ಮೋದಿ ಹುಟ್ಟುಹಬ್ಬ ಸ್ಪೆಷಲ್ ಗಿಫ್ಟ್‌ ಕೊಟ್ಟ ಮೆಸ್ಸಿ

0
42

ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಜನ್ಮದಿನದ ಸಂಭ್ರಮಕ್ಕೆ ವಿಶ್ವದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ. ಈ ವಿಶೇಷ ಸಂದರ್ಭದಲ್ಲಿ, ಫುಟ್ಬಾಲ್ ಲೋಕದ ಐಕಾನ್, ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಿಯೋನೆಲ್ ಮೆಸ್ಸಿ ಅವರು ಪ್ರಧಾನಿ ಮೋದಿಗೆ ಅತ್ಯಮೂಲ್ಯ ಉಡುಗೊರೆಯೊಂದನ್ನು ಕಳುಹಿಸಿಕೊಟ್ಟಿದ್ದಾರೆ.

2022ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ತಂಡವನ್ನು ವಿಜಯ ಪಥದತ್ತ ಮುನ್ನಡೆಸಿದ ಐತಿಹಾಸಿಕ ಜರ್ಸಿಗೆ ಸ್ವತಃ ಮೆಸ್ಸಿ ಸಹಿ ಹಾಕಿ ಮೋದಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಕುರಿತು GAOT ಟೂರ್ನಿಯ ಆಯೋಜಕ ಸತದ್ರು ದತ್ತಾ ಅವರು ಮಾಹಿತಿ ನೀಡಿದ್ದು, ಇದು ಭಾರತ ಮತ್ತು ಅರ್ಜೆಂಟೀನಾ ನಡುವಿನ ಕ್ರೀಡಾ ಸಂಬಂಧಕ್ಕೆ ಹೊಸ ಆಯಾಮ ನೀಡಿದೆ.

ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ: ಈ ವರ್ಷ ಡಿಸೆಂಬರ್‌ನಲ್ಲಿ ಲಿಯೋನೆಲ್ ಮೆಸ್ಸಿ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಡಿಸೆಂಬರ್ 13ರಂದು ಕೋಲ್ಕತ್ತಾದಿಂದ ತಮ್ಮ ಭಾರತ ಪ್ರವಾಸವನ್ನು ಆರಂಭಿಸಲಿರುವ ಮೆಸ್ಸಿ, ನಂತರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ನಗರಿ ಮುಂಬೈನಲ್ಲಿ ಅಭಿಮಾನಿಗಳನ್ನು ಭೇಟಿಯಾಗಲಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣ ಮತ್ತು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅವರಿಗೆ ಭವ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. “ಮೆಸ್ಸಿ ಭಾರತಕ್ಕೆ ಬಂದಾಗ, ಅವರ ಭೇಟಿಯನ್ನು ಪ್ರಧಾನಿಯವರೊಂದಿಗೆ ಏರ್ಪಡಿಸಲು ನಾವು ಪ್ರಯತ್ನಿಸುತ್ತೇವೆ” ಎಂದು ದತ್ತಾ ಹೇಳಿದ್ದಾರೆ.

ಇದಲ್ಲದೆ, ನವೆಂಬರ್‌ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಭಾರತದಲ್ಲಿ ಅಂತರರಾಷ್ಟ್ರೀಯ ಸೌಹಾರ್ದ ಫುಟ್ಬಾಲ್ ಪಂದ್ಯವನ್ನು ಆಡುವ ಸಾಧ್ಯತೆಯಿದೆ. ಈ ಪಂದ್ಯವು ಕೇರಳದಲ್ಲಿ ನಡೆಯಲಿದ್ದು, ಆತಿಥೇಯ ನಗರ ಮತ್ತು ಎದುರಾಳಿ ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.

ಮೆಸ್ಸಿ ಭಾರತಕ್ಕೆ ಭೇಟಿ ನೀಡುವುದು ಇದು ಎರಡನೇ ಬಾರಿಯಾಗಲಿದೆ. 2011ರಲ್ಲಿ ಅವರು ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ವೆನೆಜುವೆಲಾ ವಿರುದ್ಧ ಆಡಿದ್ದರು. ಈ ಬಾರಿಯ ಭೇಟಿ ಭಾರತದ ಫುಟ್ಬಾಲ್ ಅಭಿಮಾನಿಗಳಲ್ಲಿ ಅಗಾಧ ಉತ್ಸಾಹ ಮೂಡಿಸಿದೆ.

Previous articleಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೊಸ ವೇಗ
Next articleಮೂಡುಬಿದಿರೆ: ಟ್ರಕ್ಕಿಂಗ್ ವೇಳೆ ಹೃದಯಾಘಾತದಿಂದ ಯುವಕ ಸಾವು

LEAVE A REPLY

Please enter your comment!
Please enter your name here