ದಾವಣಗೆರೆ: ಸಮಾನತೆ ಪಡೆದ ಮಹಿಳೆಯರು ಸದ್ಯ ಎಲ್ಲ ರಂಗಗಲ್ಲೂ ಪುರುಷರಿಗೆ ಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ದುರ್ದೈವದ ಸಂಗತಿ ಎಂದರೆ, ಪುರಷರನ್ನು ಮೀರಿ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೋವಿನಿಂದ ಹೇಳಿದರು.
ನಗರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಹಾಗೂ ಪ್ರಕರಣಗಳ ವಿಚಾರಣೆ ಕಾರ್ಯಕ್ರಮ ಉದ್ಘಾಟಿಸಿ, ನಾನು ಉಪಲೊಕಾಯಕ್ತನಾಗಿ ನಿಯುಕ್ತಿಯಾದ ಮೇಲೆ ಮಹಿಳಾ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿರುವ ಸಾಕಷ್ಟು ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಎಚ್ಚರಿಸಿದರು.
ಕೋವಿಡ್-19 ಬಳಿಕ 2021ರ ನಂತರ ನಾಯಿ ಬಾಲ ಡೊಂಕು ಎಂಬಂತೆ ರಾಜ್ಯದಲ್ಲಿ ಭ್ರಷ್ಟಾಚಾರದಲ್ಲಿ ಮಿತಿಮೀರಿ ಹೆಚ್ಚಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪಲೋಕಾಯುಕ್ತನಾಗಿ ನಿಯುಕ್ತಿಯಾದ ಮೇಲೆ ನನ್ನ ಸಂಪೂರ್ಣ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಘೋಷಿಸಿಕೊಂಡಿದ್ದೇನೆ. ಎಲ್ಲರೂ ತಮ್ಮ ಆಸ್ತಿ ವಿವರ ಪ್ರಕಟಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ದೇಶಕ್ಕೆ ಸ್ವಾತಂತ್ರ‍್ಯ ಬಂದ ಸಂದರ್ಭದಲ್ಲಿ ಸಾಕ್ಷರತೆ ಪ್ರಮಾಣ ಶೇ. 18ರಷ್ಟಿತ್ತು. ಇಂದು ಸಾಕ್ಷರತೆ ಪ್ರಮಾಣ ಶೇ. 80ರಷ್ಟಿದೆ. ಆದರೆ ಸಾಕ್ಷರರಾದ ಶೇ. 90ರಷ್ಟು ವಿದ್ಯಾವಂತರಿಗೆ ಕಾನೂನುಗಳ ಅರಿವಿಲ್ಲ ಎಂದು ನ್ಯಾ.ಬಿ.ವೀರಪ್ಪ ಹೇಳಿದರು.