ಹಾವೇರಿ: ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ ವಿಚಾರಣಾಧೀನ ಖೈದಿಯೊಬ್ಬ ಅನುಮಾನಾಸ್ಪದವಾಗಿ ಕಾರಾಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದಡಿ ಜೈಲ್‌ನ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.
ಕಾರಾಗೃಹದ ಮುಖ್ಯವೀಕ್ಷಕರಾದ ಕೆ.ಡಿ. ಮಾದರ್, ಎಸ್. ಪ್ರಭು, ಅಂಬರೀಶ್ ಹಾವೇರಿ ಎಂಬುವರನ್ನು ಕರ್ತವ್ಯ ಲೋಪದಡಿ ಬೆಳಗಾವಿ ಡಿಐಜಿ ಅಮಾನತುಗೊಳಿಸಿದ್ದಾರೆ ಎಂದು ಜಿಲ್ಲಾಕಾರಗೃಹದ ಅಧೀಕ್ಷಕಿ ವೈ.ಡಿ. ನಾಗರತ್ನ ತಿಳಿಸಿದ್ದಾರೆ.
ಸವಣೂರು ತಾಲೂಕಿನ ಹತ್ತಿಮತ್ತೂರ ಗ್ರಾಮದ ಕೋಟೆಪ್ಪ ಅಂಬಿಗೇರ(43) ಎಂಬ ಖೈದಿ ಜಿಲ್ಲಾ ಕಾರಾಗೃಹದ ಸ್ಟೋರ್ ರೂಂನಲ್ಲಿ ಮಾ. 2ರ ರವಿವಾರ ನೇಣಿಗೆ ಶರಣಾಗಿದ್ದನು. ಈತ ಜಿಲ್ಲೆಯ ಸವಣೂರು ತಾಲೂಕು ಹತ್ತಿಮತ್ತೂರ ಗ್ರಾಮದಲ್ಲಿ 2018ರ ಜೂನ್ ತಿಂಗಳಲ್ಲಿ ಅನೈತಿಕ ಸಂಬಂಧದ ವಿಚಾರಕ್ಕೆ ಇಬ್ಬರನ್ನು ಬರ್ಬರವಾಗಿ ಕೊಲೆಗೈದು ಜೈಲು ಸೇರಿದ್ದ. ಈ ಪ್ರಕರಣ ಇನ್ನೂ ವಿಚಾರಣೆ ನಡೆದಿತ್ತು.
ಕಾರಾಗೃಹದ ಅಡುಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕೋಟೆಪ್ಪ ರವಿವಾರ ಬೆಳಗ್ಗೆ ಸ್ಟೋರ್ ರೂಂನಲ್ಲಿ ಸಾಮಗ್ರಿ ತರಲು ಹೋಗುತ್ತೇನೆಂದು ಹೋಗಿ ನೇಣಿಗೆ ಶರಣಾಗಿದ್ದ. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ, ನ್ಯಾಯಾಂಗ ತನಿಖೆ ನಡೆದಿತ್ತು. ಈಗ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ.