ದರ್ಶನ್ ಹೆಸರು ಹೇಳದಂತೆ ನಾಲ್ವರಿಗೆ ತಲಾ ೫ ಲಕ್ಷ ರೂ.?

0
14

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸರು ನಡೆಸಿದ ವಿಚಾರಣೆಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತಿವೆ. ರೇಣುಕಾಸ್ವಾಮಿಯನ್ನು ಹತ್ಯೆಗೈದ ಬಳಿಕ ನಾಲ್ವರು ಬಂಧಿತ ಆರೋಪಿಗಳಿಗೆ ತಲಾ ಐದು ಲಕ್ಷ ರೂ. ಹಣ ನೀಡಿ ಪೊಲೀಸರ ಮುಂದೆ ತಾವು ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಳ್ಳಬೇಕು ಎಂದು ದರ್ಶನ್ ಆಪ್ತನಾಗಿರುವ ದೀಪಕ್ ಹೇಳಿರುವುದಾಗಿ ತನಿಖೆಯಿಂದ ಗೊತ್ತಾಗಿದೆ.
ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹೆಸರು ಬರಬಾರದು. ಬಂಧನವಾದ ಬಳಿಕ ವಕೀಲರ ಫೀಸು, ಜಾಮೀನು ಸೇರಿದಂತೆ ಮನೆಯವರಿಗೆ ಹಣ ನೀಡುವುದಾಗಿ ದೀಪಕ್ ಹೇಳಿದ್ದಾನೆ ಎಂದು ಅಧಿಕಾರಿಗಳ ಮುಂದೆ ನಾಲ್ವರು ಬಾಯಿಬಿಟ್ಟಿದಾರೆ. ಠಾಣೆಗೆ ಕರೆ ಮಾಡಿ ಶರಣಾಗಿದ್ದ ಕಾರ್ತಿಕ್(೨೭), ರಾಘವೇಂದ್ರ(೪೩), ಕೇಶವಮೂರ್ತಿ(೨೪) ಹಾಗೂ ನಿಖಿಲ್ ನಾಯಕ್(೨೧) ಇವರಿಗೆ ಭರವಸೆ ನೀಡಿದ್ದ. ಅದರಂತೆ ನಿಖಿಲ್ ಹಾಗೂ ಕೇಶವಮೂರ್ತಿಗೆ ತಲಾ ಐದು ಲಕ್ಷ ಹಣ ನೀಡಿದ್ದ. ಬಂಧನ ಬಳಿಕ ಮನೆಯವರಿಗೆ ಹಣ ನೀಡುವುದಾಗಿ ಕಾರ್ತಿಕ್ ಮತ್ತು ರಾಘವೇಂದ್ರಗೆ ಹೇಳಿದ್ದಾರೆ. ಇದರಂತೆ ಜೂ. ೧೦ರಂದು ರಾತ್ರಿ ೭ಗಂಟೆ ವೇಳೆಗೆ ನಾಲ್ವರು ಆರೋಪಿಗಳು ಪೊಲೀಸರ ಮುಂದೆ ಶರಣಾಗತಿ ಆಗಿರುವುದಾಗಿ ರಿಮಾಂಡ್ ಅರ್ಜಿಯಲ್ಲಿ ಪೊಲೀಸರು ನಮೂದಿಸಿದ್ದಾರೆ.

ಸ್ಥಳ ಮಹಜರು
ಮಂಗಳವಾರ ಬಂಧನವಾಗಿದ್ದ ನಟ ದರ್ಶನ್ ಸೇರಿದಂತೆ ೧೩ ಜನರನ್ನು ರೇಣುಕಾಸ್ವಾಮಿ ಹತ್ಯೆ ನಡೆದ ಗೋದಾಮು ಹಾಗೂ ಶವ ಎಸೆಯಲಾಗಿದ್ದ ಕಾಮಾಕ್ಷಿಪಾಳ್ಯದ ಕಾಲುವೆಗೆ ಕರೆದುಕೊಂಡು ಹೋದ ಪೊಲೀಸರು ಸ್ಥಳ ಮಹಜರು ನಡೆಸಿದರು. ರೇಣುಕಾಸ್ವಾಮಿ ಹತ್ಯೆ ಸಂದರ್ಭದಲ್ಲಿ ನೀವು ಇದ್ದಿರಾ? ನೀವೂ ಸಹ ಆತನ ಮೇಲೆ ಹಲ್ಲೆ ನಡೆಸಿದಿರಾ? ಎಂಬ ಪ್ರಶ್ನೆಗಳನ್ನು ಪೊಲೀಸರು ದರ್ಶನ್‌ಗೆ ಕೇಳಿದ್ದಾರೆ. ಗೋದಾಮಿನ ಸೆಕ್ಯೂರಿಟಿ ಗಾರ್ಡ್ ಅವತ್ತು ರಾತ್ರಿ ದರ್ಶನ್ ಬಂದಿದ್ದರು ಎಂದು ಪೊಲೀಸರ ಮುಂದೆ ದೃಢಪಡಿಸಿದ್ದಾನೆ.

Previous articleಮಹಾಸಂಘದ ಮಹಾಮಹಿಮರು
Next articleಕನ್ನಡಿಗರಿಗೆ ನ್ಯಾಯ ಒದಗಿಸುವರೇ ಎಚ್‌ಡಿಕೆ?