ಅನುದಾನ ವಿಷಯದಲ್ಲಿ ತಾರತಮ್ಯ ತೋರಿದ ಉದಾಹರಣೆಗಳಿಲ್ಲ

0
28
ಬಿ ವೈ ವಿಜಯೇಂದ್ರ

ಬೆಂಗಳೂರು: ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿರಲಿ ಅಥವಾ ಇಲ್ಲದಿರಲಿ ಯಾವುದೇ ನೆರವು ಹಾಗೂ ಅನುದಾನಗಳ ವಿಷಯದಲ್ಲಿ ತಾರತಮ್ಯ ತೋರಿದ ಉದಾಹರಣೆಗಳಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು ಸಮಗ್ರ ಭಾರತದ ಕುರಿತು ಸದಾ ಚಿಂತಿಸುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಕಳೆದ 10 ವರ್ಷಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಿರಲಿ ಅಥವಾ ಇಲ್ಲದಿರಲಿ ಯಾವುದೇ ನೆರವು ಹಾಗೂ ಅನುದಾನಗಳ ವಿಷಯದಲ್ಲಿ ತಾರತಮ್ಯ ತೋರಿದ ಉದಾಹರಣೆಗಳಿಲ್ಲ. ಅದರಲ್ಲೂ ಕರ್ನಾಟಕದ ಕುರಿತು ತುಸು ಹೆಚ್ಚೇ ಎನ್ನುವ ರೀತಿಯಲ್ಲಿ ಮೋದಿಜಿ ಅವರ ಸರ್ಕಾರ ಅಭಿವೃದ್ಧಿ ಹಾಗೂ ಪರಿಹಾರ ಕಾರ್ಯಗಳಿಗೆ ಸ್ಪಂದಿಸಿದೆ.

ಕಳೆದ ವರ್ಷ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತ ವೈಫಲ್ಯದ ಪರಿಣಾಮವಾಗಿ ಆರ್ಥಿಕ ಸಮತೋಲನವನ್ನು ಕಾಯ್ದುಕೊಳ್ಳದೆ ತನ್ನ ಖಜಾನೆ ಬರಿದು ಮಾಡಿಕೊಂಡಿದೆ. ಇದರಿಂದಾಗಿ ಬರ ಪರಿಸ್ಥಿತಿಯನ್ನು ತನ್ನ ಸ್ವಂತ ಶಕ್ತಿಯಿಂದ ನಿರ್ವಹಿಸಲು ಸಾಧ್ಯವಾಗದೆ, ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡಿ ತನ್ನ ನೈತಿಕ ಜವಾಬ್ದಾರಿಯಿಂದ ಕಳಚಿಕೊಳ್ಳಲು ಯತ್ನಿಸಿರುವುದು ವಾಸ್ತವ ಸಂಗತಿ.

ಬರ ಪರಿಹಾರ ಪಡೆಯಲು ತಾಂತ್ರಿಕವಾಗಿ ಅನುಸರಿಸಬೇಕಾದ ವಿಧಾನದಲ್ಲಿ ಲೋಪವೆಸಗಿ ವಿಳಂಬವಾಗಿ ಪ್ರಸ್ತಾವನೆ ಸಲ್ಲಿಸಿದೆ. ಈ ಕಾರಣಕ್ಕಾಗಿ ಕೇಂದ್ರದಿಂದ ಬರ ಪರಿಹಾರ ಪಡೆಯಲು ತಡವಾಯಿತೆಂಬ ಅಸಲಿ ಸತ್ಯವನ್ನು ಬಚ್ಚಿಟ್ಟು ಸುಪ್ರಿಂ ಕೋರ್ಟ್ ಮೊರೆ ಹೋಗಿದೆ.

ಈ ನಡುವೆ ಬರ ಪರಿಹಾರ ಬಿಡುಗಡೆ ಮಾಡಲು ಚುನಾವಣಾ ನೀತಿ ಕಾರಣದಿಂದ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಲೇ ಬೇಕಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಜನ ಕಾಳಜಿ ಹಾಗೂ ಬದ್ಧತೆಯ ದ್ಯೋತಕವಾಗಿ ಆಯೋಗದ ಅನುಮತಿ ಪಡೆದುಕೊಂಡು 12 ರಾಜ್ಯಗಳಿಗೆ ಪರಿಹಾರ ಬಿಡುಗಡೆ ಮಾಡಲು ಸನ್ನದ್ದವಾಗಿದೆ.

ಇದೇ ಸಮಯಕ್ಕೆ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಬಂದ ಸಂದರ್ಭದಲ್ಲಿ ಚುನಾವಣಾ ಆಯೋಗದ ಅನುಮತಿ ಪಡೆದಿರುವುದು ತಿಳಿಸಿ ಬರ ಪರಿಹಾರ ನೀಡುವುದಾಗಿ ಹೇಳಿಕೆ ನೀಡಿದೆ. ಈ ಹೇಳಿಕೆ ಕೇವಲ ಕರ್ನಾಟಕ ರಾಜ್ಯ ಒಂದಕ್ಕೆ ಸೀಮಿತವಾದುದಲ್ಲ 12 ರಾಜ್ಯಗಳಿಗೂ ಸಂಬಂಧಿಸಿದ ನಿರ್ಧಾರವಾಗಿರುತ್ತದೆ. ಆದರೆ ಚುನಾವಣಾ ಸಂದರ್ಭದಲ್ಲಿ ಈ ವಿಷಯವನ್ನು ಬಂಡವಾಳ ಮಾಡಿಕೊಳ್ಳಲು ರಾಜ್ಯದಲ್ಲಿ ಕಾಂಗ್ರೆಸ್ ವ್ಯರ್ಥ ಪ್ರಯತ್ನ ನಡೆಸಲು ಹೊರಟಿದೆ.

ರೈತರು ಹಾಗೂ ಬಡ ಜನರ ಕಷ್ಟ-ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹಾಗೂ ಜನಕಲ್ಯಾಣ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಕ್ರಿಯಾಶೀಲತೆಯಲ್ಲಿ ಮೋದಿಜಿ ಅವರ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕ ಹಕ್ಕು ಕಾಂಗ್ರೆಸ್ಸಿಗರಿಗಿಲ್ಲ.

ಕರ್ನಾಟಕದಲ್ಲಿ ತಮ್ಮ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳಲು ಹೋಗಿ ಸರ್ಕಾರದ ಖಜಾನೆ ಖಾಲಿ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಉದ್ಭವಿಸಿದ ಬರದಿಂದ ಸಂಕಷ್ಟಕ್ಕೊಳಗಾಗಿರುವ ರೈತರ ಕಣ್ಣೀರೊರೆಸುವ ನಿಟ್ಟಿನಲ್ಲಿ ಯಾವ ಪ್ರಯತ್ನವನ್ನು ಮಾಡಲಿಲ್ಲ, ಇವರಿಗೆ ಕೇಂದ್ರ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುವುದು ಹೊರತು ಪಡಿಸಿ ಇನ್ಯಾವ ಮಾರ್ಗವೂ ಉಳಿದಿಲ್ಲ.

ನಿಮ್ಮ ಆಕ್ಷೇಪ, ಪ್ರತಿಭಟನೆಗಳನ್ನು ರಾಜ್ಯದ ಜನತೆ ನಂಬುವಷ್ಟು ಮೂರ್ಖರಲ್ಲ, ನಿಮ್ಮ ಕೆಟ್ಟ ಆಡಳಿತದ ಬಿಸಿ ಅನುಭವಿಸುತ್ತಿರುವ ರಾಜ್ಯದ ಜನತೆ ಲೋಕಸಭಾ ಚುನಾವಣೆಯಲ್ಲಿ ನಿಮಗೆ ತಕ್ಕ ಉತ್ತರ ಕೊಡಲಿದ್ದಾರೆ ಎಂದಿದ್ದಾರೆ.

Previous articleತುಳಸಿಗೇರಿಯ ಹನುಮಂತ ದೇವಸ್ಥಾನದಲ್ಲಿ ತೊಟ್ಟಿಲೋತ್ಸವ
Next articleನಕಲಿ ಸಿಐಡಿ ಕ್ರೈಂ‌ ಬ್ರಾಂಚ್ ಹೆಸರಿನಲ್ಲಿ ಮಹಿಳೆಗೆ ವಂಚನೆ