ಮಂಡ್ಯ: ತನ್ನ ಮಗಳು ಶಿಕ್ಷಕಿ ದೀಪಿಕಾಳನ್ನು ಹತ್ಯೆ ಮಾಡಿದ ಆರೋಪಿ ನಿತೀಶನ ತಂದೆ ನರಸಿಂಹೇಗೌಡ ಎಂಬುವನನ್ನು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬೆಳ್ಳಾಳೆಯಲ್ಲಿ ಕೊಲೆ ಮಾಡಿದ ಆರೋಪಿಗಳಿಬ್ಬರು ಈಗ ಪೊಲೀಸರಿಗೆ ಶರಣಾಗಿದ್ದಾರೆ.
ಘಟನೆಯ ನಂತರ ಮಾಣಿಕ್ಯನಹಳ್ಳಿ ಗ್ರಾಮದವರೇ ಆದ ಎ1 ವೆಂಕಟೇಶ್ ಹಾಗೂ ಎ2 ಪರಮೇಶ್ ಆಲಿಯಾಸ್ ಮಂಜುನಾಥ್ ಎಂಬ ವ್ಯಕ್ತಿಗಳು ಮೇಲುಕೋಟೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ.
ಏನಿದು ಘಟನೆ..?
ಮಾಣಿಕ್ಯಹಳ್ಳಿ ಗ್ರಾಮದ ದೀಪಿಕಾಳನ್ನು ಅದೇ ಗ್ರಾಮದ ನಿತೀಶ್ ಎಂಬಾತ 2024ರ ಜನವರಿ 22ರಂದು ಮೇಲುಕೋಟೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ. ಇದೇ ಪ್ರತೀಕಾರವಾಗಿ ದೀಪಳ ತಂದೆ ವೆಂಕಟೇಶ್ ಹಾಗೂ ಪರಮೇಶ್ ಎಂಬುವರು ಹಂತಕನ ತಂದೆ ನರಸಿಂಹೇಗೌಡ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ನರಸಿಂಹೇಗೌಡ ಮುಂದಿನ ಭಾನುವಾರ ಧರ್ಮಸ್ಥಳದಲ್ಲಿ ತನ್ನ ಮಗಳ ಮದುವೆಯನ್ನು ಆಯೋಜನೆ ಮಾಡಿದ್ದ. ಇದರಿಂದ ಕುಪಿತಗೊಂಡ ವೆಂಕಟೇಶ್, ʻನನ್ನ ಮಗಳನ್ನ ಸಾಯಿಸಿ ನಿನ್ನ ಮಗಳಿಗೆ ಮದುವೆ ಮಾಡುತ್ತಿದ್ದಿಯಾʼ ಎಂದು ಬರ್ಬರವಾಗಿ ಕೊಲೆ ಮಾಡಿ ನಂತರ ಮೇಲುಕೋಟೆ ಪೊಲೀಸರಿಗೆ ಶರಣಾಗಿದ್ದಾನೆ.
ದೀಪಿಕಾ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮಾಣಿಕ್ಯಹಳ್ಳಿ ಗ್ರಾಮದವಳು. ಈಕೆಯನ್ನು 2024 ಜನವರಿ 22ರಂದು ಅದೇ ಗ್ರಾಮದ ನಿತೀಶ್ ಎಂಬಾತ ಬರ್ಬರವಾಗಿ ಕೊಲೆ ಮಾಡಿದ್ದ. ಇದೀಗ ಮಗಳ ಕೊಲೆಯ ಪ್ರತೀಕಾರಕ್ಕೆ ತಂದೆ ಕೊಲೆ ಆರೋಪಿಯ ತಂದೆಯನ್ನ ಕೊಲೆ ಮಾಡಿದ್ದಾನೆ. 2024 ಜನವರಿ 19ರಂದು ಮಾಣಿಕ್ಯನಹಳ್ಳಿ ಗ್ರಾಮದ ದೀಪಿಕಾ ಎಂಬ ಟೀಚರ್ ನಾಪತ್ತೆಯಾಗಿದ್ದಳು. ಬಳಿಕ ಆಕೆ ಜನವರಿ 23ರಂದು ಮೇಲುಕೋಟೆಯ ಬೆಟ್ಟದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಈ ವೇಳೆ ರಾಜ್ಯದಲ್ಲಿ ದೊಡ್ಡಮಟ್ಟದ ಸುದ್ದಿಯಾಗಿತ್ತು. ಬಳಿಕ ಮಂಡ್ಯ ಪೊಲೀಸರು ಮಾಣಿಕ್ಯನಹಳ್ಳಿ ಗ್ರಾಮದ ನಿತೀಶ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಈ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ನಿತೀಶ್ ಎಂದು ತಿಳಿದು ಬಂದಿತ್ತು.
ಶಿಕ್ಷಕಿ ದೀಪಿಕಾ ಮತ್ತು ನಿತೀಶ್ ನಡುವೆ ಎರಡು ವರ್ಷದಿಂದಲೂ ಸಲುಗೆ ಇತ್ತಂತೆ. ಇಬ್ಬರ ಸಲುಗೆ ನೋಡಿ ನಿತೀಶ್‌ಗೆ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ವಾರ್ನಿಂಗ್ ಕೂಡ ಕೊಟ್ಟಿದ್ದರು. ನಿತೀಶ್ ಜೊತೆಗಿನ ಸಲುಗೆ ಬಗ್ಗೆ ಪ್ರಶ್ನಿಸಿದ್ದಾಗ ಆತ ತಮ್ಮ ಇದ್ದಂತೆ ಎಂದು ದೀಪಿಕಾ ಹೇಳಿಕೊಂಡಿದ್ದಳು. ಕುಟುಂಬಸ್ಥರ ವಾರ್ನಿಂಗ್ ಬಳಿಕ ಇಬ್ಬರು ಅಂತರ ಕಾಯ್ದುಕೊಂಡಿದ್ದರು. ಇದರಿಂದ ದೀಪಿಕಾಳ ಜೊತೆಗಿನ ಒಡನಾಟವಿಲ್ಲದೇ ನಿತೀಶ್ ಘಾಸಿಗೊಂಡಿದ್ದ. ನಂತರ 2024 ಜನವರಿ 19ರಂದು ತನ್ನ ಬರ್ತ್‌ಡೇ ನೆಪದಲ್ಲಿ ಬೆಟ್ಟದ ತಪ್ಪಲಿಗೆ ದೀಪಿಕಾಳನ್ನು ನಿತೀಶ್ ಕರೆಸಿಕೊಂಡಿದ್ದ. ಈತನಿಗೆ ಶರ್ಟ್ ಕೂಡ ಗಿಫ್ಟ್ ಕೊಡಲು ದೀಪಿಕಾ ಹೋಗಿದ್ದಳು. ಬಳಿಕ ಇಬ್ಬರ ನಡುವೆ ಜಗಳ ಆರಂಭವಾಗಿತ್ತು. ಅವೈಡ್ ಮಾಡುತ್ತಿದ್ದಕ್ಕೆ ದೀಪಿಕಾ ಮೇಲೆ ನಿತೀಶ್‌ನಿಗೆ ಸಾಕಷ್ಟು ಆಕ್ರೋಶ ಕೂಡ ಇತ್ತು. ಇದೇ ಕಾರಣಕ್ಕೆ ದೀಪಿಕಾಳನ್ನು ಹತ್ಯೆ ಮಾಡಿದ್ದ ಎನ್ನಲಾಗಿದೆ.
ಇದಾದ ಬಳಿಕ ಜೈಲು ಸೇರಿದ್ದ ನಿತೀಶ್ ಜಾಮೀನಿನ ಮೇಲೆ ಹೊರಕ್ಕೆ ಬಂದಿದ್ದ. ತನ್ನ ಮಗಳನ್ನು ಕೊಲೆ ಮಾಡಿದ್ದ ನಿತೀಶ್‌ನನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ದೀಪಿಕಾ ತಂದೆ ವೆಂಕಟೇಶ್ ಸ್ಕೆಚ್ ಹಾಕಿದ್ದ. ಇಂದು ನಿತೀಶ್ ತಂದೆ ನರಸಿಂಹೇಗೌಡ ಮನೆಯಿಂದ ಹೋದ ವೇಳೆ ಹಿಂಬಾಲಿಸಿ ಹೋದ ವೆಂಕಟೇಶ್ ಹಾಗೂ ಪರಮೇಶ್, ಊರ ಹೊರಗೆ ಇದ್ದ ಟೀ ಅಂಗಡಿಯಲ್ಲಿ ಬಳಿ ಕುಳಿತಿದ್ದ ನರಸಿಂಹೇಗೌಡಗೆ ವೆಂಕಟೇಶ್ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಈ ಸಂಬಂಧ ಮೇಲುಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.