ಸಮೀಕ್ಷೆ: ಜಿಲ್ಲಾವಾರು ಪ್ರತಿ ದಿನ ಶೇ10ರಷ್ಟು ಗುರಿ ಸಾಧಿಸಿ – ಸಿಎಂ

0
89

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರ ಕೈಗೆತ್ತಿಕೊಂಡಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಗತಿಯಲ್ಲಿ ಸಾಗುತ್ತಿದೆ. ರಾಜ್ಯದ ಒಟ್ಟು 1,43,81,702 ಕುಟುಂಬಗಳ ಸಮೀಕ್ಷಾ ಕಾರ್ಯವನ್ನು ಅಕ್ಟೋಬರ್ 7ರವರೆಗೆ ಸಂಪೂರ್ಣವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಈವರೆಗೆ ರಾಜ್ಯದ 2,76,016 ಕುಟುಂಬಗಳ ಸಮೀಕ್ಷೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಮೀಕ್ಷಾ ಕಾರ್ಯವನ್ನು ಪ್ರಭಾವಿ ಮತ್ತು ವೇಗವಾಗಿ ನಡೆಸಲು 1,20,728 ಗಣತಿದಾರರು ನಿಯೋಜಿಸಲಾಗಿದ್ದು, 1,22,085 ಗಣತಿ ಬ್ಲಾಕ್‌ಗಳು ಗುರುತಿಸಲಾಗಿದೆ.

ಸಮೀಕ್ಷಾ ಕಾರ್ಯದ ಪ್ರಗತಿ ಪರಿಶೀಲನೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಬೆಂಗಳೂರಿನಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಸಮೀಕ್ಷಾ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿ ಬಳಿಕ ಮಾತನಾಡಿದ ಅವರು ಸಮೀಕ್ಷೆ ಆರಂಭದಲ್ಲಿ ತಾಂತ್ರಿಕ ಅಡಚಣೆಗಳಿಂದ ಕಾರ್ಯ ನಿಧಾನಗೊಂಡಿತ್ತು. ಈಗ ಎಲ್ಲಾ ತಾಂತ್ರಿಕ ಸಮಸ್ಯೆಗಳು ಬಗೆಹರಿಸಲಾಗಿದೆ ಮತ್ತು ಸಮೀಕ್ಷೆ ಚುರುಕಾಗಿ ನಡೆಯುತ್ತಿದೆ. ಸಮೀಕ್ಷಾ ಕಾರ್ಯದಲ್ಲಿ ಯಾವುದೇ ತೊಂದರೆ ಉಂಟಾದರೆ, ಅದನ್ನು ತಕ್ಷಣ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಿದ್ಧರಿರಬೇಕು. ಸಮೀಕ್ಷೆಗೆ ಎಲ್ಲಾ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸಬೇಕು.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ನೇರವಾಗಿ ತೊಡಗಿಸಿಕೊಳ್ಳಬೇಕು. ಗೌರವಧನವನ್ನು ಎಲ್ಲ ಭಾಗವಹಿಸುವ ಶಿಕ್ಷಕರಿಗೆ ಈಗಾಗಲೇ ಬಿಡುಗಡೆ ಮಾಡಲಾಗಿದೆ. ಯಾವುದೇ ಶಿಕ್ಷಕರು ಕಾರ್ಯದಲ್ಲಿ ಅಸಹಕಾರ ತೋರಿದರೆ ಅಥವಾ ನಿರ್ಲಕ್ಷ್ಯ ವಹಿಸಿದರೆ, ಕಾನೂನು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಪ್ರತಿ ದಿನ ಜಿಲ್ಲಾವಾರು ಕನಿಷ್ಠ 10% ಸಮೀಕ್ಷೆ ಗುರಿ ಸಾಧಿಸುವಂತೆ ನಿರ್ದೇಶನ ನೀಡಲಾಗಿದೆ. ಪ್ರಾದೇಶಿಕ ಆಯುಕ್ತರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಪ್ರಗತಿಯನ್ನು ನಿರಂತರ ಪರಿಶೀಲಿಸಬೇಕು.

ಸಮೀಕ್ಷೆ ವಿಳಂಬವಾಗದೇ, ಎಲ್ಲ ಜವಾಬ್ದಾರಿಯುತ ಸಿಬ್ಬಂದಿ ನಿಗದಿತ ಅವಧಿಯೊಳಗೆ ಕಾರ್ಯ ಪೂರ್ಣಗೊಳಿಸಬೇಕು. ಸರ್ಕಾರ ಈ ಸಮೀಕ್ಷೆಯ ಮೂಲಕ ಪ್ರತಿಯೊಬ್ಬ ಕುಟುಂಬದ ಅಸ್ತಿತ್ವ, ಸಾಮಾಜಿಕ ಮತ್ತು ಆರ್ಥಿಕ ಮಾಹಿತಿ ಸಂಗ್ರಹಿಸಿ, ಮುಂದಿನ ತೀರ್ಮಾನಗಳಲ್ಲಿ ಸಮರ್ಪಕ ನೀತಿಗಳನ್ನು ರೂಪಿಸಲು ಉದ್ದೇಶಿಸಿದೆ.

ಸಮೀಕ್ಷಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಶಿಕ್ಷಕರಿಗೆ ಗೌರವಧನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಹೀಗಾಗಿ ಈ ಬಗ್ಗೆ ಯಾವುದೇ ಅನುಮಾನ ಬೇಡ. ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಇದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮೀಕ್ಷೆಯಲ್ಲ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ , ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನಿಗದಿತ ಸಮೀಕ್ಷ ಕಾರ್ಯದ ಗುರಿಯ ಕುರಿತು ಪರಿಶೀಲಿಸಬೇಕು ಎಂದು ಹೇಳಿದ್ದಾರೆ.

ಈ ವೇಳೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಎಚ್.ಕೆ. ಪಾಟೀಲ್, ಶಿವರಾಜ್ ತಂಗಡಗಿ, ಕೃಷ್ಣ ಭೈರೇಗೌಡ, ಬೈರತಿ ಸುರೇಶ್, ಮಧು ಬಂಗಾರಪ್ಪ, ರಹೀಂ ಖಾನ್, ಬೋಸರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Previous articleಸಿನಿಮಾ ಟಿಕೆಟ್ ಮೇಲೆ ಶೇ. 2ರಷ್ಟು ಸೆಸ್: ಏನಿದು ರಾಜ್ಯ ಸರ್ಕಾರದ  ನಿರ್ಧಾರ!
Next articleವಿಜಯಪುರ: ಭೀಮೆ ಪ್ರವಾಹ – ಸಂತ್ರಸ್ತರ ಸ್ಥಳಾಂತರ, ಹೆದ್ದಾರಿ ಬಂದ್

LEAVE A REPLY

Please enter your comment!
Please enter your name here