ವೈಫಲ್ಯ ಮರೆಮಾಚಲು ಪೊಲೀಸ್ ಅಧಿಕಾರಿಗಳ ಬಲಿಪಶು

0
29

ಸಂ.ಕ. ಸಮಾಚಾರ, ಉಡುಪಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಅಮಾಯಕರ ಸಾವಿನ ಬಗ್ಗೆ ದೇಶದಾದ್ಯಂತ ವ್ಯಾಪಕ ಆಕ್ರೋಶಕ್ಕೆ ಬೆದರಿ ಸರ್ಕಾರದ ವೈಫಲ್ಯ ಮರೆಮಾಚಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿ ಬಲಿಪಶು ಮಾಡಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖುದ್ದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೇ ಈ ಅನಾಹುತಕ್ಕೆ ಪೊಲೀಸರು ಹೊಣೆಯಲ್ಲ ಎಂದು ಹೇಳಿಕೆ ನೀಡಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ಒತ್ತಡಕ್ಕೆ ಮಣಿದು ಸರ್ಕಾರದ ವರ್ಚಸ್ಸಿನ ಹಾನಿ ನಿಯಂತ್ರಿಸಲು ಈ ಕ್ರಮ ಕೈಗೊಂಡಿದ್ದಾರೆ.

ಆರ್.ಸಿ.ಬಿ. ತಂಡದ ಐತಿಹಾಸಿಕ ಗೆಲುವಿನ ಸಾಧನೆಯನ್ನು ತಮ್ಮ ರಾಜಕೀಯ ಪ್ರತಿಷ್ಠೆಯ ಉದ್ದೇಶಕ್ಕಾಗಿ ಯಾವುದೇ ಪೂರ್ವ ತಯಾರಿ ಇಲ್ಲದೇ ಮಾಡಿದ ಪರಿಣಾಮ 11 ಮಂದಿ ಅಮಾಯಕ ಯುವ ಜನತೆಯ ಹೃದಯವಿದ್ರಾವಕ ಸಾವಿಗೆ ರಾಜ್ಯ ಸರಕಾರವೇ ಸಂಪೂರ್ಣ ಹೊಣೆ ಹೊರಬೇಕು.

ಪೊಲೀಸರು ನೀಡಿದ ಅಪಾಯದ ಸೂಚನೆಯನ್ನೂ ಪರಿಗಣಿಸದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಡೆಸಿ ಉಂಟಾದ ದುರಂತಕ್ಕೆ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡುವುದು ಖಂಡನೀಯ. ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮಾನಸಿಕ ಸ್ಥೈರ್ಯವನ್ನೇ ಕುಗ್ಗಿಸಲು ಮುಂದಾಗಿದೆ.

ಸರ್ಕಾರದ ಕೈಗೊಂಬೆಯಂತೆ ವರ್ತಿಸುವ ಪೊಲೀಸ್ ಇಲಾಖೆಗೂ ಸರ್ಕಾರದ ಈ ನಿರ್ಧಾರ ಎಚ್ಚರಿಕೆಯ ಕರೆಗಂಟೆಯಾಗಿದ್ದು, ಸರಕಾರದ ಸ್ವಯಂಕೃತ ಅಪರಾಧದಿಂದ ಸಮಸ್ಯೆ ಉಂಟಾದಾಗ ಪೊಲೀಸರನ್ನೇ ಬಲಿಪಶು ಮಾಡಲು ಸರ್ಕಾರ ಹಿಂಜರಿಯುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ಯಶಪಾಲ್ ತಿಳಿಸಿದ್ದಾರೆ.

Previous articleಬೊಳಿಯಾರು ಕಾಡಾನೆ ದಾಳಿಗೆ ರಿಕ್ಷಾ ನಜ್ಜುಗುಜ್ಜು
Next articleಗುಪ್ತಚರ ಇಲಾಖೆ ಮುಖ್ಯಸ್ಥ ಎತ್ತಂಗಡಿ