ನಟ ವಿಜಯ್ ರಾಘವೇಂದ್ರ ಅಭಿನಯದ ರಿಪ್ಪನ್ ಸ್ವಾಮಿ ಸಿನಿಮಾ ಆಗಸ್ಟ್ 29 ನೇ ತಾರೀಖು ಬಿಡುಗಡೆ ಆಗುತ್ತಿದೆ. `ಬರೀ ಒಳ್ಳೆಯವನಾಗಿ ಕಾಣಿಸಿಕೊಂಡು ಕಾಣಿಸಿಕೊಂಡು ಸಾಕಾಗಿದೆ. ಏನಾದರೂ ಬೇರೆ ಥರ ಟ್ರೈ ಮಾಡಬೇಕು’ ಅಂತ ವಿಜಯ್ ರಾಘವೇಂದ್ರ ಯಾವಾಗಲೋ ಒಮ್ಮೆ ಈ ನಿರ್ದೇಶಕ ಕಿಶೋರ್ ಅವರಿಗೆ ಹೇಳಿದ್ದರಂತೆ.
ನಟ ವಿಜಯ್ ರಾಘವೇಂದ್ರ ಮಾತನ್ನು ಸೀದಾ ಎದೆಗೆ ಹಾಕಿಕೊಂಡ ಕಿಶೋರ್ ಮೂಡುಬಿದಿರೆ, ಎರಡು ವರ್ಷಗಳ ಕಾಲ ಕೂತು ರಿಪ್ಪನ್ ಸ್ವಾಮಿ ಕಥೆ ಹೆಣೆದರಂತೆ. ಅದೀಗ ಚಿತ್ರವಾಗಿ ನಿಮ್ಮ ಮುಂದೆ ಬರುತ್ತಿದ್ದು, ವಿಜಯ್ ರಾಘವೇಂದ್ರರನ್ನು `ಬ್ಯಾಡಿ’ ಅವತಾರದಲ್ಲಿ ಕಣ್ತುಂಬಿಕೊಳ್ಳುವ ಸದವಕಾಶ ಅವರ ಅಭಿಮಾನಿಗಳಿಗೆ ದೊರೆತಿದೆ.
ಸಿನಿಮಾ ಗೆದ್ದರೆ ಇನ್ಮುಂದೆ ವಿಜಯ್ ರಾಘವೇಂದ್ರ ಬ್ಯಾಡಿಗೇ ಅಂಟಿಕೊಳ್ಳಬಹುದು. ಸರಿ ಹೋಗದಿದ್ದರೆ ಇಂಥ ಸ್ಕ್ರೀಪ್ಟ್ ಹಿಡಿದು ಅವರ ಮುಂದೆ ಬಂದವರಿಗೆ `ಅಯ್ಯೋ ಇಂಥವೆಲ್ಲ ಬ್ಯಾಡ ಬಿಡಿ’ ಎಂದು ದೂರವೇ ಓಡಿಬಿಡಬಹುದು. ಫಲಿತಾಂಶ ಆಗಸ್ಟ್ 29ಕ್ಕೆ ಗೊತ್ತಾಗಲಿದೆ.
`ಒಳ್ಳೆಯದ್ದೋ ಕೆಟ್ಟದ್ದೋ… ಯಾವುದೇ ಪಾತ್ರ ಮಾಡಿದರೂ ಮಾಡಿದ ಪಾತ್ರ ಚೆನ್ನಾಗಿ ಮಾಡಿದ್ದಾನೆ ಅಂತ ಪ್ರೇಕ್ಷಕರು ಹೇಳಿದರೆ ಸಾಕು. ಕಲಾವಿದನಿಗೆ ಅದೇ ದೊಡ್ಡ ರಿವಾರ್ಡು. ರಿಪ್ಪನ್ ಸ್ವಾಮಿಯನ್ನು ನೀವೆಲ್ಲ ಹೇಗೆ ಸ್ವೀಕರಿಸುತ್ತೀರಿ ಎಂಬುದನ್ನು ನಾನೂ ಕುತೂಹಲದಿಂದ ಕಾಯುತ್ತಿದ್ದೇನೆ’ ಎಂದಿದ್ದಾರೆ ನಟ ವಿಜಯ್.
ಅಶ್ವಿನಿ ಚಂದ್ರಶೇಖರ್ ಈ ಚಿತ್ರದ ಮುಖ್ಯ ಪಾತ್ರದಲ್ಲಿದ್ದಾರೆ. `ಸಮಾಜ ಹೆಣ್ಣು ಮಕ್ಕಳನ್ನು ಹೇಗೆ ನೋಡುತ್ತದೆ, ದುಷ್ಟರನ್ನು ದಿಟ್ಟವಾಗಿ ಅವರು ಹೇಗೆ ಎದುರಿಸ ಬೇಕು ಎಂಬುದನ್ನು ರಿಪ್ಪನ್ ಸ್ವಾಮಿಯಲ್ಲಿ ಚೆನ್ನಾಗಿ ತೋರಿಸಿದ್ದಾರೆ. ಎಲ್ಲ ಮಹಿಳೆಯರನ್ನು ರೆಪ್ರೆಸೆಂಟ್ ಮಾಡುವಂಥ ನನ್ನದು’ ಎಂದು ನಟಿ ಅಶ್ವಿನಿ ಹೇಳಿದ್ದಾರೆ.
ಕೊಪ್ಪ, ಕಳಸ, ಬಾಳೆಹೊನ್ನೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ ಎಂಬ ಮಾಹಿತಿಯನ್ನು ಚಿತ್ರತಂಡ ನೀಡಿದೆ. ಸ್ಯಾಮ್ಯುಯೆಲ್ ಅಭಿ ರಿಪ್ಪನ್ ಸ್ವಾಮಿ ಸಿನಿಮಾಗೆ ಸಂಗೀತ ನೀಡಿದ್ದು, ರಂಗನಾಥ್ ಛಾಯಾಗ್ರಹಣವಿದೆ. ಸದ್ಯ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಾಗಿದ್ದು, ನೋಡುಗರು ಮೆಚ್ಚುಗೆ ವ್ಯಕ್ತ ಪಡಿಸುತ್ತಿರುವುದು ಚಿತ್ರ ತಂಡದ ಹುಮ್ಮಸ್ಸಿಗೆ ಮತ್ತಷ್ಟು ಬಿರುಸು ಬಂದಿದೆ.