ಭೀಮಾ ನದಿಯಲ್ಲಿ ಮುಳುಗಿ ಇಬ್ಬರು ಕಣ್ಮರೆ

ಯಾದಗಿರಿ: ವಡಗೇರಾ ತಾಲೂಕಿನ ಮಾಚನೂರ ಗ್ರಾಮದ ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿ ಇಬ್ಬರು ಕೊಚ್ಚಿಕೊಂಡು ಹೋಗಿರುವ ಘಟನೆ ಶುಕ್ರವಾರ ನಡೆದಿದೆ.
ಪಶ್ಚಿಮ ಘಟ್ಟದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭೀಮಾ ನದಿಯ ದಡದಲ್ಲಿ ದನ ಮೇಯಿಸಲು ಹೋಗಿದ್ದ ಯುವಕರಿಬ್ಬರು ನೀರು ಕುಡಿಯಲು ಹೋದಾಗ ಈ ಘಟನೆ ಸಂಭವಿಸಿದೆ.
ಮಾಚನೂರ ಗ್ರಾಮದ ರಮೇಶ (17), ಸಿದ್ದಪ್ಪ (21) ಭೀಮಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದವರಾಗಿದ್ದಾರೆ. ಇಬ್ಬರ ಪತ್ತೆಗೆ ಶೋಧನಾ ಕಾರ್ಯ ಮುಂದುವರೆದಿದೆ. ಅಗ್ನಿಶಾಮಕದಳ, ಸ್ಥಳೀಯ ಮೀನುಗಾರರು ಸೇರಿ ಕಾರ್ಯಾಚರಣೆ ನಡೆಸುತ್ತಿದ್ದು, ಎನ್‌ಡಿಆರ್‌ಎಫ್ ತಂಡ ಸಹ ಆಗಮಿಸುವ ಸಾಧ್ಯತೆಯಿದೆ. ಇನ್ನು ಸ್ಥಳದಲ್ಲಿಯೇ ತಹಶೀಲ್ದಾರ್ ಮಂಗಳಾ, ಡಿವೈಎಸ್ಪಿ ಅರುಣಕುಮಾರ ಕೊಲ್ಲೂರು, ಸಿಪಿಐ ಸುನೀಲ ಮೂಲಿಮನಿ, ಪಿಎಸ್ಐ ಮಹಿಬೂಬ್ ಅಲಿ ಬೀಡುಬಿಟ್ಟಿದ್ದಾರೆ. ನದಿ ಹತ್ತಿರ ನೂರಾರು ಜನರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.