ಕೋಲಾರ: ಕ್ಲಾಕ್‌ಟವರ್‌ ಬಳಿ ಆರ್‌ಎಸ್‌ಎಸ್ ಪಥಸಂಚಲನ

0
24

ಕೋಲಾರ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದ ಹಿನ್ನಲೆಯಲ್ಲಿ ಭಾನುವಾರ ಸಂಜೆ ನಗರದಲ್ಲಿ ಹಮ್ಮಿಕೊಂಡಿದ್ದ ದೀರ್ಘ ಸಂಚಲನದ ವೇಳೆ ಮುಸ್ಲಿಂ ಬಾಹುಳ್ಯದ ಪ್ರದೇಶವಾದ ಕ್ಲಾಕ್‌ಟವರ್‌ಗೆ ಪ್ರವೇಶಿಸಬಾರದು ಎಂದು ಕೋಲಾರ ಜಿಲ್ಲಾಡಳಿತ ನಿರ್ಬಂಧಿಸಿದ್ದ ಆದೇಶಕ್ಕೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರುವ ಮೂಲಕ ಗಣವೇಷಧಾರಿಗಳು ಭಾನುವಾರ ರಾತ್ರಿ ಕ್ಲಾಕ್‌ಟವರ್‌ನಲ್ಲಿ ಸುಗಮವಾಗಿ ಪಥ ಸಂಚಲನ ನಡೆಸಿದರು.
ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಒಳಗೊಂಡ ಆರ್‌ಎಸ್‌ಎಸ್ ವಿಭಾಗೀಯ ಸಂಚಲನದಲ್ಲಿ ಮಾಜಿ ಸಂಸತ್ ಸದಸ್ಯ ಎಸ್.ಮುನಿಸ್ವಾಮಿ ಸೇರಿದಂತೆ ಸುಮಾರು ೩೦೦೦ ಸ್ವಯಂಸೇವಕರು ಭಾಗವಹಿಸಿದ್ದರು. ಕೋಲಾರ ತಾಲ್ಲೂಕು ವಕ್ಕಲೇರಿಯಿಂದ ಕೋಲಾರದವರೆಗೆ ೧೫ ಕಿಮೀ ದೀರ್ಘ ಸಂಚಲನವು ಕ್ಲಾಕ್‌ಟವರ್ ಪ್ರವೇಶಿಸಬಾರದು ಎಂಬ ಕಾರಣಕ್ಕೆ ಜಿಲ್ಲಾಡಳಿತವು ಶನಿವಾರ ರಾತ್ರಿ ಆ ಭಾಗದಲ್ಲಿ ೧೪೪ನೇ ವಿಧಿಯಂತೆ ನಿಷೇದಾಜ್ಞೆ ಜಾರಿಗೊಳಿಸಿತ್ತು.
ಇದರ ವಿರುದ್ಧ ಸಂಘಟಕರು ಭಾನುವಾರ ಹೈಕೋರ್ಟ್ ಮೊರೆ ಹೋಗಿದ್ದರು. ತುರ್ತು ವಿಚಾರಣೆ ನಡೆಸಿದ ನ್ಯಾಯಾಲಯ ಭಾನುವಾರ ಮಧ್ಯಾಹ್ನ ಜಿಲ್ಲಾಡಳಿತ ವಿಧಿಸಿದ್ದ ನಿಷೇದವನ್ನು ತೆರವುಗೊಳಿಸಿತು. ಇದರ ಕಾರಣ ಗಣವೇಷಧಾರಿಗಳು ಕ್ಲಾಕ್‌ಟವರ್ ಮಾರ್ಗದಲ್ಲಿಯೇ ಕೋಲಾರ ನಗರವನ್ನು ರಾತ್ರಿ ೮ ಗಂಟೆ ವೇಳೆಗೆ ಪ್ರವೇಶಿಸಿದರು.
ಭಾನುವಾರ ಸಂಜೆ ಹೈಕೋಟ್ ಆದೇಶ ಬಂದ ನಂತರ ಜಿಲ್ಲಾಡಳಿತವು ಕ್ಲಾಕ್‌ಟವರ್ ಪ್ರದೇಶದಲ್ಲಿ ಭಾರೀ ಬಂದೋಬಸ್ತು ಮಾಡಿತ್ತು. ಕೇಂದ್ರ ವಲಯ ಐ.ಜಿ ಲಾಬೂರಾಂ ಸೇರಿದಂತೆ ಐವರು ಎಸ್ಪಿಗಳು, ೧೫ ಡಿವೈಎಸ್ಪಿಗಳು ಹಾಗೂ ೬೦೦ ಮಂದಿ ಪೊಲೀಸರನ್ನು ಕ್ಲಾಕ್‌ಟವರ್‌ನಲ್ಲಿ ನಿಯೋಜಿಸಲಾಗಿತ್ತು. ರಾತ್ರಿ ೭-೩೦ರ ವೇಳೆಗೆ ಕೋಲಾರ ನಗರ ಪ್ರವೇಶಿಸಿದ ಪಥ ಸಂಚಲನವು ೮-೩೦ರ ವೇಳೆಗೆ ನಗರದ ಜೂನಿಯರ್ ಕಾಲೇಜು ಮೈದಾನ ತಲುಪಿದ ನಂತರ ಪೊಲೀಸರು ನಿಟ್ಟುಸಿರು ಬಿಟ್ಟರು. ಪೊಲೀಸರು ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ಬಂದೋಬಸ್ತು ನೀಡಿ ಅವರವರ ಜಿಲ್ಲೆಗಳಿಗೆ ಕಳಿಸಿಕೊಟ್ಟರು.

Previous articleಪ್ರಸಿದ್ಧ ಕಾದಂಬರಿಕಾರ ನಾ. ಡಿಸೋಜ ಇನ್ನಿಲ್ಲ
Next articleಆಧುನಿಕ ಜಗತ್ತಿನ ಸವಾಲು ಎದುರಿಸಿ ಜನರ ಕಣ್ಣು ರಕ್ಷಿಸಿ: ಸಚಿವ ಲಾಡ್