ಹುಬ್ಬಳ್ಳಿ: ರಾಜ್ಯದ ಅಭಿವೃದ್ಧಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಎಸ್.ಟಿ.ಪಿ, ಟಿ.ಎಸ್.ಪಿ ಹಣ ದುರ್ಬಳಕೆ ಮಾಡಿಕೊಂಡಿದೆ. ಅನುದಾನ ದುರುಪಯೋಗ ಮಾಡಿಕೊಂಡಿದೆ. ರೈತ ವಿರೋಧಿ, ದಲಿತ ವಿರೋಧಿ ಹಾಗೂ ಅಭಿವೃದ್ಧಿ ವಿರೋಧಿ ಸರ್ಕಾರ ಆಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಪಿ.ರಾಜೀವ್ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿರುವ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿಗಳಿಗೆ ಹಣ ಹೊಂದಿಸಲು ಹೆಣಗಾಡುತ್ತಿದೆ. ಅದಕ್ಕಾಗಿಯೇ ಬೆಲೆ ಏರಿಕೆಯ ತಂತ್ರಕ್ಕೆ ಮುಂದಾಗಿ ಜನರ ಜೀವನದ ಜೊತೆ ಚಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.
ನಟಿ ರನ್ಯಾ ರಾವ್ ಜೊತೆಗೆ ಇಬ್ಬರು ಸಚಿವರ ನಂಟು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಮಾಜಿ ಪೊಲೀಸ್ ಅಧಿಕಾರಿಯಾಗಿ ಹೇಳುತ್ತೇನೆ. ಕೇವಲ ರನ್ಯಾ ರಾವ್ ಅವರನ್ನ ಭೇಟಿ ಆಗುವುದು, ಫೋಟೋ ತೆಗೆದುಕೊಳ್ಳುವುದು ಮಾತನಾಡುವುದರಿಂದ ಅಪರಾಧ ಪ್ರಕರಣಕ್ಕೆ ಬರಲ್ಲ. ಇದರಲ್ಲಿ ಸ್ಮಗ್ಲಿಂಗ್ ಪ್ರಕರಣದಲ್ಲಿ ಸಚಿವರು ಪಾಲ್ಗೊಂಡರೆ ಅದು ಅಪರಾಧ ಆಗುತ್ತದೆ ಎಂದು ಮಾಹಿತಿ ನೀಡಿದರು.