ಪೊಲೀಸ್ ವಶದಲ್ಲಿದ್ದ ಆರೋಪಿ ಸಾವು

0
29
ಸಾವು

ಕಲಬುರಗಿ: ಮಹಿಳೆಯೊಬ್ಬಳು ಕಣ್ಮರೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ ರೋಜಾ ಪೊಲೀಸರು ವಿಚಾರಣೆಗೆಂದು ಕರೆದುಕೊಂಡು ಬಂದಿದ್ದ ಆರೋಪಿಯೊಬ್ಬ ಹೃದಯಾಘಾತದಿಂದ ಮೃತಪಟ್ಟ ಘಟನೆ ಸಂಭವಿಸಿದೆ.
ಕಲಬುರಗಿ ತಾಲೂಕಿನ ಹಾರುತಿ ಹಡಗಿಲ್ ಗ್ರಾಮದ ನಿವಾಸಿ ಹಾಗೂ ಕೂಲಿ ಕಾರ್ಮಿಕನಾಗಿದ್ದ ಕೃಷ್ಣಾ ರಾಠೋಡ (೨೭) ಎಂಬಾತನೆ ಮೃತಪಟ್ಟಿರುವ ದುರ್ದೈವಿಯಾಗಿದ್ದಾನೆ.
ಕಳೆದ ಜ.೨೪ ರಂದು ಕಲಬುರಗಿ ನಗರ ಮಿಜಗೂರಿ ಬಳಿಯ ಎಮ್‌ಟಿಸಿ ಕ್ರಾಸ್ ಬಳಿಯಿಂದ ಮೈನಾಬಾಯಿ ಎಂಬ ಮಹಿಳೆ ಕಾಣೆಯಾಗಿದ್ದ ಕುರಿತು ಅವರ ಪುತ್ರ ಅಂಕುಶ್ ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾದ ಬಳಿಕ ರೋಜಾ ಪೊಲೀಸರು ಮಹಿಳೆ ಕಣ್ಮರೆಯಾಗಿದ್ದ ಪ್ರಕರಣದಲ್ಲಿ ಕಾಣೆಯಾಗಿದ್ದ ಪ್ರದೇಶದಲ್ಲಿನ ಸಿಸಿಟಿವಿಗಳನ್ನು ಪರಿಶೀಲನೆ ವೇಳೆಯಲ್ಲಿ ಕೃಷ್ಣಾ ರಾಠೋಡ ಎಂಬ ಯುವಕ ಅನುಮಾನಾಸ್ಪದವಾಗಿ ಓಡಾಡುತ್ತಿದ್ದರಿಂದ ಆತನನ್ನು ವಿಚಾರಣೆಗೆಂದು ಕಳೆದ ಎರಡು ದಿನಗಳ ಹಿಂದೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ.
ಭಾನುವಾರ ಸ್ಥಳ ಮಹಜರಿಗೆಂದು ಕೃಷ್ಣಾನನ್ನು ಪೊಲೀಸರು ಸಂಜೆ ಕರೆದುಕೊಂಡು ಹೋಗಿದ್ದು ಸ್ಥಳ ಮಹಜರು ಮಾಡಿಕೊಂಡು ವಾಪಸ್ ಆಗುತ್ತಿದ್ದ ವೇಳೆ ಕೃಷಾನಿಗೆ ಎದೆ ನೋವು ಕಾಣಿಸಿಕೊಂಡ ಪರಿಣಾಮ ಆತನನ್ನು ಕೂಡಲೇ ಜಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಹೃದಾಯಾಘಾತದಿಂದಾಗಿ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳುತ್ತಾರೆ.
ಇತ್ತ ಸುದ್ದಿ ಅರಿತ ಕೃಷ್ಣಾನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಇದು ಸಹಜ ಸಾವಲ್ಲ, ಪೊಲೀಸರು ಹೊಡೆದಿರುವುದರಿಂದ ಲಾಕಪ್ ಡೆತ್ ಆಗಿದೆ ಎಂದು ಆರೋಪಿಸಿದ್ದರು. ಆದರೆ, ವೈದ್ಯಕೀಯ ವರದಿಯಲ್ಲಿ ಕೃಷ್ಣಾ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾನೆಂದು ಉಲ್ಲೇಖವಾಗಿರುವುದರಿಂದ ಕುಟುಂಬಸ್ಥರು ಕೃಷ್ಣಾ ಆಕಸ್ಮಿಕವಾಗಿ ಮೃತಪಟ್ಟಿದ್ದು ಆತನ ಸಾವಿನಲ್ಲಿ ಯಾವುದೇ ಸಂಶಯವಿಲ್ಲವೆಂದು ಮೃತನ ತಾಯಿ ಲಲಿತಾ ರಾಠೋಡ ಅವರು ದೂರು ನೀಡಿದ್ದಾರೆ.
ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಸಿಲಿಂಡರ್ ಸ್ಫೋಟ: ಮೂವರು ಗಂಭೀರ
Next articleಬಸ್ ನಲ್ಲಿದ್ದವರೂ ನೆರವಿಗೆ ಬರಲಿಲ್ಲ ಬೇಸರ ಹೊರಹಾಕಿದ ಚಾಲಕ