ಜಮ್ಮುವಿನಲ್ಲಿ ಸೇನಾ ಟ್ರಕ್ ದುರಂತ: ಬೀಜಾಡಿಯ ಯೋಧ ಹುತಾತ್ಮ

0
27

ಕುಂದಾಪುರ: ಸೇನಾ ಟ್ರಕ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಬಿದ್ದ ಘಟನೆ ಪೂಂಚ್ ಜಿಲ್ಲೆಯ ಮೆಂಧರ್ ಪ್ರದೇಶದ ಬಲ್ನೋಯಿ ಪ್ರದೇಶದಲ್ಲಿ ನಡೆದಿದ್ದು ಈ ಟ್ರಕ್​ನಲ್ಲಿ ದೇಶ ಕಾಯುವ ಯೋಧರು ಪ್ರಯಾಣಿಸುತ್ತಿದ್ದು, ಇದರಲ್ಲಿ ಕರ್ನಾಟಕದ ಮೂವರು ಯೋಧ ಸೇರಿ ಐವರು ಮೃತಪಟ್ಟಿದ್ದಾರೆ. ಈ ಪೈಕಿ ಓರ್ವ ಯೋಧ ಕುಂದಾಪುರ ಬೀಜಾಡಿಯ ಅನೂಪ್ ಪೂಜಾರಿ(31) ಎಂದು ತಿಳಿದುಬಂದಿದೆ.
ಬೀಜಾಡಿ ನಿವಾಸಿ ಚಂದು ಪೂಜಾರಿ, ನಾರಾಯಣ ಪೂಜಾರಿ ದಂಪತಿಯ ಪುತ್ರ ಅನೂಪ್ ಪೂಜಾರಿ ಸೇನೆಗೆ ಸೇರಿ 13 ವರ್ಷವಾಗಿತ್ತು. ಅವರು ಮರಾಠ ಲೈಟ್ ಇನ್ಫೆಂಟ್ರಿ ಬೆಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಹುತಾತ್ಮರಾದ ಯೋಧ ಅನೂಪ್ ಅವರಿಗೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಕಳೆದ ತಿಂಗಳು ರಜೆಗೆ ಆಗಮಿಸಿದ್ದ ಅವರು ಡಿ. 15ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದಲ್ಲದೆ ಮಗಳ ಹುಟ್ಟುಹಬ್ಬವನ್ನು ಕೂಡಾ ಆಚರಿಸಿದ್ದರು. ಹುತಾತ್ಮ ಯೋಧ ಅನೂಪ್ ತಾಯಿ, ಇಬ್ಬರು ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ನಾಳೆ(ಗುರುವಾರ) ತೆಕ್ಕಟ್ಟೆಯಿಂದ ಪಾರ್ಥಿವ ಶರೀರವನ್ನು ತೆರೆದ ವಾಹನದಲ್ಲಿ ಕೋಟೇಶ್ವರ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಂದು ಸಕಲ ವಿಧಿಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಬೀಜಾಡಿ ಪಡುಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಮಾಜ ಸೇವಕ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾ.ಪಂ. ಅಧ್ಯಕ್ಷ ಪ್ರಕಾಶ್ ಪೂಜಾರಿ, ಗ್ರಾಮಸ್ತರ ನೇತೃತ್ವದಲ್ಲಿ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗುತ್ತಿದೆ.
ಮನೆಯಲ್ಲಿ ಮುಗಿಲುಮುಟ್ಟಿದ ಆಕ್ರಂದನ:
ಸೈನಿಕ ಅನೂಪ್ ಪೂಜಾರಿಯವರೊಂದಿಗೆ ಸೇವೆಯಲ್ಲಿ ಜೊತೆಗಿದ್ದು ಸದ್ಯ ರಜಾದಲ್ಲಿ ಊರಾದ ಚಿಕ್ಕೋಡಿಗೆ ಬಂದಿದ್ದ ಯೋಧ ಆಂಜನೇಯ ಪಾಟೀಲ್ ತನ್ನ ಸಹೋದರನೊಂದಿಗೆ ತಡರಾತ್ರಿ ಹೊರಟು ಬಂದು ಬೆಳಿಗ್ಗೆ ಮೃತ ಯೋಧನ ಮನೆಗೆ ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಕುಟುಂಬಿಕರ ಆಕ್ರಂದನ ಮುಗಿಲುಮುಟ್ಟಿದೆ.
ಘಟನೆ ಹಿನ್ನೆಲೆ:
ಮಂಗಳವಾರ ಸಂಜೆ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನವು ರಸ್ತೆಯಿಂದ ಕಣಿವೆಗೆ ಉರುಳಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಸೇನಾ ವಾಹನಲ್ಲಿ 18 ಯೋಧರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇದರಲ್ಲಿ 5 ಮಂದಿ ಹುತಾತ್ಮರಾಗಿದ್ದಾರೆ. ಉಳಿದವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Previous articleಧರ್ಮಸ್ಥಳಕ್ಕೂ ಹೋಗುತ್ತೇನೆ, ಸವದತ್ತಿಗೂ ಹೋಗುತ್ತೇನೆ…
Next articleಸರ್ಕಾರ ಪೊಲೀಸ್ ಇಲಾಖೆ ನೈತಿಕತೆ ಕುಸಿಯುವಂತೆ ಮಾಡಿದೆ