ಭೋಪಾಲ್/ಜೈಪುರ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕೆಮ್ಮಿನ ಸಿರಪ್ ಸೇವಿಸಿದ ಪರಿಣಾಮ 11 ಕಂದಮ್ಮಗಳು ಸಾವನ್ನಪ್ಪಿರುವ ದುರ್ಘಟನೆ ದೇಶಾದ್ಯಂತ ಆತಂಕದ ವಾತಾವರಣವನ್ನು ಉಂಟುಮಾಡಿದೆ. ಸಣ್ಣ ಕೆಮ್ಮು ಮತ್ತು ಶೀತ ನಿವಾರಣೆಗೆ ನೀಡಿದ್ದ ಔಷಧಿಯೇ ಮಕ್ಕಳ ಪ್ರಾಣ ಕಿತ್ತುಕೊಂಡಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಎಚ್ಚರಿಕೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಘಟನೆ ವಿವರಗಳು: ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯ ವಿವಿಧ ಭಾಗಗಳಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್ ಜಿಲ್ಲೆಗಳಲ್ಲಿ ತಲಾ ಒಬ್ಬ ಮಗು ಮೃತಪಟ್ಟಿರುವುದು ದೃಢವಾಗಿದೆ. ಮೃತ ಮಕ್ಕಳ ವಯಸ್ಸು ಎರಡು ವರ್ಷಕ್ಕಿಂತ ಕಡಿಮೆ ಹಾಗೂ ಐದು ವರ್ಷದೊಳಗಿನವರಾಗಿವೆ. ಈ ಮಕ್ಕಳು “ಕೋಲ್ಡ್ರಿಫ್” ಮತ್ತು “ನೆಕ್ಸ್ಟ್ರೋ-ಡಿಎಸ್” ಎಂಬ ಎರಡು ಸಿರಪ್‌ಗಳನ್ನು ಸೇವಿಸಿದ್ದರೆಂದು ಪೋಷಕರು ತಿಳಿಸಿದ್ದಾರೆ.
ಸಿರಪ್ ಸೇವಿಸಿದ ಕೆಲ ಗಂಟೆಗಳಲ್ಲೇ ಮಕ್ಕಳಿಗೆ ಮೂತ್ರ ವಿಸರ್ಜನೆ ನಿಲ್ಲಿ, ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯ ಲಕ್ಷಣಗಳು ಕಾಣಿಸಿಕೊಂಡು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕಂಪನಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ: ಈ ಘಟನೆಗಳ ಬೆನ್ನಲ್ಲೇ ರಾಜಸ್ಥಾನ ಸರ್ಕಾರ ತುರ್ತು ಕ್ರಮ ಕೈಗೊಂಡಿದ್ದು, ಕೇಸನ್ಸ್ ಫಾರ್ಮಾ ಕಂಪನಿ ತಯಾರಿಸಿದ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ರಾಜ್ಯದ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಲಾಗಿದೆ.
ರಾಜ್ಯ ಸರ್ಕಾರ ಘಟನೆಯ ತನಿಖೆಗೆ ವಿಶೇಷ ಸಮಿತಿ ರಚಿಸಿದ್ದು, ಕೇಸನ್ಸ್ ಫಾರ್ಮಾ ಕಂಪನಿಯ ಉತ್ಪಾದನಾ ಘಟಕದಿಂದ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆ ನಡೆಸುವಂತೆ ಸೂಚಿಸಿದೆ. ಮಧ್ಯಪ್ರದೇಶದಲ್ಲಿಯೂ ಇದೇ ರೀತಿಯ ಕ್ರಮ ಕೈಗೊಳ್ಳಲಾಗಿದ್ದು, ಸಿರಪ್ ಮಾದರಿಗಳನ್ನು ಕೇಂದ್ರ ಔಷಧಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಕೇಂದ್ರ ಆರೋಗ್ಯ ಇಲಾಖೆಯ ಎಚ್ಚರಿಕೆ: ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಪತ್ರ ಬರೆದು ಎಚ್ಚರಿಕೆ ನೀಡಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಐದು ವರ್ಷದೊಳಗಿನ ಮಕ್ಕಳಿಗೆ ತೀರಾ ಅಗತ್ಯವಿದ್ದರೆ ಮಾತ್ರ, ವೈದ್ಯರ ಸಲಹೆಯಂತೆ ಹಾಗೂ ಸೂಕ್ತ ಪ್ರಮಾಣದಲ್ಲಿ ಮಾತ್ರ ಸಿರಪ್ ನೀಡಬೇಕು ಎಂದು ಸೂಚಿಸಲಾಗಿದೆ.
ಭಾರತದಲ್ಲಿ ಸಿರಪ್ ವಿವಾದಗಳು: ಇದಕ್ಕೂ ಮುನ್ನ ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನ ದೇಶಗಳಲ್ಲಿ ಭಾರತೀಯ ಕಂಪನಿಗಳ ತಯಾರಿಸಿದ ಕೆಮ್ಮಿನ ಸಿರಪ್‌ಗಳಿಂದ ಮಕ್ಕಳ ಸಾವು ಸಂಭವಿಸಿದ್ದ ಘಟನೆಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದವು. ಈಗ ದೇಶದಲ್ಲಿಯೇ ಇದೇ ರೀತಿಯ ಘಟನೆ ವರದಿಯಾಗಿರುವುದು ಆರೋಗ್ಯ ಇಲಾಖೆಗೆ ಮತ್ತೊಂದು ಎಚ್ಚರಿಕೆಯ ಘಂಟೆ ಆಗಿದೆ. ಈ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತುರ್ತು ಎಚ್ಚರಿಕೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಧ್ಯಪ್ರದೇಶ–ರಾಜಸ್ಥಾನ ಘಟನೆಯು ಭಾರತದಲ್ಲಿ ಔಷಧಿ ಸುರಕ್ಷತಾ ವ್ಯವಸ್ಥೆಯ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಬಡ ಕುಟುಂಬಗಳ ಮಕ್ಕಳ ಜೀವ ಕಳೆದುಕೊಂಡಿರುವ ಈ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಹಾಗೂ ಸಾಮಾಜಿಕ ಸಂಘಟನೆಗಳು ಆಗ್ರಹಿಸುತ್ತಿವೆ.