ನಂದಿ ಸಕ್ಕರೆ ಕಾರ್ಖಾನೆ ಉಳಿಸಲು ಅಸಾಧ್ಯವಾದರೆ ರಾಜಕಾರಣ ಏಕೆ ಬೇಕು?

0
41

ವಿಜಯಪುರ: ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಯದೇ ಹೋದರೆ ಯಾವ ಸಹಕಾರಿ ಸಕ್ಕರೆ ಕಾರ್ಖಾನೆ ಉಳಿಯುವುದಿಲ್ಲ, ಈ ಕಾರ್ಖಾನೆ ಮೇಲೆತ್ತಲು ಸಾಧ್ಯವಾಗದೇ ಹೋದರೆ ರಾಜಕಾರಣ ಯಾಕೆ ಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬಬಲೇಶ್ವರ ತಾಲೂಕಿನ ಕೃಷ್ಣಾನಗರದಲ್ಲಿರುವ ರೈತ ಸಭಾಭವನದಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸಹಕಾರಿ ಧುರೀಣ ದಿ.ಕೆ.ಎಚ್. ಪಾಟೀಲ ಅವರ ಜನ್ಮಶತಮಾನೋತ್ಸವ ಹಾಗೂ ಹೊಸ ಷೇರುಗಳ ಬಿಡುಗಡೆ ಸಮಾರಂಭ ಉದ್ಘಾಟಿಸಿ ಭಾವುಕರಾಗಿ ಮಾತನಾಡಿ, ಈ ಸಹಕಾರ ವಲಯದ ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳದೇ ಹೋದರೆ ರಾಜಕಾರಣದಲ್ಲಿ ಇರುವ ಅರ್ಥವೇನು ಎಂದು ಪ್ರಶ್ನಿಸಿದರು.
ಎನ್‌ಸಿಡಿಸಿಯಿಂದ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ಸಾಲ ಸೌಲಭ್ಯ ಒದಗಿಸಬೇಕು, ರಾಜ್ಯ ಸರ್ಕಾರ ಇದಕ್ಕೆ ಶ್ಯೂರಿಟಿ ವಹಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಂದಿ ಕಾರ್ಖಾನೆ ಅಕಸ್ಮಾತ್ತಾಗಿ ಏನಾದರೂ ಆದರೆ ರಾಜ್ಯದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳು ಒಂದು ಉಳಿಯುವುದಿಲ್ಲ ಎಂದರು. ಬದಲಾದ ಪರಿಸ್ಥಿತಿಯಲ್ಲಿ ಇಂದು ಏಳು ಸಕ್ಕರೆ ಕಾರ್ಖಾನೆಗಳು ತೊಂದರೆಯಲ್ಲಿವೆ. ಅವುಗಳಿಗೆ ಬಲ ತುಂಬುವ ಕೆಲಸ ಎಲ್ಲರೂ ಮಾಡಬೇಕಿದೆ ಎಂದರು.
ನಾಲ್ಕೈದು ಸಹಕಾರಿ ಸಕ್ಕರೆ ಕಾರ್ಖಾನೆ ಮೇಲೆತ್ತದೆ ಹೋದರೆ ನಮಗೆ ರಾಜಕಾರಣ ಯಾಕೆ ಬೇಕು. ಹಿಂದೆ ನಾಯಕರು ಸಹಕಾರಿ ಸಂಸ್ಥೆ, ಕೈಗಾರಿಕೆಗಳು, ಶಿಕ್ಷಣಗಳನ್ನು ಕಟ್ಟಿ ದೊಡ್ಡವರಾದರು. ಈಗಿನ ನಾಯಕರು ಆ ಸಂಸ್ಥೆಗಳನ್ನು ಕಿತ್ತುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ನಾವು ಸಾರ್ವಜನಿಕ ಆಸ್ತಿ ಸೃಷ್ಟಿಸಬೇಕೆ ಹೊರತು ಸ್ವಂತಕ್ಕೆ ಅಲ್ಲ ಎಂದರು. ಉತ್ತಮ ಚಿಂತನೆ ಹೊಂದಿರುವ ಅಧ್ಯಕ್ಷ ಕುಮಾರ ದೇಸಾಯಿ ಅವರ ನೇತೃತ್ವದಲ್ಲಿ ೨೫ ಕೋಟಿ ರೂ.ಗಳಷ್ಟು ಷೇರು ಸಂಗ್ರಹ ಮಾಡಿರುವುದು ಶ್ಲಾಘನೀಯ ಎಂದರು.
ನಂದಿ ಸಕ್ಕರೆ ಕಾರ್ಖಾನೆಯೊಳಗೆ ಮೊದಲು ಷೇರು ಕೆ.ಎಚ್. ಪಾಟೀಲರ ಹೆಸರಲ್ಲಿ ತೆಗೆದಿದ್ದೀರಿ. ಇದು ಅವರ ಬಗ್ಗೆ ಜನ ಇಟ್ಟಿರುವ ಅಭಿಮಾನ ತೋರುತ್ತದೆ ಎಂದರು.
ರೈತರು ಉಳಿಯಲು ಈ ಕಾರ್ಖಾನೆ ಉಳಿಯಬೇಕಿದೆ. ಜನರ ಕಾರ್ಖಾನೆಯಾಗಿ ಉಳಿಯಲು ನಾವೆಲ್ಲರೂ ಸೇರಿ ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಯಾದರೂ ಉಳಿಸುವ ಪ್ರಯತ್ನ ಮಾಡೋಣ ಎಂದರು. ಉತ್ತರ ಕರ್ನಾಟಕಕ್ಕೆ ಅನುಕೂಲವಾಗಲ ಎಲ್ಲರೂ ಗಟ್ಟಿಯಾಗಿ ನಿಲ್ಲೋಣ, ರೈತರ, ಮುಳುಗಡೆ ಸಂತ್ರಸ್ತರ ಕಲ್ಯಾಣ ಮಾಡುವ ದಿವ್ಯ ಸಂಕಲ್ಪ ಮಾಡೋಣ ಎಂದರು.
ಮಾಜಿ ಸಚಿವ ಎಸ್.ಆರ್. ಪಾಟೀಲರು ೧ ಕೋಟಿ ರೂ. ಮೊತ್ತದ ಷೇರುಗಳನ್ನು ಖರೀದಿಸಿದರು. ಇನ್ನೂ ನನ್ನ ಸಂಪರ್ಕದಲ್ಲಿ ಬರುವ ಆಪ್ತರಿಂದಲೂ ಷೇರು ಖರೀದಿ ಮಾಡಿಸುವೆ ಎಂದರು.

Previous articleಕುಡುಕ ಮಗನ ಕೊಂದ ತಂದೆ
Next articleಸಾಣಾಪುರ ಪ್ರಕರಣದ ಮೂರನೇ ಆರೋಪಿ ಸೆರೆ