ಶಿವಯೋಗಿ ಕಾಗಿನೆಲ್ಲಿ
ಹಾವೇರಿ(ಗುತ್ತಲ): ದೇಶಕ್ಕಾಗಿ ಹಗಲಿರಲು ಹೋರಾಡಿದ ರಾಷ್ಟ್ರಪಿತ ಗಾಂಧೀಜಿ ಆಶಯದಂತೆಯೇ ಇಂದಿಗೂ ಹೊಸರಿತ್ತಿಯ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ `ಗಾಂಧಿ ಗ್ರಾಮೀಣ ಗುರುಕುಲ’ ಕಾರ್ಯನಿರ್ವಹಿಸುತ್ತಿದೆ. ಈ ಶಾಲೆಯ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಜೀವನ ಪಾಠ ಕಲಿಸಿ ಸ್ವಾವಲಂಬಿ ಬದುಕಿಗೆ ಬುನಾದಿ ಹಾಕುತ್ತಾರೆ.
ಗಾಂಧೀಜಿಯವರ ಶಿಕ್ಷಣದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಈ ಗುರುಕುಲ ಕಳೆದ ನಾಲ್ಕು ದಶಕದಿಂದ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಪ್ರತಿಭಾನ್ವಿತ ೨೪೦ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಯು ರಾಜ್ಯದ ಬಡಜನತೆಯ ಆಶಾಕಿರಣವಾಗಿದೆ.
ಗಾಂಧಿವಾದಿ ಗುದ್ಲೆಪ್ಪ ಹಳ್ಳಿಕೇರಿ ಕನಸು: ಅಪ್ಪಟ ಗಾಂಧಿ ಅನುಯಾಯಿ, ಸ್ವಾತಂತ್ರ್ಯ ಹೋರಾಟಗಾರ ಹೊಸರಿತ್ತಿಯ ಗುದ್ಲೇಪ್ಪ ಹಳ್ಳಿಕೇರಿ ಗಾಂಧೀಜಿ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಹಿನ್ನೆಲೆ ನಾಡ ರಾಷ್ಟ್ರೀಯ ಶಿಕ್ಷಣ ಸಮಿತಿ ಸ್ಥಾಪಿಸಿದರು. ಆ ಮೂಲಕ ಮಕ್ಕಳಿಗೆ ಗುರುಕುಲ ಶಿಕ್ಷಣ ನೀಡಬೇಕೆಂಬ ಅಭಿಲಾಷೆಯಿಂದ ಗಾಂಧಿ ಗ್ರಾಮೀಣ ಗುರುಕುಲ ಶಾಲೆ ಜನ್ಮ ತಾಳಿತು. ಅವರ ಹಿರಿಯ ಪುತ್ರ ಡಾ. ದೀನಬಂಧು ಹಳ್ಳಿಕೇರಿ ಹಾಗೂ ಅಭಿಮಾನಿಗಳು ಮತ್ತು ಸಾರ್ವಜನಿಕರು ನೀಡಿದ ಸಹಕಾರದೊಂದಿಗೆ ೩೨ ಎಕರೆ ಜಮೀನಿನಲ್ಲಿ ಆಗಿನ ಶಿಕ್ಷಣ ಮಂತ್ರಿ ಎಸ್.ಆರ್. ಕಂಠಿ ನೇತೃತ್ವದಲ್ಲಿ ಗುರುಕುಲದ ಸಮಗ್ರ ನೀಲ ನಕ್ಷೆ ತಯಾರಿಸಲಾಯಿತು.
ಶಿಕ್ಷಣತಜ್ಞ ಮ.ಗು. ಹಂದ್ರಾಳ, ಕೊಲ್ಕತ್ತಾದ ರವೀಂದ್ರನಾಥ ಠಾಗೋರರ ಶಾಂತಿ ನಿಕೇತನ, ಶ್ರೀನಿಕೇತನ, ರಾಮಕೃಷ್ಣ ಆಶ್ರಮ ಮಾದರಿಯ ಶಾಲಾ ಕಟ್ಟಡ ಹಾಗೂ ವಸತಿ ನಿಲಯಗಳನ್ನು ತ್ವರಿತಗತಿಯಲ್ಲಿ ನಿರ್ಮಿಸಿದರು. ೧೯೮೪ ಅಕ್ಟೋಬರ ೨ರ ಗಾಂಧಿಜೀಯವರ ಹುಟ್ಟಿದ ದಿನದಂದೇ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಯಿತು.
ಜೀವನ ಪಾಠ ಬೋಧನೆ: ಶಾಲೆಯಲ್ಲಿ ಮಕ್ಕಳಿಗೆ ಉಚಿತವಾಗಿ ರಾಜ್ಯ ಶಿಕ್ಷಣದ ಪಠ್ಯದ ಜೊತೆಗೆ ಕೃಷಿ, ಹೈನುಗಾರಿಕೆ, ರೇಷ್ಮೆ, ತೋಟಗಾರಿಕೆ, ಸಾವಯವ ಕೃಷಿ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ರಾಷ್ಟೀಯ ಪುರಸ್ಕಾರ ಪಡೆದಿದ್ದಾರೆ. ಇಲ್ಲಿನ ಶಿಕ್ಷಣ ಪದ್ದತಿ ಹಾಗೂ ಶಿಕ್ಷಕರ ಪರಿಶ್ರಮ ಇದಕ್ಕೆ ಕಾರಣವಾಗಿದೆ. ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗುವ ನೈಸರ್ಗಿಕ ಕೃಷಿಯ ಬಗ್ಗೆ ಪಾಠ ಹೇಳಲಾಗುತ್ತಿದೆ. ಸ್ವತಃ ವಿದ್ಯಾರ್ಥಿಗಳೇ ಕೃಷಿಯಲ್ಲಿ ತೊಡಗುತ್ತಾರೆ.
ಹೈನುಗಾರಿಕೆಯ ಕುರಿತು ಸಹ ಪಾಠ ಪಡೆಯುವ ಮಕ್ಕಳು ಜಾನುವಾರುಗಳ ಬಗೆಗೆ ಮಾಹಿತಿ ಪಡೆಯುತ್ತಿದ್ದಾರೆ. ಹಳ್ಳಿಕೇರಿ ಪ್ರತಿಷ್ಠಾನದ ಪ್ರಧಾನ ಧರ್ಮದರ್ಶಿ ರಾಜೇಂದ್ರ ಪ್ರಸಾದ. ಧರ್ಮದರ್ಶಿಗಳಾದ ವೀರಣ್ಣ ಚಕ್ಕಿ, ಗುದ್ಲೇಶ ಹಳ್ಳಿಕೇರಿ, ಪ್ರಭುಲಿಂಗಪ್ಪ ಗೌರಿಮನಿ, ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಾರ್ಯಧ್ಯಕ್ಷ ರಮೇಶ ಏಕಭೋಟೆ, ಪ್ರತಿಷ್ಠಾನದ ಕಾರ್ಯದರ್ಶಿ ಗಿರೀಶ ಅಂಕಲಕೋಟೆ ಹಾಗೂ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂಧಿ ವರ್ಗ ವಿದ್ಯಾರ್ಥಿಗಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಮಕ್ಕಳ ಸಹ ಭೋಜನ, ಬೆಳಗಿನ ಸಂಜೆಯ ಪ್ರಾರ್ಥನೆ, ಸಾವಯುವ ಕೃಷಿಯಲ್ಲಿನ ಜ್ಞಾನ, ಸ್ವತಃ ವಿಜ್ಞಾನ ಮಾದರಿಗಳನ್ನು ತಯಾರಿಸಿ ಪ್ರದರ್ಶನ ಮಾಡುವ ರೀತಿ ಜನ ಮನ್ನಣೆ ಪಡೆದಿವೆ.