ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಯಶಸ್ಸಿಗೆ ಕಾರಣವಾಗಿದ್ದು ಇದೇ ಆಶಾಭಾವ. ಏಕೆಂದರೆ ವೃತ್ತಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಏನೆಲ್ಲ ಏರಿಳಿತ,
ಕಷ್ಟ-ನಷ್ಟ, ಅವಮಾನ, ಸಮಸ್ಯೆಗಳನ್ನು ಎದುರಿಸಿದರೂ ಅವುಗಳನ್ನೆಲ್ಲ ಮೆಟ್ಟಿ ನಿಂತು ಈ ಎತ್ತರಕ್ಕೆ ಏರಲು ಸಾಧ್ಯವಾಗಿರುವುದು ಪರಿಶ್ರಮದ ಜತೆಗೆ ಇದೇ ಆಶಾಭಾವ. ಈ ಮೇರು ಗಾಯಕಿಯ ೯೦ನೇ ವರ್ಷದ ಜನ್ಮದಿನದ ಅಂಗವಾಗಿ ವಿಶೇಷ ಚಿತ್ರಣ
ಆಶಾ….
ಸೆಪ್ಟೆಂಬರ್ ೮ಕ್ಕೆ ೯೦ನೇ ವಯಸ್ಸಿಗೆ ಪದಾರ್ಪಣೆ ಮಾಡುತ್ತಿರುವ ಆಶಾ ಭೋಸ್ಲೆ ಅವರಲ್ಲಿ ಇಂದಿಗೂ ಅದೇ ಆಶಾಭಾವ, ಅದೇ ಸಮಭಾವದ ಸ್ವಭಾವ. ಎಂಥ ಸಾರ್ಥಕ ಬದುಕಿನ ಭಾವ !
ಈ ಗಟ್ಟಿಗಿತ್ತಿ ಗಾಯಕಿ ಅಂದಿನ ಕಾಲದ ಬಾಲಿವುಡ್ ಸಂಗೀತ ದಿಗ್ಗಜರ ಪೈಕಿ ನಮ್ಮೊಡನೆ ಇರುವ ಜೀವಂತ ದಂತಕಥೆ (ಮುಕೇಶ್, ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಅವರಂಥವರು).
ನಮಗೆಲ್ಲ ತಿಳಿದಿರುವಂತೆ ಆಶಾ ಭೋಸ್ಲೆ ಅವರು ಗಾನಕೋಗಿಲೆ ಲತಾ ಮಂಗೇಶ್ಕರ್ ಸೋದರಿ. ಹೀಗಾಗಿ ಸಂಗೀತ ಕ್ಷೇತ್ರದಲ್ಲಿ ಬದುಕು ಕಟ್ಟಿಕೊಳ್ಳಲು ಅಕ್ಕನ ಜೊತೆಗೇ ಸ್ಪರ್ಧೆ ನಡೆಸಬೇಕಾದಂಥ ವಿಚಿತ್ರ, ವಿಪರ್ಯಾಸದ ಪರಿಸ್ಥಿತಿ. ಈ ಸತ್ಯವನ್ನು ಚೆನ್ನಾಗಿ ಅರಿತಿದ್ದ ಆಶಾ, ಆ ಪರಿಸ್ಥಿತಿಯಲ್ಲೂ ಅಲ್ಲೇ ತಮ್ಮ ನೆಲೆ ಕಂಡುಕೊಳ್ಳಲು ನಿರ್ಧರಿಸಿ ಅದಕ್ಕೆ ಅನುಗುಣವಾಗಿ ಸಾಗಿ ಯಶಸ್ಸಿನ ಮೆಟ್ಟಿಲೇರಿದವರು.
ಇದನ್ನವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ ಕೂಡ. ನಾನು ಲತಾ ಮಂಗೇಶ್ಕರ್ ರೀತಿಯಲ್ಲೇ ಹಾಡಿದರೆ ಯಾರೂ ನನಗೆ ಕೆಲಸ ಕೊಡುವುದಿಲ್ಲ ಎಂಬುದು ವೃತ್ತಿ ಜೀವನದ ಆರಂಭದಲ್ಲೇ ಕಂಡುಕೊಂಡೆ. ಹಾಗಾಗಿಯೇ ನನ್ನ ಧ್ವನಿ, ಹಾಡಿನ ಶೈಲಿ ಎಲ್ಲವನ್ನೂ ನನ್ನದೇ ರೀತಿಯಲ್ಲಿ ರೂಪಿಸಿಕೊಂಡೆ' ಎನ್ನುತ್ತಾರೆ. 'ಲತಾ ದೀದಿ ಧ್ವನಿ ಮೆದು. ನಾನೂ ಅದೇ ರೀತಿಯಲ್ಲಿ ಹಾಡಿದರೆ ಉಪಯೋಗವಿಲ್ಲ ಎಂದೆನಿಸಿತು. ಆದರೆ ನನ್ನ ಧ್ವನಿ ಸ್ವಲ್ಪ ವಿಭಿನ್ನವಾಗಿತ್ತು. ಅದನ್ನು ಇನ್ನಷ್ಟು ಹರಿತಗೊಳಿಸಿ ನನ್ನದೇ ಧ್ವನಿಶೈಲಿ ಅಳವಡಿಸಿಕೊಂಡೆ' ಎನ್ನುತ್ತಾರೆ. ಮಹಾರಾಷ್ಟ್ರದ ಸಾಂಗ್ಲಿ ಬಳಿಯ ಗೋವಾರ್ ಎಂಬಲ್ಲಿ ೧೯೩೩ರಲ್ಲಿ ಜನನ. ಒಂಬತ್ತನೇ ವಯಸ್ಸಿನವರಿದ್ದಾಗಲೇ ತಂದೆ ದೀನಾನಾಥ್ ಮಂಗೇಶ್ಕರ್ ನಿಧನರಾದಾಗ, ಆರು ಜನರಿದ್ದ ಕುಟುಂಬ ಅಕ್ಷರಶಃ ಅನಾಥವಾಗಿತ್ತು. ಅಂದಿನಿಂದಲೇ ಶುರುವಾಗಿತ್ತು ಹೋರಾಟದ ಬದುಕು. ಹಿರಿಯಕ್ಕ ಲತಾ ಸಂಸಾರದ ನೊಗ ಹೊತ್ತಾಗ ಆಶಾ ಕೂಡ ಸುಮ್ಮನೆ ಕೂಡಲಿಲ್ಲ. ೧೯೪೩ರಲ್ಲಿ ಅಂದರೆ ೧೦ನೇ ವಯಸ್ಸಿಗೆ 'ಮಾಝಾ ಬಾಳ್' ಎಂಬ ಮರಾಠಿ ಚಿತ್ರದಲ್ಲಿ
ಚಲಾ ಚಲಾ ನವ ಬಾಳಾ’ ಗೀತೆಗೆ ದನಿಯಾದರು. ೧೯೪೮ರಲ್ಲಿ ‘ಸಾವನ್ ಆಯಾ’ ಚಿತ್ರದ ‘ಚುನರಿಯಾ’ ಹಾಡಿನ ಮೂಲಕ ಹಿಂದಿ ಚಿತ್ರರಂಗಕ್ಕೆ ಪದಾರ್ಪಣ.
ಹೀಗೆ ಚಿತ್ರರಂಗದಲ್ಲಿ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಸಾಗಿರುವಂತೆಯೇ ಒಂದು ಘಟನೆ ನಡೆದುಹೋಯಿತು. ಆಕೆಗಿನ್ನೂ ಹದಿನಾರರ ಹರಯ. ‘ಹುಚ್ಚುಕೋಡಿ ಮನಸು.. ಈ ಹದಿನಾರರ ವಯಸು..’ ಅಂತಾರಲ್ಲ ಹಾಗೆ. ಆಶಾ ಆಪ್ತ ಕಾರ್ಯದರ್ಶಿ ಗಣಪತರಾವ್ ಭೋಸ್ಲೆ ಅವರೊಟ್ಟಿನ ಪರಿಚಯ ಪ್ರೇಮವಾಗಿ ಬದಲಾಯಿತು. ಹಿಂದೆ ಮುಂದೆ ಯೋಚಿಸದೆ ಮದುವೆ ನಡೆದೇ ಹೋಯಿತು. ೧೬ರ ಆಶಾ, ೩೧ ರ ಗಣಪತರಾವ್ ಜೊತೆ ಸಪ್ತಪದಿ ತುಳಿದು ಆಶಾ ಬೋಸ್ಲೆ ಆದರು. ಈ ಮದುವೆಗೆ ಆಶಾ ಕುಟುಂಬದವರ ತೀವ್ರ ವಿರೋಧವಿತ್ತು. ದುರದೃಷ್ಟ. ವೈವಾಹಿಕ ಬದುಕಿನಲ್ಲಿ ಬಿರುಗಾಳಿ ಎದ್ದಿತು. ಅತ್ತೆ ಮನೆಯವರ ಕಾಟ-ಕಿರುಕುಳ. ಇನ್ನು ಅವರೊಟ್ಟಿಗೆ ಜೀವನ ಸಾಗಿಸುವುದು ಅಸಾಧ್ಯ ಎಂಬುದು ಮನದಟ್ಟಾಗುತ್ತಿದ್ದಂತೆ ಆಶಾ ಬೇರೆ ದಾರಿ ಇಲ್ಲದೆ ಮನೆ ತೊರೆಯಬೇಕಾಯಿತು. ಅದೂ ಮೂವರು ಪುಟ್ಟ ಮಕ್ಕಳೊಡನೆ. ಬದುಕಿನ ರಾಗ ತಾಳ ಪಲ್ಲವಿ ಎಲ್ಲ ಹದಗೆಟ್ಟಿತ್ತು. ಇತ್ತ ತವರು ಮನೆಯವರಿಂದಲೂ ಆ ಸಂದರ್ಭದಲ್ಲಿ ಬೆಂಬಲ ಸಿಗಲಿಲ್ಲವಂತೆ.
ಆದರೂ ಮನಸ್ಸನ್ನು ಕಲ್ಲು ಮಾಡಿಕೊಂಡ ಆಶಾ, ವೃತ್ತಿ ಜೀವನವನ್ನಾದರೂ ಸರಿ ಮಾಡಿಕೊಳ್ಳೋಣ ಎಂದರೆ ಅವಕಾಶಗಳೆಲ್ಲಿ ? ಅಕ್ಕ ಲತಾ ಅವರೇ ಆಶಾ ಹಾದಿಗೆ ಕಲ್ಲಾಗಿದ್ದರು. ಜೊತೆಗೆ ಗೀತಾ ದತ್, ಶಂಶಾದ್ ಬೇಗಂ ಥರದ ಇತರರೂ ಇದ್ದರು. ಹೀಗಾಗಿ ಕಡಿಮೆ ಬಜೆಟ್‌ನ, ಬಿ, ಸಿ ಗ್ರೇಡ್‌ನ ಚಿತ್ರಗಳು, ಕ್ಲಬ್, ಕ್ಯಾಬರೆ ಗೀತೆಗಳು- ಇಂಥ ಅವಕಾಶಗಳೇ ಸಿಗುತ್ತಿದ್ದವು. ಒಂದರ್ಥದಲ್ಲಿ ಬೇರೆಯವರು ತಿರಸ್ಕರಿಸಿದ್ದ ಹಾಡುಗಳು ಇವರಿಗೆ ಸಿಗುತ್ತಿದ್ದವು. ೧೯೫೪ ರಲ್ಲಿ ರಾಜ್‌ಕಪೂರ್ ಅವಕಾಶ ಕೊಟ್ಟರು. ‘ನನ್ಹೆ ಮುನ್ಹೆ ಬಚ್ಚೆ ತೇರೆ ಮುಟ್ಠೀ ಮೆ ಕ್ಯಾ ಹೈ..’ ಎಂಬ ಮೊಹಮ್ಮದ್ ರಫಿ ಜತೆಗಿನ ಈ ಹಾಡು ಜನಪ್ರಿಯವಾಯಿತು. ಹೀಗೆ ಒಂದೊಂದೇ ಮೆಟ್ಟಿಲು ಏರುತ್ತ, ಎಡರು ತೊಡರುಗಳನ್ನು ದಾಟುತ್ತ ಸಾಗಿರುವಂತೆ, ೧೯೫೬ರಲ್ಲಿ ಒ.ಪಿ ನಯ್ಯರ್ ಅವರು ಸಿಐಡಿ ಚಿತ್ರದಲ್ಲಿ ನೀಡಿದ ಅವಕಾಶ ಬ್ರೇಕ್ ನೀಡಿತು. ೫೭ರಲ್ಲಿ ಬಿ.ಆರ್ ಚೋಪ್ರಾ ಅವರ ನಯಾದೌರ್ ಚಿತ್ರವೂ ಕೈಹಿಡಿಯಿತು. ಮಾಂಗ್ ಕೆ ಸಾಥ್ ತುಮ್ಹಾರಾ, ಸಾಥೀ ಹಾಥ್ ಬಢಾನಾ.. ಇತ್ಯಾದಿ ಚಿತ್ರಗಳು ಜನಪ್ರಿಯ ಆದವು.
ಆದರೆ ಆಶಾಗೆ ಬಿಗ್ ಬ್ರೇಕ್ ಸಿಕ್ಕಿದ್ದು, ಅವರ ನೈಜ ಪ್ರತಿಭೆ ಬೆಳಕಿಗೆ ಬಂದಿದ್ದು ೧೯೬೬ರಲ್ಲಿ ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ ಅವರಿಂದ. ತೀಸ್ರಿ ಮಂಜಿಲ್’ ಚಿತ್ರ ಆಶಾರನ್ನು ಚಿತ್ರಜೀವನದ ಹೊಸ ಮಂಜಿಲ್‌ಗೆ ತಲುಪಿಸಿತು.
ಈ ಚಿತ್ರದ ಎಲ್ಲ ಹಾಡುಗಳು ಸೂಪರ್ ಹಿಟ್ ಆದವು. ಓ ಹಸೀನಾ ಝುಲ್ಫೆ ವಾಲಿ.., ಆಜಾ ಆಜಾ ಮೈ ಹೂ ಪ್ಯಾರ್ ತೇರಾ.., ಓ ಮೇರೆ ಸೋನಾ ರೆ.., ಮೊದಲಾದ ಹಾಡುಗಳು ಜನರ ಮನಸೂರೆಗೊಂಡವು. ಹಾಗೆಯೇ ಆರ್.ಡಿ ಬರ್ಮನ್‌ಗೂ ದೊಡ್ಡಮಟ್ಟದ ಜನಪ್ರಿಯತೆ ಮತ್ತು ಯಶಸ್ಸನ್ನು ತಂದುಕೊಟ್ಟಿತು. ಮೊದಲಿನಿಂದಲೂ ಪಾಶ್ಚಾತ್ಯ ಹಾಗೂ ಪಾಪ್ ಶೈಲಿಯ ಸಂಗೀತದತ್ತ ಒಲವು ಹೊಂದಿದ್ದ ಬರ್ಮನ್‌ಗೆ ಆಶಾ ಸೂಕ್ತ ‘ಧ್ವನಿ’ಯಾದರು. ಬರ್ಮನ್ ಸಂಗೀತ ಹಾಗೂ ಆಶಾ ಕಂಠ ಒಳ್ಳೇ ಕಾಂಬಿನೇಶನ್ ಆಯಿತು. ಪಿಯಾ ತೂ ಅಬ್ ತೊ ಆಜಾ; ಏ ಮೇರಾ ದಿಲ್ ಪ್ಯಾರ ಕಾ ದೀವಾನಾ; ದಮ್ ಮಾರೊ ದಮ್; ಚುರಾ ಲಿಯಾ ಹೈ ತುಮ್‌ನೇ ಜೊ ದಿಲ್ ಕೋ.. ಇಂಥ ಗೀತೆಗಳ ಪಟ್ಟಿ ಬೆಳೆಯುತ್ತದೆ.
ಈ ರೀತಿಯ ಜನಪ್ರಿಯ ಮತ್ತು ಹಿಟ್ ಗೀತೆಗಳಿಗೆ ಜೊತೆಯಾದ ಆಶಾ ಮತ್ತು ಆರ್.ಡಿ. ಬರ್ಮನ್ ಅವರ ನಡುವೆ ಕೆಮಿಸ್ಟ್ರಿ ಚೆನ್ನಾಗಿತ್ತು. ಹಾಗೆಯೇ ಇಬ್ಬರೂ ಪರಸ್ಪರ ಹತ್ತಿರವಾದರು. ಆಶಾ ಜೀವನದಲ್ಲಿ ‘ಪಂಚಮ ವೇದ’ ಪ್ರಾರಂಭವಾಗಿತ್ತು. ೧೯೮೦ ರಲ್ಲಿ ಇಬ್ಬರೂ ಮದುವೆಯಾದರು.
ಸಾಕಷ್ಟು ಜನಪ್ರಿಯತೆ ಪಡೆದಿದ್ದರೂ ಕ್ಯಾಬರೆ, ಕ್ಲಬ್ ಹಾಡುಗಳಿಗೆ ಲಾಯಕ್ಕು ಎಂಬಂತಾಗಿದ್ದ ಆಶಾ ೧೯೮೦ರ ಹೊತ್ತಿಗೆ ತಮ್ಮ ಇಮೇಜ್ ಬದಲಾಯಿಸಿಕೊಂಡರು. ಗಜಲ್ ಗೀತೆಗಳಿಗೂ ಧ್ವನಿಯಾದರು. ಉಮ್ರಾವ್‌ಜಾನ್ ಚಿತ್ರದ ದಿಲ್ ಚೀಜ್ ಕ್ಯಾ ಹೈ.., ಇನ್ ಆಂಖೊ ಕಿ ಮಸ್ತಿ ಮೇ.. ಇತ್ಯಾದಿ ಹಾಡುಗಳ ಮೂಲಕ ತಮ್ಮ ಗಾನ ಹರವಿನ ಹೊಸಮಗ್ಗುಲನ್ನು ತೋರಿಸಿದರು. ರಂಗೀಲಾ ಚಿತ್ರದಲ್ಲಿ ತನಹಾ ತನಹಾ.., ಲಗಾನ್ ಚಿತ್ರದ ‘ರಾಧಾ ಕೈಸೆ ನ ಜಲೆ’ ಮುಂತಾದ ಗೀತೆಗಳು ಅವರ ಧ್ವನಿಯಿಂದ ಮೂಡಿಬಂದಿವೆ.
ವೃತ್ತಿ, ವೈಯಕ್ತಿಕ ಬದುಕಿನಲ್ಲಿ ನೆಲೆಕಾಣಲು ಸಾಕಷ್ಟು ಪರಿಶ್ರಮ ಪಟ್ಟಿರುವ ಅಶಾ ಭೋಸ್ಲೆ ಅವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ. ೭೬ ಪ್ರಶಸ್ತಿಗಳು ಸಿಕ್ಕಿವೆ. ಈ ಪೈಕಿ ೭ ಫಿಲ್ಮ್ಫೇರ್ ಪ್ರಶಸ್ತಿಗಳು; ೨ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರಗಳು. ದಾದಾ ಸಾಹೇಬ್ ಫಾಲ್ಕೆ, ಗ್ರ್ಯಾಮಿ ಅವಾರ್ಡ್, ಬಿಬಿಸಿ ಜೀವಮಾನದ ಸಾಧನೆ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ ಮೊದಲಾದ ಹತ್ತು ಹಲವು ಪುರಸ್ಕಾರಗಳು ಆಶಾರನ್ನು ಅರಸಿ ಬಂದಿವೆ.
ಆರ್. ಡಿ ಬರ್ಮನ್‌ರಿಂದ ಮುಂಬೆಳಕಿಗೆ ಬಂದರೂ ಜಯದೇವ್, ಶಂಕರ್ ಜೈಕಿಶನ್, ಅನ್ನು ಮಲ್ಲಿಕ್, ಎಸ್. ಡಿ ಬರ್ಮನ್, ಇಳಯರಾಜಾ, ಎಆರ್ ರೆಹಮಾನ್ ಹೀಗೆ ಎಲ್ಲರ ಜೊತೆ ಕೆಲಸ ಮಾಡಿದ್ದಾರೆ. ಅಷ್ಟೇಕೆ, ಲತಾ ದೀದಿ ಜತೆಗೂ ಮುನಿಸು ಮರೆತು ಒಂದಾದರು. ಅವರೊಟ್ಟಿಗೂ ಯುಗಳಗೀತೆ ಹಾಡಿದ್ದಾರೆ. ಎಲ್ಲ ಬಗೆಯ ಗೀತೆಗಳಿಗೆ ಆಶಾ ಧ್ವನಿಯಾಗಿದ್ದು ಇದು ಅವರ ಕಂಠಸಿರಿಯ ತಾಕತ್ತು;
ಆಶಾ ಭೋಸ್ಲೆ ಅವರ ಇನ್ನೊಂದು ವೈಶಿಷ್ಟ್ಯ ಎಂದರೆ ಅವರೊಬ್ಬ ಅತ್ಯುತ್ತಮ ಪಾಕಪ್ರವೀಣೆ. ಸೊಗಸಾಗಿ ಅಡುಗೆ ಮಾಡುತ್ತಾರೆ. ಬಗೆ ಬಗೆಯ ಖಾದ್ಯಗಳನ್ನು ತಯಾರಿಸುವ ಕಲೆ ಗೊತ್ತು. ಸಂಗೀತ ಕ್ಷೇತ್ರ ಕೈಹಿಡಿಯದಿದ್ದರೆ ತಾವೊಬ್ಬ ಜನಪ್ರಿಯ ಕುಕ್ ಆಗುತ್ತಿದ್ದುದಾಗಿ ಆಶಾ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಈ ಅಭಿರುಚಿಯ ಮುಂದುವರಿದ ಭಾಗವಾಗಿ ಅವರು ಹಲವಾರು ರೆಸ್ಟೋರೆಂಟ್‌ಗಳಲ್ಲಿ ಪಾಲುದಾರಾಗಿದ್ದಾರೆ. ಮುಂಬೈ ಮಾತ್ರವಲ್ಲದೆ ದುಬೈ, ಕುವೈತ್, ಅಬುಧಾಬಿ, ಕೈರೋಗಳಲ್ಲೂ ಹೋಟೆಲ್ ನಡೆಸುತ್ತಿದ್ದಾರೆ. ಹೀಗೆ ಸಂಗೀತ ಹಾಗೂ ಅಡುಗೆ- ಎರಡರ ರಸದೌತಣವನ್ನು ಆಶಾ ಉಣಬಡಿಸುತ್ತಿದ್ದಾರೆ. ಆ ಲೆಕ್ಕದಲ್ಲಿ ಸಂಗೀತ ಸರಸ್ವತಿಯ ಜತೆಗೆ ಆಕೆ ಸಾಕ್ಷಾತ್ ಅನ್ನಪೂರ್ಣೇಶ್ವರಿ. ಆಶಾಗೆ ಇಬ್ಬರು ಗಂಡು ಮಕ್ಕಳು ಹಾಗೂ ಮಗಳು. ಹಿರಿಯ ಮಗ ಸಂಗೀತ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಕಿರಿಯ ಮಗ ಸದ್ಯ ಅವರ ಎಲ್ಲ ಕೆಲಸ ಕಾರ್ಯಗಳ ಉಸ್ತುವಾರಿ ನೊಡಿಕೊಳ್ಳುತ್ತಿದ್ದಾರೆ. ಪತ್ರಕರ್ತೆಯಾಗಿದ್ದ ಮಗಳು ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಇತ್ತೀಚೆಗೂ ಕೂಡ ಜೀವನದಲ್ಲಿ ಇಂಥ ಕೆಲವು ನೋವುಗಳನ್ನು ಆಶಾ ಉಂಡಿದ್ದಾರೆ. ಆದರೂ ಅವರು ಆಶಾವಾದಿಯೇ. ಅಂದ ಹಾಗೆ ಸೆಪ್ಟೆಂಬರ್ ೮ಕ್ಕೆ ಆಶಾ ಭೋಸ್ಲೆಗೆ ೯೦ನೇ ಜನ್ಮದಿನದ ಸಡಗರವಂತೂ ಸರಿಯೇ. ಆದರೆ ಅಂದು ದುಬೈನಲ್ಲಿ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಾಡಲಿದ್ದಾರೆ.ಹಾಡುಹಕ್ಕಿ ಹಾಡಿಲ್ಲದೆ ಬದುಕಲಾರದು ಎಂಬುದನ್ನು ಆಶಾ ನಿರೂಪಿಸಿದ್ದಾರೆ.
ಜನ್ಮದಿನದ ಶುಭಾಶಯಗಳು ಆಶಾತಾಯಿ.