ಯಾದಗಿರಿ ಜಿಲ್ಲೆಯ ಶಹಾಪುರ ಸರ್ಕಾರಿ ವಸತಿ ಶಾಲೆಯ ಶೌಚಾಲಯದಲ್ಲಿ 9ನೇ ತರಗತಿ ಬಾಲಕಿಗೆ ಹೆರಿಗೆಯಾಗಿದೆ. ವಿದ್ಯಾರ್ಥಿನಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಅಪ್ರಾಪ್ತ ತಾಯಿ ಮತ್ತು ಮಗು ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯವಾಗಿದ್ದಾರೆ.
ಶಹಾಪುರ ನಗರದ ವಸತಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಶಾಲೆಯ ಶೌಚಾಲಯದಲ್ಲಿ ಗಂಡು ಮಗುವಿಗೆ ಜನ್ಮ ನೀಡಿರುವ ಕುರಿತು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ತಿಳಿಸಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗೆ ದೂರವಾಣಿ ಮೂಲಕ ಮಾತನಾಡಿ, ಘಟನೆ ಕುರಿತು ಪ್ರಕರಣ ದಾಖಲು ಮಾಡಿಕೊಳ್ಳಲು ಸೂಚಿಸಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ, ಸಮಗ್ರ ವರದಿ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಿದ್ದೇನೆ ಎಂದು ಕೋಸಂಬೆ ಹೇಳಿದ್ದಾರೆ.
ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯ ಬಗ್ಗೆ ವಿಶೇಷ ಕಾಳಜಿ ಮತ್ತು ಆರೈಕೆ ಮಾಡುವಂತೆ ಸಂಬಂಧಪಟ್ಟ ವಸತಿ ಶಾಲೆಗಳ ಅಧಿಕಾರಿ ಸಿಬ್ಬಂದಿಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಖಡಕ್ ಸೂಚನೆ ಇದ್ದರೂ ಇಲ್ಲಿ ನಿರ್ಲಕ್ಷ್ಯ ಆಗಿದ್ದು ಹೇಗೆ?. ಅಪ್ರಾಪ್ತ ಬಾಲಕಿಯ ದೈಹಿಕ ಬದಲಾವಣೆಗಳು ಆಗುತ್ತಿರಬೇಕಾದರೇ ಆ ವಸತಿ ನಿಲಯದ ಸಿಬ್ಬಂದಿ ಏನು ಮಾಡುತ್ತಿದ್ದರು?. ಪಾಲಕರ ಗಮನಕ್ಕೂ ಇದು ಬಂದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿರುವ ಆಯೋಗದ ಸದಸ್ಯರು ಜಿಲ್ಲಾಡಳಿತವನ್ನು ಪ್ರಶ್ನಿಸಿದ್ದಾರೆ.
ನಿರಂತರ ಮಳೆ, ಶಾಲಾ, ಕಾಲೇಜುಗಳಿಗೆ ರಜೆ: ಬುಧವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಜಿಟಿ ಜಿಟಿ ಮತ್ತು ಕೆಲವು ಹೊತ್ತು ಜೋರಾಗಿ ಸುರಿಯುತ್ತಿರುವ ಮಳೆ ಹಿನ್ನಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಗುರುವಾರ ಜಿಲ್ಲೆಯ ಎಲ್ಲಾ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಆದೇಶ ಹೊರಡಿಸಿದ್ದಾರೆ.
ಬುಧವಾರ ಇಡೀ ರಾತ್ರಿ ಮತ್ತು ಗುರುವಾರವೂ ನಿರಂತರವಾಗಿ ಜೋರಾಗಿ ಮಳೆ ಬರುತ್ತಿದೆ. ಹೀಗಾಗಿ ಜಿಲ್ಲೆಯ ಬಹುತೇಕ ಹಳ್ಳ, ಕೊಳ್ಳ, ನದಿಗಳು ತುಂಬಿ ಹರಿಯುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಹಳ್ಳಿಗಳ ಮಕ್ಕಳು ಬಂದು ಹೋಗುವಾಗ ತೊಂದರೆ ಅನುಭವಿಸಬೇಕಾದ ಮತ್ತು ಬಹುತೇಕ ಶಾಲಾ ಕೋಣೆಗಳು ಶಿಥಿಲಗೊಂಡಿರುವ ಪರಿಣಾಮ ಯಾವುದೇ ಅವಘಡ ಸಂಭವಿಸದಿರಲಿ ಎಂಬ ಕಾರಣಕ್ಕೆ ಇಂದು ರಜೆ ಘೋಷಿಸಲಾಗಿದೆ.