ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಉವಾಚ
ಕೋಲಾರ: ಪಹಲ್ಗಾಮ್ ದುರ್ಘಟನೆ ಸಂಬಂಧ ಭಾರತವು ಪಾಕಿಸ್ತಾನದ ವಿರುದ್ಧ ನಡೆಸಿದ ಕಾರ್ಯಾಚರಣೆ ಕೇವಲ ಬೂಟಾಟಿಕೆ ಅಷ್ಟೇ. ಇವರು ಪಾಕಿಸ್ತಾನದ ವಿರುದ್ಧ ಯಾವುದೇ ಯುದ್ಧ ಮಾಡಿಲ್ಲ. ನಾಲ್ಕೈದು ವಿಮಾನಗಳನ್ನು ಹಾರಿಸಿದರೆ ಅದು ಯುದ್ಧವೇ ಎಂದು ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಟೀಕಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಪಹಲ್ಗಾಮ್‌ನಲ್ಲಿ 26 ಜನ ಭಾರತೀಯರು ಮೃತ ಪಟ್ಟಿದ್ದಕ್ಕೆ ಹೆಣ್ಣು ಮಕ್ಕಳಿಗೆ ಕೊಟ್ಟ ಪರಿಹಾರ ಇದೇನಾ ಎಂದು ಪ್ರಶ್ನಿಸಿದರು.
ಸರ್ಕಾರ ಏನೂ ಮಾಡಿಲ್ಲ. ಟಿ.ವಿಗಳಲ್ಲಿ ಒಂದೊಂದು ಚಾನಲ್ಲಿನಲ್ಲಿ ಒಂದೊಂದು ತರ ಯುದ್ಧ ಆಯ್ತು ಎಂದು ತೋರಿಸಿದ್ದು ಬಿಟ್ಟರೆ ಯಾರು ಯಾರಿಗೆ ಹೊಡೆದಿದ್ದಾರೆ ಎಂಬುದಕ್ಕೆ ಖಾತರಿ ಏನು ಎಂದು ಪ್ರಶ್ನಿಸಿದರು.
ಮೂರು ದಿನ ಮುಂಚೆಯೇ ಅತ್ಯಂತ ಸುಲಭವಾಗಿ ನಮ್ಮ ಗಡಿ ಒಳಗೆ ಬಂದು ಅಲ್ಲೇ ಬಿಡಾರ ಹೂಡಿ ನಮ್ಮ ಹೆಣ್ಣು ಮಕ್ಕಳು ಮತ್ತು ಮಕ್ಕಳ ಮುಂದೆ ಸಾಯಿಸಿದ್ದಕ್ಕೆ ಪ್ರತಿಕಾರ ಇದೇನಾ ಎಂದು ಕೇಳಿದರು.
ಉಗ್ರಗಾಮಿಗಳು ಯಾರು, ಅವರ ಬೇರುಗಳು ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಿ ಹೊಡೆದು ಹಾಕಬೇಕಾಗಿತ್ತು. ಅದು ಬಿಟ್ಟು ನಾಲ್ಕು ಏರೋಪ್ಲೇನ್ ಹಾರಿಸಿಬಿಟ್ಟರೆ ನಂಬಬೇಕಾ? ನೂರು ಜನ ಉಗ್ರಗಾಮಿಗಳನ್ನು ಹೊಡೆದು ಹಾಕಿದ್ದಾರೆ ಎಂಬುದಕ್ಕೆ ಖಾತರಿ ಏನಿದೆ ಎಂದು ಕೊತ್ತೂರು ಮಂಜುನಾಥ್ ಸಾಕ್ಷಿ ಕೇಳಿದರು.
ಭಾರತದ ದಾಳಿಯಲ್ಲಿ ಸತ್ತ ಉಗ್ರಗಾಮಿಗಳನ್ನು ದಫನ್ ಮಾಡಿದ ದೃಶ್ಯಗಳು ಇವತ್ತಿನದ್ದೋ ಅಥವಾ ಹಳೆಯದ್ದೋ, ಯಾರಿಗೆ ಗೊತ್ತು ಎಂದು ಶಾಸಕರು ಅನುಮಾನ ವ್ಯಕ್ತಪಡಿಸಿದರು.
ಭಾರತದ ದಾಳಿಯಲ್ಲಿ ಸತ್ತ ಉಗ್ರರಿಗೆ ಪಾಕಿಸ್ತಾನದವರು ಪರಿಹಾರ ಕೊಟ್ಟುಕೊಳ್ಳಲಿ ಬಿಡಿ, ಅದು ಅವರಿಗೆ ಬಿಟ್ಟದ್ದು, ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೊತ್ತೂರು ಮಂಜುನಾಥ್ ಕ್ಲೀನ್ ಚಿಟ್ ನೀಡಿದರು.
ಫಹಲ್ಗಾಮ್ ಗೆ ಬಂದಿದ್ದ ನಾಲ್ಕು ಮಂದಿ ಯಾರು? ನಮ್ಮ ದೇಶಕ್ಕೆ ಬಂದು ನಮ್ಮವರನ್ನೇ ಕೊಂದು ಹೋಗುವುದಾದರೆ ನಮ್ಮ ಗಡಿಯಲ್ಲಿ ಸೆಕ್ಯೂರಿಟಿ ಇಲ್ಲವೇ? ಭದ್ರತಾ ಮತ್ತು ಗುಪ್ತಚರ ವೈಫಲ್ಯ ಆಗಿದೆಯೇ? ಎಂದು ದೂಷಿಸಿದರು.
ಪ್ರಧಾನಿ ಮೋದಿ ಸುಮ್ಮನೆ ಯುದ್ಧ ಎಂದು ಆರಂಭಿಸಿದರು, ಎರಡು ದಿನಕ್ಕೆ ಕದನ ವಿರಾಮ ಎಂದರು, ಈಗ ಮತ್ತೆ ಶುರು ಎನ್ನುತ್ತಿದ್ದಾರೆ. ಯುದ್ಧ ಮುಗಿಸಿದ ಮೇಲೆ ಮತ್ತೆ ಆರಂಭಿಸುವುದು ಎಲ್ಲಿ ಎಂದು ಲೇವಡಿ ಮಾಡಿದರು.
ಅತ್ಯಂತ ಚಿಕ್ಕ ರಾಷ್ಟ್ರ ಇಸ್ರೇಲ್ ನವರು ತಮ್ಮ 60 ಮಂದಿಯನ್ನು ಒತ್ತೆ ಇರಿಸಿಕೊಂಡ ಕಾರಣಕ್ಕೆ ವೀರಾವೇಶದಿಂದ ಹೋರಾಡಿ ಸರ್ವನಾಶ ಮಾಡಿದರು, ರಷ್ಯಾದವರು ಉಕ್ರೇನ್ ಮೇಲೆ ನಡೆಸಿದ ದಾಳಿ ನೋಡಿ ಕಲಿಯಬೇಕು ಎಂದು ಕೊತ್ತೂರು ವ್ಯಂಗ್ಯ ಮಾಡಿದರು.
ಭಾರತೀಯ ಹೆಣ್ಣು ಮಕ್ಕಳ ಮಾಂಗಲ್ಯಕ್ಕೆ ಮತ್ತು ಭಾರತೀಯ ಗಂಡಸರ ಜೀವಕ್ಕೆ ಬೆಲೆ ಇಲ್ಲವೇ? ಮೊದಲು ನಾಲ್ಕು ಮಂದಿ ಉಗ್ರರನ್ನು ಹಿಡಿದು ತಂದು ನಮ್ಮ ಹೆಣ್ಣು ಮಕ್ಕಳ ಕೈಗೆ ಒಪ್ಪಿಸಲಿ ಎಂದು ಶಾಸಕರು ಒತ್ತಾಯಿಸಿದರು.
ಸೈನಿಕರ ಬಗ್ಗೆಯೂ ಸಂಶಯ!
ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ಶಾಸಕ ಕೊತ್ತೂರು ಮಂಜುನಾಥ ಭಾರತೀಯ ಸೈನಿಕರ ಬಗ್ಗೆಯೂ ಸಂಶಯ ವ್ಯಕ್ತಪಡಿಸಿದರು.
ಉಗ್ರಗಾಮಿಗಳು 3-4 ದಿನ ಬಂದು ನಮ್ಮಲ್ಲಿ ಇದ್ದು ಹತ್ಯಾಕಾಂಡ ನಡೆಸಿ ಸುರಕ್ಷಿತವಾಗಿ ವಾಪಸ್ ಹೋಗಿದ್ದಾರೆ ಎಂದರೆ ಗಡಿಯಲ್ಲಿ ಸೈನಿಕರು ಇರಲಿಲ್ಲವೇ? ಅವರನ್ನು ಹೇಗೆ ಹೊರ ಹೋಗಲು ಬಿಟ್ಟರು ಎಂದು ಪ್ರಶ್ನಿಸಿದರು.
ಭಾರತೀಯ ಸೈನಿಕರೇ ಪ್ಲಾನ್ ಮಾಡಿ ಅವರನ್ನು ಒಳಗೆ ಕರೆಸಿಕೊಂಡರಾ ಅಥವಾ ಅವರೇ ನಮ್ಮ ದೇಶಕ್ಕೆ ಬಂದರೇ ಎಂಬ ಬಗೆಯು ಚರ್ಚೆ ನಡೆದು ಸತ್ಯಾಸತ್ಯತೆ ಗೊತ್ತಾಗಬೇಕು ಎಂದು ಕೊತ್ತೂರು ಒತ್ತಾಯಿಸಿದರು.
ಚುಚ್ಚಿ ಚುಚ್ಚಿ ಸಾಯಿಸಬೇಕಿತ್ತು
ಉಗ್ರಗಾಮಿಗಳನ್ನು ಕಿತ್ತುಹಾಕಲು ಒಳ್ಳೆಯ ಅವಕಾಶ ಸಿಕ್ಕಿತ್ತು. ಅದನ್ನು ಹಾಳು ಮಾಡಿಕೊಂಡರು ಅಷ್ಟೇ, ಬೇರೇನೂ ಸಾಧನೆ ಆಗಿಲ್ಲ. ಎಂದು ಕೊತ್ತೂರು ಮಂಜುನಾಥ್ ವಿಶ್ಲೇಷಿಸಿದರು. ಭಾರತ ಸರ್ಕಾರದಿಂದ ಸಮಾಧಾನಕರ ಕ್ರಮ ಆಗಿಲ್ಲ. ಭಯೋತ್ಪಾದಕರನ್ನು ಹಿಡಿದುಕೊಂಡು ಬಂದು ನಮ್ಮ ಹೆಣ್ಣು ಮಕ್ಕಳ ಕೈಯಲ್ಲಿ ಸೂಜಿ ಕೊಟ್ಟು ಚುಚ್ಚಿಸಿ, ಕೈ ಕಾಲುಗಳನ್ನು ಅವರಿಂದಲೇ ಕತ್ತರಿಸಿ ಬಂದೂಕಿನಿಂದ ಗುಂಡು ಹಾರಿಸಿ ಕೊಲ್ಲುತ್ತಾರೆ ಎಂಬ ನಿರೀಕ್ಷೆ ನನಗಿತ್ತು ಎಂದು ಶಾಸಕರು ಬಹಿರಂಗಪಡಿಸಿದರು.