ಸಂಪಾದಕೀಯ: ಎಚ್1ಬಿ ವೀಸಾ ಶುಲ್ಕ ಬಯಸದೆ ಬಂದ ಭಾಗ್ಯ!

0
1

ಟ್ರಂಪ್ ಎಚ್1ಬಿ ವೀಸಾ ಶುಲ್ಕ ಹುಚ್ಚಾಪಟ್ಟೆ ಹೆಚ್ಚಿಸಿದ್ದು ಒಂದು ರೀತಿಯಲ್ಲಿ ಭಾರತದ ಐಟಿ ಕಂಪನಿಗಳಿಗೆ ಬಯಸದೇ ಬಂದ ಭಾಗ್ಯವಾಗಿದೆ ಎಂದು ಐಟಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಟ್ರಂಪ್ ಶುಲ್ಕ ಏರಿಕೆ ಆರಂಭದಲ್ಲಿ ಸೇವಾಕ್ಷೇತ್ರದಲ್ಲಿರುವ ಐಟಿ ಕಂಪನಿಗಳ ಲಾಭಕ್ಕೆ ಕನ್ನ ಹಾಕಿವೆ.

ಷೇರು ಮಾರುಕಟ್ಟೆಯಲ್ಲಿ ಐಟಿ ಕಂಪನಿಗಳ ಷೇರು ಶೇ. 6ರಷ್ಟು ಕುಸಿತ ಕಂಡಿದೆ. ಆದರೆ ಐಟಿ ಕಂಪನಿಗಳ ದಿಗ್ಗಜರು ಇವುಗಳನ್ನು ದೊಡ್ಡ ಹೊಡೆತ ಎಂದು ಪರಿಗಣಿಸಿಲ್ಲ. ಈಗ ಭಾರತದಲ್ಲೇ ಜಾಗತಿಕ ಮಟ್ಟದ ಕೇಂದ್ರ (ಜಿಸಿಸಿ)ಸ್ಥಾಪಿಸಲು ಕಾಲ ಪಕ್ವವಾಗಿದೆ ಎಂದು ಭಾವಿಸಿದ್ದಾರೆ.

ಅಂದರೆ ಐಟಿ ಉತ್ಪನ್ನಗಳನ್ನು ಇಲ್ಲೇ ತಯಾರಿಸಿ ಅಮೆರಿಕಕ್ಕೆ ಕಳುಹಿಸಿಕೊಡುವುದು. ಇದರಿಂದ ಶೇ. 25 ಸುಂಕ ಹೊರೆಯಾಗುವುದಿಲ್ಲ. ಅಲ್ಲದೆ ಅಮೆರಿಕದಲ್ಲೇ ಹೆಚ್ಚು ಜನರನ್ನು ನೇಮಿಸಿಕೊಳ್ಳುವುದು ಅಥವಾ ಉತ್ಪಾದನೆ ಕೇಂದ್ರವನ್ನು ಕೆನಡಾ ಅಥವಾ ಇತರೆ ಐರೋಪ್ಯ ದೇಶಗಳಿಗೆ ಸ್ಥಳಾಂತರ ಮಾಡುವುದು.

ಅಮೆರಿಕ ಏನೇ ಮಾಡಲಿ ಕೆಲವು ಸಾಫ್ಟ್‌ವೇರ್ ಕೆಲಸಗಳಿಗೆ ಭಾರತವನ್ನು ಅವಲಂಬಿಸಲೇಬೇಕು. ಅದರಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಸೈಬರ್ ಸೆಕ್ಯೂರಿಟಿ, ಡಾಟಾ ಸೈನ್ಸ್‌ಗೆ ಭಾರತದ ಕಡೆ ತಿರುಗಿ ನೋಡುವುದು ಅಗತ್ಯ. ಈಗ ಭಾರತದಲ್ಲಿ ವರ್ಷಕ್ಕೆ 15 ಲಕ್ಷ ಎಂಜಿನಿಯರ್ ತಯಾರಾಗುತ್ತಿದ್ದಾರೆ.

ಎಂಜಿನಿಯರ್‌ಗಳ ಕೊರತೆ ಇಲ್ಲ. ಈಗ ಜಾಗತಿಕ ಮಟ್ಟದ ಕಂಪನಿಗಳು 1700 ಭಾರತದಲ್ಲಿವೆ. ಇದು 2030ಕ್ಕೆ 2400 ಆಗಲಿವೆ. ಈಗ ಟ್ರಂಪ್‌ನಿಂದ ಇದು ಬೇಗನೇ ಬೆಳವಣಿಗೆ ಕಾಣಲಿದೆ. 6 ತಿಂಗಳ ಹಿಂದೆ ಕಂಪನಿಗಳು ಅಮೆರಿಕ ಸರ್ಕಾರದ ವರ್ತನೆಯನ್ನು ನೋಡಿ ಎಚ್1ಬಿ ವೀಸಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿತ್ತು ಜೂನ್‌ನಲ್ಲಿ 10 ಪ್ರಮುಖ ಕಂಪನಿಗಳಿಗೆ 1 ಕಂಪನಿ ಮಾತ್ರ ಎಚ್1ಬಿ ವೀಸಾ ಬಳಸಿಕೊಂಡಿತ್ತು.

ಎಚ್1ಬಿ ವೀಸಾಗೆ ಪರ್ಯಾಯವಾಗಿ ಎಲ್-1, 0-1 ವೀಸಾ ಬಳಸಬಹುದು. ಇವುಗಳಿಗೆ ಬೇರೆ ದೇಶದಲ್ಲಿ ಕೆಲಸ ಮಾಡಿದ ಅನುಭವ ಬೇಕು. ಎಲ್ಲಕ್ಕಿಂತ ಸೂಕ್ತ ಎಂದರೆ ಭಾರತದಲ್ಲೇ ಜಾಗತಿಕ ಮಟ್ಟದ ಕೇಂದ್ರಗಳನ್ನು ಸ್ಥಾಪಿಸುವುದು. ಇದರಿಂದ ಕಂಪನಿಗಳಿಗೆ ಕೆಲಸ ಸುಲಭವಾಗಿ ಆಗುವುದಲ್ಲದೆ ಹಣ ಉಳಿತಾಯವಾಗುತ್ತದೆ.

ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸ್ಪಂದಿಸಬೇಕು. ಐಟಿ ಕಂಪನಿಗಳು ಸ್ಥಾಪಿಸಲು ಬೇಕಾದ ವಾತಾವರಣ ಕಲ್ಪಿಸಿಕೊಡಬೇಕು. ಅದನ್ನು ಬಿಟ್ಟು ಬೇಕಾದರೆ ಇರಿ ಇಲ್ಲದಿದ್ದರೆ ಹೋಗಿ ಎಂಬ ಮಾತುಗಳು ನಮ್ಮ ಕಾಲ ಮೇಲೆ ನಾವೇ ಕಲ್ಲುಹಾಕಿಕೊಂಡಂತೆ.

ಟ್ರಂಪ್ ನಮಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿರುವುದಂತೂ ನಿಜ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಆಂಧ್ರ, ಕೇರಳ ಬಕಪಕ್ಷಿಯಂತೆ ಐಟಿ ಕಂಪನಿಗಳನ್ನು ಸೆಳೆಯಲು ಕಾಯುತ್ತಿವೆ.

ಬೆಂಗಳೂರು ಮೊದಲಿನಿಂದಲೂ ಸಿಲಿಕಾನ್ ಸಿಟಿ ಎಂಬ ಹೆಸರು ಉಳಿಸಿಕೊಂಡು ಬಂದಿದೆ. ಅದಕ್ಕೆ ಬೇಕಾದ ಮೂಲಭೂತ ಸವಲತ್ತು ಕಲ್ಪಿಸಿಕೊಡುವುದು ರಾಜ್ಯ ಸರ್ಕಾರದ ಕರ್ತವ್ಯ. ನಮ್ಮ ಯುವಕರಿಗೆ ಇಂಗ್ಲಿಷ್ ಕೂಡ ಉತ್ತಮವಾಗಿ ಬರುವುದರಿಂದ ವಿದೇಶಗಳಲ್ಲಿ ಹೋಗಿ ನೆಲೆಸುವುದಕ್ಕೆ ಯಾವ ತೊಂದರೆಯೂ ಇಲ್ಲ.

ಅದರಲ್ಲೂ ಬುದ್ಧಿಮತ್ತೆ ಮತ್ತು ಕಾರ್ಯಕ್ಷಮತೆಯಲ್ಲಿ ಭಾರತೀಯರನ್ನು ಮೀರಿಸುವವರು ಯಾರೂ ಇಲ್ಲ. ಸಿಂಗಪುರದ ಕಂಪನಿಯೊಂದು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದೆ. ಅಲ್ಲಿಯೇ ಕೆಲಸ ಮಾಡಲು ಪೈರಸಿ ಸಮಸ್ಯೆ. ಭಾರತೀಯರು ಯಾವುದೇ ಕಾರಣಕ್ಕೂ ಕಂಪನಿಯ ರಹಸ್ಯ ಬಿಟ್ಟುಕೊಡುವುದಿಲ್ಲ.

ಭಾರತೀಯರ ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆ ಜಾಗತಿಕ ಮನ್ನಣೆ ಪಡೆದಿದೆ. ಅದನ್ನು ಉಳಿಸಿ ಬೆಳೆಸುವುದು ಭಾರತೀಯರ ಕರ್ತವ್ಯ. ದೇಶದ ಕೆಲವು ನಗರಗಳಲ್ಲಿ ಮಾತ್ರ ಐಟಿ ಕಂಪನಿಗಳು ಹರಡಿಕೊಂಡಿವೆ.

ಇವುಗಳ ವ್ಯವಹಾರವೆಲ್ಲ ಅಮೆರಿಕ, ಕೆನಡಾ ಮತ್ತಿತರ ದೇಶಗಳಿಗೆ ಸಂಬಂಧಿಸಿದ್ದು. ಅವುಗಳ ವ್ಯವಹಾರವೆಲ್ಲ ಡಾಲರ್‌ನಲ್ಲೇ. ಚೀನಾ ಕೂಡ ನಮ್ಮೊಂದಿಗೆ ಪೈಪೋಟಿ ನಡೆಸುತ್ತಿರುವಾಗ ಎಚ್ಚರವಹಿಸುವುದು ಅಗತ್ಯ.

ಈಗ ಟ್ರಂಪ್ ಒಡ್ಡಿರುವ ಅಗ್ನಿಪರೀಕ್ಷೆ ಭಾರತದ ಐಟಿ ಕಂಪನಿಗಳಿಗೆ ಕಷ್ಟಸಾಧ್ಯದ ಕೆಲಸವೇನಲ್ಲ. `ನಾಸಾ’ದಲ್ಲಿ ಅತಿ ಹೆಚ್ಚು ಜನ ಇರುವುದು ಭಾರತೀಯರು. ಹಿಂದೆ ಅಬ್ದುಲ್ ಕಲಾಂ ಅವರನ್ನು ನಾಸಾ ಸಂಸ್ಥೆ ಮುಖ್ಯಸ್ಥರಾಗಿ ಕೆಲಸ ಮಾಡಲು ಕರೆದಿದ್ದರು. ಆಗ ಅವರು ನಾಸಾ ಕಂಪನಿಯನ್ನೇ ಭಾರತಕ್ಕೆ ಸ್ಥಳಾಂತರಿಸಿ ನಾವೇ ನೋಡಿಕೊಳ್ಳುತ್ತೇವೆ ಎಂದಿದ್ದರು.

ಈಗ ಟ್ರಂಪ್‌ಗೆ ಅದೇ ಮಾತುಗಳನ್ನು ಹೇಳುವ ಕಾಲ ಬಂದಿದೆ. ಅದಕ್ಕೆ ಮಾನಸಿಕವಾಗಿ ಸಿದ್ಧಗೊಳ್ಳುವುದು ಅಗತ್ಯ. ಈಗ ಭಾರತ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯಾಗಿರುವುದರಿಂದ ಅಮೆರಿಕದಂಥ ಪ್ರಬಲ ದೇಶವೂ ಸವಾಲು ಹಾಕುವ ಮುನ್ನ ಎರಡು ಬಾರಿ ಯೋಚಿಸುವುದು ಅಗತ್ಯ. ಇದನ್ನು ಈಗಾಗಲೇ ರಷ್ಯಾ ಮತ್ತು ಚೀನಾ ಮನವರಿಕೆ ಮಾಡಿಕೊಂಡಿದೆ. ಅಮೆರಿಕಕ್ಕೆ ಕೆಲಕಾಲದ ನಂತರ ಮನವರಿಕೆ ಆಗಲಿದೆ.

Previous articleಶ್ರೇಯಸ್ ಅಯ್ಯರ್ ರಾಜೀನಾಮೆ: ನಿಗೂಢ ನಿರ್ಗಮನದ ಸುತ್ತ ಅನುಮಾನದ ಹುತ್ತ!
Next articleನಕಲಿ ದಾಖಲೆ ಸೃಷ್ಟಿಸಿ ಮದುವೆ: ಯೂಟ್ಯೂಬರ್ ಮುಕಳೆಪ್ಪ ಸೇರಿ 7 ಜನರ ವಿರುದ್ಧ FIR!

LEAVE A REPLY

Please enter your comment!
Please enter your name here