ಬೆಂಗಳೂರು: ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪೊಲೀಸರೊಂದಿಗೆ ನಡೆದುಕೊಂಡ ರೀತಿ ಖಂಡನಾರ್ಹ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಕುರಿತಂತೆ ಇಂದು ಸಾಮಾಜಿಕ ಜಾಲತಾಣದಲ್ಲಿ ದೃಶ್ಯ ಹಂಚಿಕೊಂಡು ಪೋಸ್ಟ್ ಮಾಡಿ ಕಾಂಗ್ರೆಸ್ ಪಕ್ಷದ ಮಿತಿಮೀರಿದ ಓಲೈಕೆಯಿಂದ ಈಗಾಗಲೇ ಕೆಲ ನಿರ್ದಿಷ್ಟ ಸಮುದಾಯದ ಪುಂಡರು ಈ ನೆಲದ ಕಾನೂನಿನ ಮೇಲೆ ಸವಾರಿ ಮಾಡುತ್ತಿರುವ ಹಲವಾರು ಪ್ರಕರಣಗಳು ಈಗಾಗಲೇ ರಾಜ್ಯದಲ್ಲಿ ಜರುಗಿವೆ.
ದಾವಣಗೆರೆಯ ಚನ್ನಗಿರಿ, ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗಳ ಮೇಲಿನ ದಾಳಿ ಇದಕ್ಕೆ ಸ್ಪಷ್ಟ ನಿದರ್ಶನ.
ಹುಬ್ಬಳ್ಳಿ ಗಲಭೆ ಕೇಸ್‌ನಲ್ಲಿಯೂ ಅತೀ ಗಂಭೀರ ಪ್ರಕರಣದಲ್ಲಿ ಭಾಗಿಯಾದವರ ಮೇಲಿನ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ಕಾಂಗ್ರೆಸ್ ಪಕ್ಷವು ದೇಶದ ಸಂವಿಧಾನ & ಇಲ್ಲಿನ ಕಾನೂನು ಹಾಗೂ ಸುವ್ಯವಸ್ಥೆಗೆ ಧಕ್ಕೆ ತಂದು, ಗಲಭೆಕೋರರ ಬೆನ್ನಿಗೆ ನಿಂತಿದೆ.
ಬೆಳಗಾವಿಯಲ್ಲಿ ಸಾರ್ವಜನಿಕರ ಸಮ್ಮುಖದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ನಡೆದುಕೊಂಡ ರೀತಿ, ರಾಜ್ಯ ಪೊಲೀಸ್ ಇಲಾಖೆಯ ಘನತೆ & ಗೌರವವನ್ನು ತಗ್ಗಿಸಿ, ರಾಜ್ಯದಲ್ಲಿ ಗೂಂಡಾರಾಜ್ ಸ್ಥಾಪಿಸುವ ಪ್ರಕ್ರಿಯೆಯ ಮೊದಲ ಹೆಜ್ಜೆಯಂತೆ ಭಾಸವಾಗುತ್ತಿದೆ.
ರಾಜ್ಯದಲ್ಲಿ ಈಗಾಗಲೇ ಹದಗೆಟ್ಟಿರುವ ಕಾನೂನು & ಸುವ್ಯವಸ್ಥೆಯನ್ನು ಸರಿಪಡಿಸಲು, ಪೊಲೀಸ್ ಇಲಾಖೆಗೆ ನೈತಿಕ ಸ್ಥೈರ್ಯ ತುಂಬಬೇಕಾದ ಸರ್ಕಾರವೇ ಇಂದು ಪೊಲೀಸರ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಯತ್ನ ನಡೆಸಿದ್ದು ನಾಚಿಗೇಡಿನ ವಿಚಾರ.
ರಾಜ್ಯದ ಕಾನೂನು & ಸುವ್ಯವಸ್ಥೆಯನ್ನು ಬಲಿಕೊಟ್ಟು, ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ, ರಾಜ್ಯದ ಪೋಲೀಸ್ ಇಲಾಖೆಯನ್ನು ದುರ್ಬಲಗೊಳಿಸಿ, ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಸುವ ಕಾಂಗ್ರೆಸ್ ಸರ್ಕಾರದ ಟೂಲ್‌ಕಿಟ್ ಅನ್ನು ಇಂದಿನ ಬೆಳಗಾವಿಯ ಪ್ರಕರಣ ಬಯಲುಮಾಡಿದೆ.
ರಾಜ್ಯದಲ್ಲಿ ಮುಂದೆ ಏನಾದರೂ ಕಾನೂನು ಹಾಗೂ ಸುವ್ಯವಸ್ಥೆಗೆ ಭಂಗವಾದಲ್ಲಿ ಅದಕ್ಕೆ ನೇರ ಹೊಣೆ ಈ ಕಾಂಗ್ರೆಸ್ ಸರ್ಕಾರ ಮಾತ್ರ! ಎಂದಿದ್ದಾರೆ