ಕಾಂಗ್ರೆಸ್ ಸರಕಾರವನ್ನು ದೇವರು ಕೈ ಬಿಡುತ್ತಾರೆ..

0
20

ಮಂಗಳೂರು: ಶಾಲೆಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿ ರಾಜ್ಯ ಕಾಂಗ್ರೆಸ್ ಸರಕಾರ ಹೊರಡಿಸಿರುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ
ಚೌತಿ, ಅಷ್ಟಮಿ, ನವರಾತ್ರಿ ಉತ್ಸವಗಳನ್ನು ನಡೆಸದಂತೆ ಆದೇಶಿಸಿರುವ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ದೇವರೂ ಕೈಬಿಡುತ್ತಾರೆ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಶಾಲೆಗಳ ಆವರಣದಲ್ಲಿ ಸಾರ್ವಜನಿಕ ಗಣೇಶೋತ್ಸವ, ಮೊಸರು ಕುಡಿಕೆ, ಶಾರದೋತ್ಸವ ಸಹಿತ ಹಿಂದು ಹಬ್ಬಗಳ ಆಚರಣೆಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿರುವ ರಾಜ್ಯ ಸರಕಾರದ ನಿಲುವನ್ನು ಖಂಡಿಸಿ ಮಂಗಳೂರು ದಕ್ಷಿಣ ಮಂಡಲ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದ ಮಿನಿ ವಿಧಾನಸೌಧ ಮುಂಭಾಗ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಶಾಲೆಗಳು ಕಾಂಗ್ರೆಸ್ನ ಆಸ್ತಿಯಲ್ಲಘಿ. ಬಾಲಗಂಗಾಧರ ತಿಲಕ್ ಅವರು ಸಮಾಜವನ್ನು ಒಟ್ಟುಗೂಡಿಸಲು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು ಎಂಬುದನ್ನು ಕಾಂಗ್ರೆಸ್ ಪಕ್ಷ ಮರೆತಂತಿದೆ. ನೂರಾರು ವರ್ಷಗಳಿಂದ ಶಾಲೆಗಳಲ್ಲಿ ಅಷ್ಟಮಿ, ಚೌತಿ, ಶಾರದೋತ್ಸವ ಆಚರಿಸಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರೂ ಈ ಸಮಿತಿಗಳಲ್ಲಿ ಇದ್ದಾರೆ. ಆದರೆ, ರಾಜ್ಯ ಸರಕಾರದ ಈ ಆದೇಶದ ವಿರುದ್ಧ ಒಬ್ಬನೇ ಕಾಂಗ್ರೆಸಿಗ ತುಟಿಬಿಚ್ಚುತ್ತಿಲ್ಲ. ಕಾಂಗ್ರೆಸಿಗರೇ, ನೀವು ಯಾಕೆ ಮೌನವಾಗಿದ್ದೀರಿ? ನಿಮಗೆ ಧರ್ಮಕ್ಕಿಂತ ಅಧಿಕಾರ ಲಾಲಸೆಯೇ ಮುಖ್ಯವೇ ಎಂದು ಪ್ರಶ್ನಿಸಿದರು. ಶಾಲೆಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿದ ಆದೇಶ ವಾಪಸ್ ಪಡೆಯದಿದ್ದರೆ ಗ್ರಾಮ, ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಿದ್ದೇವೆ. ಸರಕಾರದ ನಿರ್ಬಂಧ ಇದ್ದರೂ ಈ ಹಿಂದೆ ನಡೆಯುತ್ತಿದ್ದಂತೆ ಶಾಲೆಗಳಲ್ಲಿ ಹಬ್ಬಗಳ ಆಚರಣೆ ನಡೆಸಿಯೇ ಸಿದ್ದ. ಈ ಆದೇಶದ ವಿರುದ್ಧ ಸಂಘ ಸಂಸ್ಥೆಗಳು, ಗಣೇಶೋತ್ಸವ ಸಮಿತಿಗಳು, ಸಾರ್ವಜನಿಕರೂ ಪ್ರತಿಭಟನೆ ನಡೆಸಬೇಕು ಎಂದು ಕರೆ ನೀಡಿದರು. ಮೇಯರ್ ಸುಧೀರ್ ಶೆಟ್ಟಿಮಾತನಾಡಿ, ಸನಾತನ ಪರಂಪರೆಯನ್ನು ಸಿದ್ದರಾಮಯ್ಯ ಅವರ ಸರಕಾರ ಪ್ರಶ್ನೆ ಮಾಡುತ್ತಿದೆ. ರಾಜ್ಯ ಸರಕಾರದ ಹಗರಣಗಳ ದಿಕ್ಕು ತಪ್ಪಿಸಲು ಈ ಆದೇಶ ಮಾಡಲಾಗಿದೆ. ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಗೆ ಯಾವುದೇ ಅನುದಾನ ನೀಡದ ರಾಜ್ಯ ಕಾಂಗ್ರೆಸ್ ಸರಕಾರ ಇಂತಹಾ ಆದೇಶಗಳ ಮೂಲಕ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು. ಮುಡಾ ಮಾಜಿ ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸಹಿತ ಕಾಂಗ್ರೆಸಿಗರು ಹಿಂದು ವಿರೋಧಿ ನೀತಿ ಅನುರಿಸುತ್ತಿದ್ದಾರೆ. ಶಾಲೆಗಳಲ್ಲಿ ಗಣೇಶೋತ್ಸವ, ಅಷ್ಟಮಿ ಆಚರಣೆ ನಿರ್ಬಂಧಿಸುವ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಹಿಂದುಗಳ ವಿರುದ್ಧ ಸದಾ ದ್ವೇಷದ ಭಾವನೆ ಪ್ರದರ್ಶಿಸುತ್ತಿದೆ. ಲೋಕಸಭೆಯಲ್ಲಿ ಹಿಂದುಗಳ ವಿರುದ್ಧ ಮಾತನಾಡಿದ ರಾಹುಲ್ ಗಾಂಧಿ ಅವರಿಗೆ ಯುವಮೋರ್ಚಾ ಪ್ರತಿಭಟನೆ ಮೂಲಕ ತಕ್ಕ ಉತ್ತರ ನೀಡಿದೆ. ಶಾಲೆಗಳಲ್ಲಿ ಗಣೇಶೋತ್ಸವ ಸಹಿತ ಹಬ್ಬಗಳ ಆಚರಣೆ ನಿರ್ಬಂಧ ತೆರವುಗೊಳಿಸುವವರೆಗೂ ಹೋರಾಟ ನಡೆಸುತ್ತೇವೆ ಎಂದರು.
ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ. ಯತೀಶ್ ಆರ್ವಾರ್, ಕಿಶೋರ್ ಕುಮಾರ್ ಬೊಟ್ಯಾಡಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಮಂಜುಳಾ ರಾವ್, ಪ್ರಮುಖರಾದ ನಿತಿನ್ ಕುಮಾರ್, ಪೂರ್ಣಿಮಾ, ಅಶ್ವಿತ್ ಕೊಟ್ಟಾರಿ, ಮೌನೀಶ್ ಚೌಟ ಮೊದಲಾದವರಿದ್ದರು.

Previous articleವಾಲ್ಮೀಕಿ ನಿಗಮದ ಹಗರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಲಿ
Next articleIT ಉದ್ಯೋಗ ಸಮಯ 14 ಗಂಟೆಗೆ ವಿಸ್ತರಣೆ: ಅಭಿಪ್ರಾಯ ಪಡೆದು, ಚರ್ಚಿಸಿ ಅಂತಿಮ ತೀರ್ಮಾನ