ಮಸೀದಿಗೆ ಕಲ್ಲು: ೬ ಮಂದಿ ಸೆರೆ

0
20

ಮಂಗಳೂರು: ಸುರತ್ಕಲ್ ಬಳಿಯ ಕಾಟಿಪಳ್ಳದಲ್ಲಿ ಮಸೀದಿಗೆ ಕಲ್ಲು ತೂರಿದ ಪ್ರಕರಣ ಸಂಬಂಧಿಸಿ ಸುರತ್ಕಲ್ ಪೊಲೀಸರು ಆರು ಮಂದಿ ಆರೋಪಿಗಳನ್ನು ಮಿಂಚಿನ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ.
ಕಾಟಿಪಳ್ಳದ ಮೂರನೇ ಬ್ಲಾಕ್ ವ್ಯಾಪ್ತಿಯ ಜುಮ್ಮಾ ಮಸೀದಿಗೆ ನಿನ್ನೆ ರಾತ್ರಿ ಬೈಕಿನಲ್ಲಿ ಬಂದ ಯುವಕರು ಕಲ್ಲು ತೂರಾಟ ನಡೆಸಿದ್ದರು. ಕಾಟಿಪಳ್ಳ ಆಶ್ರಯ ಕಾಲನಿಯ ಭರತ್ ಶೆಟ್ಟಿ(೨೬), ಅದೇ ಪ್ರದೇಶದ ನಿವಾಸಿ ಚೆನ್ನಪ್ಪ ಶಿವಾನಂದ ಚಲವಾದಿ(೧೯), ಸುರತ್ಕಲ್ ಚೇಳಾರು ಗ್ರಾಮದ ನಿತಿನ್ ಹಡಪ(೨೨), ಕೊಡಿಪಾಡಿ ಮುಂಚೂರು ನಿವಾಸಿ ಸುಜಿತ್ ಶೆಟ್ಟಿ(೨೩), ಹೊಸಬೆಟ್ಟು ಗ್ರಾಮದ ಅಣ್ಣಪ್ಪ ಅಲಿಯಾಸ್ ಮನು(೨೪) ಮತ್ತು ಕಾಟಿಪಳ್ಳ ೩ನೇ ಬ್ಲಾಕ್ ನಿವಾಸಿ ಪ್ರೀತಮ್ ಶೆಟ್ಟಿ(೩೪) ಬಂಧಿತರು.
ಭರತ್ ಸುರತ್ಕಲ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಈ ಹಿಂದೆ ಕೊಲೆಯತ್ನ ಸೇರಿದಂತೆ ೧೨ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ನಿತಿನ್ ಮೇಲೆ ಈ ಹಿಂದೆ ಒಂದು ಪ್ರಕರಣ, ಅಣ್ಣಪ್ಪ ಮೇಲೆ ಎರಡು ಪ್ರಕರಣ, ಪ್ರೀತಮ್ ಶೆಟ್ಟಿ ಮೇಲೆ ಈ ಹಿಂದೆ ಎರಡು ಪ್ರಕರಣ ದಾಖಲಾಗಿತ್ತು. ಆರೋಪಿಗಳಿಂದ ಒಂದು ಸ್ವಿಫ್ಟ್ ಕಾರು, ೨ ಬೈಕು, ನಾಲ್ಕು ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ನಿನ್ನೆ ರಾತ್ರಿ ೧೦ ಗಂಟೆ ವೇಳೆಗೆ ಎರಡು ಬೈಕಿನಲ್ಲಿ ಬಂದಿದ್ದ ಯುವಕರು ಮಸೀದಿಯತ್ತ ಕಲ್ಲು ತೂರಿ ಪರಾರಿಯಾಗಿದ್ದರು. ಮಸೀದಿಯ ಹಿಂಭಾಗದ ಕಿಟಕಿಗೆ ಬಿದ್ದಿದ್ದ ಕಲ್ಲಿನಿಂದ ಗಾಜಿನ ಗ್ಲಾಸು ಪುಡಿಯಾಗಿತ್ತು. ಕೂಡಲೇ ಮಸೀದಿ ಕಮಿಟಿಯವರು ಸುರತ್ಕಲ್ ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ಬಂದೋಬಸ್ತ್ ಮಾಡಿದ್ದರು. ಒಂದು ಬೈಕಿನಲ್ಲಿ ಮೂವರು, ಇನ್ನೊಂದರಲ್ಲಿ ಇಬ್ಬರು ಜನತಾ ಕಾಲನಿ ಕಡೆಯಿಂದ ಬಂದಿರುವುದನ್ನು ಪೊಲೀಸರು ಸಿಸಿಟಿವಿಯಲ್ಲಿ ಗಮನಿಸಿದ್ದು, ಗಣೇಶ್ ಕಟ್ಟೆ ಮೂಲಕ ಪರಾರಿಯಾಗಿದ್ದರು ಎಂಬುದನ್ನು ಪತ್ತೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದರು. ಆರೋಪಿಗಳನ್ನು ಕದ್ರಿ ಪರಿಸರದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಇಂದು ಈದ್ ಮಿಲಾದ್ ಇರುವ ಕಾರಣ ಸುರತ್ಕಲ್ ಪ್ರದೇಶ ಸೇರಿದಂತೆ ಮಂಗಳೂರು ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಲ್ಲು ತೂರಾಟ ಮಾಡಿರುವ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Previous articleಪ್ರಚೋದನಕಾರಿ ಹೇಳಿಕೆ: ಸವಾಲ್, ಪ್ರತೀ ಸವಾಲ್
Next articleಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ