ಬೆಂಗಳೂರಿಗೆ ಹೊಸ ರೂಪ ನೀಡಲು ನಾನು ಸದಾ ಸಿದ್ಧ

ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿಗೆ ಹೊಸ ರೂಪವನ್ನು ನೀಡಲು ನಾನು ಈ ಉಸ್ತುವಾರಿಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಅದನ್ನು ಸಮರ್ಥವಾಗಿ ನಿಭಾಯಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.

ಬೆಂಗಳೂರು ಮಳೆ ನೀರಿನ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಒದಗಿಸಲು ನಾವು ಬದ್ಧರಾಗಿದ್ದು, ಈ ನಿಟ್ಟಿನಲ್ಲಿ ಮಾನ್ಯತಾ ಟೆಕ್‌ ಪಾರ್ಕ್‌ ಎದುರು ಮಳೆ ನೀರು ಸಂಗ್ರಹವಾಗುತ್ತಿರುವ ಸ್ಥಳಗಳಿಗೆ ಅಧಿಕಾರಿಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿ, ಈ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಮಾನ್ಯತಾ ಟೆಕ್‌ ಪಾರ್ಕ್‌ ದೊಡ್ಡ ಜಂಕ್ಷನ್‌ ಆಗಿದ್ದು, ಇಲ್ಲಿಂದಲೇ ಸಮಸ್ಯೆ ಶುರುವಾಗುತ್ತಿದೆ. ಮಳೆ ನೀರು ಹರಿಯುವುದನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ. ಅಧಿಕಾರಿಗಳಿಗೆ ಸ್ಪಂದಿಸದೇ ಕೆಲವರು ತಡೆಯಾಜ್ಞೆ ತಂದಿದ್ದರು. ಹಾಗಾಗಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ. ನಮಗೆ ಯಾರ ಆಸ್ತಿಯನ್ನು ಹಾಳು ಮಾಡಲು ಇಷ್ಟವಿಲ್ಲ. ಹರಿಯುವ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಸಮಸ್ಯೆಗಳ ಗಂಭೀರತೆಯನ್ನು ಅರಿತು, ಖುದ್ದಾಗಿ ನಾನೇ ಬಂದು ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅಡಚಣೆ ಮಾಡಿದವರು ಸ್ಪಂದಿಸುವುದಾಗಿ ಒಪ್ಪಿಕೊಂಡಿದ್ದಾರೆ. ಯಾರ ಕಟ್ಟಡವನ್ನು ಒಡೆಯುವುದು ನಮ್ಮ ಉದ್ದೇಶವಲ್ಲ. ಯಾರಿಗೂ ತೊಂದರೆ ಆಗದಂತೆ ನೀರಿನ ಹರಿವನ್ನು ಸರಾಗಗೊಳಿಸಲು ಅಧಿಕಾರಿಗಳು ಕೆಲಸ ಮಾಡಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ಸೂಚಿಸಿದ್ದಾರೆ.