ಕೆಮ್ಮಿನ ಸಿರಪ್‌ನಿಂದ ಮಕ್ಕಳ ಸಾವು: ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ

0
41

ದೇಶದ ವಿವಿಧೆಡೆ ಕೆಮ್ಮಿನ ಸಿರಪ್ ಸೇವನೆಯಿಂದ ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಹಾಗೂ ಸಾವುಗಳು ವರದಿಯಾದ ಬೆನ್ನಲ್ಲೇ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಹತ್ವದ ಎಚ್ಚರಿಕೆ ಹಾಗೂ ಮಾರ್ಗಸೂಚಿಗಳನ್ನು ಹೊರಡಿಸಿದೆ.

ವಿಷಕಾರಿ ರಾಸಾಯನಿಕಯುಕ್ತ ಸಿರಪ್‌ಗಳಿಂದಾಗಿ ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ 14 ಮಕ್ಕಳು ಮೃತಪಟ್ಟ ಘಟನೆಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪೋಷಕರು ಮತ್ತು ಸಾರ್ವಜನಿಕರು ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಇಲಾಖೆ ಮನವಿ ಮಾಡಿದೆ.

ಪ್ರಮುಖ ಮಾರ್ಗಸೂಚಿಗಳು ಹೀಗಿವೆ:

ಎರಡು ವರ್ಷದೊಳಗಿನ ಮಕ್ಕಳಿಗೆ ಸಿರಪ್ ಬೇಡ: 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು ಅಥವಾ ನೆಗಡಿ ಸಿರಪ್‌ಗಳನ್ನು ಯಾವುದೇ ಕಾರಣಕ್ಕೂ ನೀಡಬಾರದು. 2 ರಿಂದ 5 ವರ್ಷದ ಮಕ್ಕಳಿಗೆ ತಜ್ಞ ವೈದ್ಯರ ಪರೀಕ್ಷೆ ಮತ್ತು ನಿರ್ದಿಷ್ಟ ಸಲಹೆಯ ನಂತರವೇ ಔಷಧಿಗಳನ್ನು ನೀಡಬೇಕು.

ಸಂಯೋಜಿತ ಔಷಧಿಗಳ ದುರ್ಬಳಕೆ ಬೇಡ: ಹಿರಿಯ ಮಕ್ಕಳಲ್ಲಿ ಕೆಮ್ಮಿನ ಸಿರಪ್‌ಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ, ಕನಿಷ್ಠ ಅವಧಿ ಹಾಗೂ ಡೋಸ್‌ನಲ್ಲಿ ಬಳಸಬೇಕು. ವಿಶೇಷವಾಗಿ, ಒಂದಕ್ಕಿಂತ ಹೆಚ್ಚು ಔಷಧಿಗಳ ಸಂಯೋಜನೆ ಇರುವ ಸಿರಪ್‌ಗಳನ್ನು ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇಂತಹ ಸಿರಪ್‌ಗಳು ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ಎಂದು ಇಲಾಖೆ ಎಚ್ಚರಿಸಿದೆ.

ಸುರಕ್ಷಿತ ಮನೆಮದ್ದುಗಳಿಗೆ ಒತ್ತು: ಹೆಚ್ಚಿನ ಮಕ್ಕಳಲ್ಲಿ ಕೆಮ್ಮು ಮತ್ತು ಶೀತ ಸೌಮ್ಯವಾಗಿದ್ದು, ಸುರಕ್ಷಿತ ಮನೆಮದ್ದುಗಳಿಂದ ಗುಣಮುಖವಾಗುತ್ತವೆ. ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದು, ವಿಶ್ರಾಂತಿ ಮತ್ತು ನಿದ್ರೆಗೆ ಅವಕಾಶ ನೀಡುವುದು, ಹಾಗೂ ಪೌಷ್ಟಿಕ ಆಹಾರ ನೀಡುವುದು ಉತ್ತಮ ಪರಿಹಾರ.

ಸ್ವಯಂ ಔಷಧೋಪಚಾರ ಅಪಾಯಕಾರಿ: ವೈದ್ಯರ ಪ್ರಿಸ್ಕ್ರಿಪ್ಟನ್ ಇಲ್ಲದೆ ಕೆಮ್ಮಿನ ಸಿರಪ್‌ಗಳನ್ನು ಖರೀದಿಸುವುದು ಅಥವಾ ಬಳಸುವುದನ್ನು ಕಟ್ಟುನಿಟ್ಟಾಗಿ ನಿಲ್ಲಿಸಬೇಕು. ಉಳಿದ ಔಷಧಿಗಳು ಅಥವಾ ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸಬಾರದು. ಅಲ್ಲದೆ, ಔಷಧಿಗಳ ಅವಧಿ ಮುಗಿಯುವ ದಿನಾಂಕಗಳನ್ನು ಕಡ್ಡಾಯವಾಗಿ ಪರಿಶೀಲಿಸಲು ಮತ್ತು ಲೇಬಲ್‌ಗಳನ್ನು ಎಚ್ಚರಿಕೆಯಿಂದ ಓದಲು ಸೂಚಿಸಲಾಗಿದೆ.

ವೈದ್ಯರ ಸಲಹೆ ಪಡೆಯಬೇಕಾದ ಲಕ್ಷಣಗಳು: ಮಕ್ಕಳಲ್ಲಿ ಉಸಿರಾಟದ ತೊಂದರೆ, ವೇಗವಾಗಿ ಉಸಿರಾಟ, ನಿರಂತರ ಕೆಮ್ಮು, ಅತಿಯಾದ ಜ್ವರ, ಆಹಾರ ತಿರಸ್ಕರಿಸುವುದು, ನಿದ್ರಾವಸ್ಥೆ ಅಥವಾ ಅಸಹಜ ಪ್ರತಿಕ್ರಿಯೆಗಳು ಕಂಡುಬಂದಲ್ಲಿ ತಕ್ಷಣ ಹತ್ತಿರದ ಆರೋಗ್ಯ ಕೇಂದ್ರಗಳನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ನಿರ್ದೇಶನ ನೀಡಿದೆ.

Previous articleಮಾರ್ಕ್ ಮೊದಲ ಹಾಡಿನ ಸ್ಪಾರ್ಕ್
Next articleವಕೀಲರಿಂದ ಶೂ ಎಸೆಯುವ ಯತ್ನ: ನನ್ನ ಮೇಲೆ ಪರಿಣಾಮ ಬೀರುವುದಿಲ್ಲ ಗವಾಯಿ

LEAVE A REPLY

Please enter your comment!
Please enter your name here