ಸರ್ಕಾರ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ

0
33

ಬೆಂಗಳೂರು: ಇಂದು ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಕೆ.ಎ.ಎಸ್ ಪರೀಕ್ಷಾರ್ಥಿಗಳ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ


ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಬಡ ಕುಟುಂಬಗಳಿಂದ ಬಂದು ಜೀವನದಲ್ಲಿ ಸಾಧಿಸಬೇಕೆಂಬ ಛಲ, ಹುಮ್ಮಸ್ಸಿನಿಂದ ಅಹರ್ನಿಶಿ ಉದ್ಯೋಗದಲ್ಲಿದ್ದುಕೊಂಡು ಓದಿಕೊಳ್ಳುತ್ತಾ ಇರುವ ಪರೀಕ್ಷಾರ್ಥಿಗಳ ಪರ ಇರಬೇಕಾದ ಸರ್ಕಾರ ತರಾತುರಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ಖಂಡನೀಯ. ಗಾಯಕ್ಕೆ ಬರೆ ಇಟ್ಟಂತೆ, ಅಭ್ಯರ್ಥಿ ಬರೆಯಬೇಕಾದ ಊರುಗಳಿಂದ ದೂರದೂರುಗಳಿಗೆ ಪರೀಕ್ಷೆಯ ಸೆಂಟರ್ ನಿಗದಿ ಮಾಡಿರುವ ತರ್ಕ ಏನೆಂದು ಸರ್ಕಾರವೇ ಬಿಡಿಸಿ ಹೇಳಬೇಕು. ವಾರಾಂತ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇರುವ ಒಂದು ಪ್ರತೀತಿಯನ್ನು ಬದಲಿಸಿ ವಾರದ ದಿನ ಪರೀಕ್ಷೆಯನ್ನಿಟ್ಟಿರುವುದು ಖಾಸಗಿ, ಐ.ಟಿ., ವಲಯಗಳಲ್ಲಿ ಕೆಲಸ ಮಾಡುತ್ತಿರುವ ಪರೀಕ್ಷಾರ್ಥಿಗಳಿಗೆ ಸಾಕಷ್ಟು ಸಮಸ್ಯೆಯಾಗಿದೆ. ಇನ್ನು, ದೂರದೂರುಗಳಿಗೆ ಹೋಗಬೇಕಾದವರು ಒಂದು ದಿನ ಮುಂಗಡವಾಗಿ ಹೋಗಬೇಕು, ಒಂದು ಪರೀಕ್ಷೆ ಬರೆಯುವುದಕ್ಕೆ ಎರಡು ದಿನ ರಜೆ ಪಡೆಯುವಂತ ಅವೈಜ್ಞಾನಿಕ ವೇಳಾಪಟ್ಟಿಯನ್ನು ಮಾಡಿರುವುದು ಪ್ರಶ್ನಾರ್ಹ ಹಾಗೂ ಅತಾರ್ಕಿಕವಾಗಿದೆ. ಸರ್ಕಾರ ವಿದ್ಯಾರ್ಥಿಗಳ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ, ಭ್ರಷ್ಟಾಚಾರದ ಕೂಪವಾಗಿರುವ ಲೋಕ ಸೇವಾ ಆಯೋಗಕ್ಕೆ ಯೋಗ್ಯ, ಸಮರ್ಥ, ದಕ್ಷ ಅಧಿಕಾರಿ, ಸಿಬ್ಬಂದಿಗಳನ್ನು ನೇಮಿಸಿ ಪರೀಕ್ಷಾರ್ಥಿಗಳ ಹಿತವನ್ನು ಕಾಪಾಡಲಿ ಎಂದಿದ್ದಾರೆ.

Previous articleಸಂಸ್ಥೆಗಳ ಪಾಡೇನು ಎಂಬುದರ ಬಗ್ಗೆ ತಾವು ಉತ್ತರ ನೀಡುವಿರಾ?
Next articleಎಲ್ಲಾ ಇಲಾಖೆಗಳ ನಾಮಫಲಕದಲ್ಲಿ ಕನ್ನಡ ಕಡ್ಡಾಯ