.ಎಸ್. ಶಿವಶಂಕರ ನೇತೃತ್ವದಲ್ಲಿ ಕೂಡಲ ಸಂಗಮದ ಯಾತ್ರಿ ನಿವಾಸದಲ್ಲಿ ಜರುಗಿದ ಸಭೆಯಲ್ಲಿ ಮುಂದಿನ ಹಂತದಲ್ಲಿ ಭಕ್ತರ ಸಭೆಯನ್ನು ನಡೆಸಿ ನಂತರ ಸಮಾವೇಶವನ್ನೂ ಸಂಘಟಿಸುವ ಬಗ್ಗೆ ಚರ್ಚಿಸಲಾಯಿತು.

ಕೂಡಲಸಂಗಮದಲ್ಲೇ ಮೂಲ ಪೀಠವಿರಲಿದೆ. ಭಕ್ತರು ಬಯಸಿದ ಕಡೆಗಳಲ್ಲಿ ಶಾಖಾಮಠಗಳನ್ನು ತೆರೆಯಲಾಗುತ್ತದೆ ಎಂದು ಸ್ವಾಮೀಜಿ ತಿಳಿಸಿದರು. ಭಕ್ತರ ಸಭೆಯನ್ನು ಬಾಗಲಕೋಟೆಯಲ್ಲಿಯೇ ಸಂಘಟಿಸುವ ಬಗ್ಗೆ ಚಿಂತನೆಯಿದ್ದು, ಸಭೆಯ ಸ್ಥಳ, ದಿನಾಂಕಗಳನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ ಎಂದು ವಿವರಿಸಿದರು.

ಸಭೆ ಕುರಿತಾಗಿ ಮಾಜಿ ಸಚಿವ ಸಿ.ಸಿ. ಪಾಟೀಲ ಮಾಹಿತಿ ನೀಡಿ, ಸ್ವಾಮೀಜಿ 2ಎ ಮೀಸಲಾತಿ ವಿಷಯದಲ್ಲಿ ಕ್ರಾಂತಿಕಾರಿ ಹೋರಾಟ ನಡೆಸಿದ್ದಾರೆ. ಇಂದು ಪ್ರಮುಖರ ಸಭೆಯನ್ನಷ್ಟೇ ನಡೆಸಲಾಗಿದೆ. ಕೆಲವೇ ಜನ ತೀರ್ಮಾನ ತೆಗೆದುಕೊಳ್ಳುವುದು ಆಗಬಾರದು. ಹಳೆ ಮೈಸೂರು ಭಾಗವೂ ಸೇರಿದಂತೆ ಉತ್ತರ ಕರ್ನಾಟಕದ ಜನ ಭಾಗವಹಿಸುವ ನಿಟ್ಟಿನಲ್ಲಿ ಕೇಂದ್ರ ಸ್ಥಳವಾಗುವ ಹುಬ್ಬಳ್ಳಿ ಅಥವಾ ಬಾಗಲಕೋಟೆಯಲ್ಲಿ ಬೃಹತ್ ಸಭೆಯನ್ನು ನಡೆಸಲಾಗುವುದು. ಅಲ್ಲಿ ಭಕ್ತರ ಅಭಿಪ್ರಾಯವನ್ನು ಆಲಿಸಲಾಗುವುದು ಎಂದು ಹೇಳಿದರು.

ಯತ್ನಾಳ ಗೈರು: ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅವರು ಸಭೆಗೆ ಗೈರಾದರು. ಜ್ವರದಿಂದ ಬಳಲುತ್ತಿದ್ದ ಕಾರಣ ಅವರು ವಿಶ್ರಾಂತಿಯಲ್ಲಿದ್ದಿದ್ದರಿಂದ ಅವರು ಸಭೆಗೆ ಬರಲು ಸಾಧ್ಯವಾಗಿಲ್ಲ ಎಂದು ಮುಖಂಡರು ಮಾಧ್ಯಮಗಳಿಗೆ ತಿಳಿಸಿದರು.

Previous articleಗಡಿಪಾರು: ಮಧ್ಯಂತರ ತಡೆ ಕೋರಿ ಹೈಕೊರ್ಟ್‌ಗೆ ತಿಮರೋಡಿ
Next articleಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಇಂಗ್ಲೆಂಡ್‌ನ ವೋಕ್ಸ್

LEAVE A REPLY

Please enter your comment!
Please enter your name here