ಬೆಳಗಾವಿ: ಪತಿಯೊಂದಿಗೆ ಮಾತಿನ ಮುತ್ತಿಗೆ… ಬಳಿಕ ಗುಟ್ಟು ಪ್ರೇಮ ಸಂಬಂಧ… ಕೊನೆಗೆ ಪತಿಗೆ ಮಸಣದ ದಾರಿ. ರಾಮದುರ್ಗದ ಮಲಪ್ರಭಾ ನದಿ ದಡದಲ್ಲಿ ಇತ್ತೀಚೆಗೆ ನಡೆದಿದ್ದ ಕೊಲೆಯ ಕಥೆ ಇದು.
ಪ್ರೀತಿಯ ಹೆಸರಿನಲ್ಲಿ ನಡೆದ ಈ ಕೃತ್ಯ ಪತ್ನಿಯೇ ತನ್ನ ಪ್ರೇಮಿಯ ಸಹಾಯದಿಂದ ಪತಿಯನ್ನು ಹತ್ಯೆ ಮಾಡಿದ ಭೀಕರ ಘಟನೆ ಎಂಬ ಸತ್ಯವನ್ನು ಹೊರಹಾಕಿದೆ.
ಮೃತ ವ್ಯಕ್ತಿ ಈರಪ್ಪ ಯಲ್ಲಪ್ಪ ಆಡಿನ (35), ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದವರು. ಜುಲೈ 7ರ ರಾತ್ರಿ ಅವರು ನಾಪತ್ತೆಯಾಗಿದ್ದು, ಅವರ ಶವ ಜುಲೈ 8ರಂದು ರಾಮಾಪೂರ ಹತ್ತಿರದ ಜಮೀನೊಂದರಲ್ಲಿ ಪತ್ತೆಯಾಯಿತು. ಘಟನಾ ಸ್ಥಳ ಪರಿಶೀಲನೆಯ ಬಳಿಕ, ಇದು ಸಹಜ ಸಾವು ಅಲ್ಲ ಎಂದು ಪೊಲೀಸರು ತನಿಖೆ ಆರಂಭಿಸಿದರು.
ಉಸಿರುಗಟ್ಟಿಸಿ, ಕಲ್ಲಿನಿಂದ ಕೊಲೆ
ಆರೋಪಿಗಳಾದ ಸಾಬಪ್ಪ ಲಕ್ಷ್ಮಣ ಮಾದರ (26), ಫಕೀರಪ್ಪ ಸೋಮಪ್ಪ ಕಣವಿ (22) ಮತ್ತು ಈರಪ್ಪನ ಪತ್ನಿ ಕರೆವ್ವ ಉರ್ಫ್ ಕಮಲವ್ವ (33) ಈ ಮೂವರು, ಜುಲೈ 7ರಂದು ಈರಪ್ಪನನ್ನು ಅಮ್ಮಿನಭಾವಿಯಿಂದ ಬೈಕ್ನಲ್ಲಿ ಕರೆದುಕೊಂಡು ಹೋಗಿ, ರಾಮದುರ್ಗದ ಝುನಿಪೇಠ ಹದ್ದಿಯಲ್ಲಿ ಟವಲ್ನಿಂದ ಕುತ್ತಿಗೆ ಬಿಗಿದು, ತಲೆಗೆ ಕಲ್ಲು ಹೊಡೆದು ಹತ್ಯೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಮೊಬೈಲ್ ಕರೆ ಕೊಟ್ಟ ಸುಳಿವು
ಎಸ್.ಪಿ ಡಾ. ಭೀಮಾಶಂಕರ ಗುಳೇದ ಮಾರ್ಗದರ್ಶನದಲ್ಲಿ, ಜಿಲ್ಲಾ ತಾಂತ್ರಿಕ ಘಟಕದ ನೆರವಿನಿಂದ ಮೃತನ ಪತ್ನಿಯ ಮೊಬೈಲ್ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ, ಸಾಬಪ್ಪ ಎಂಬ ವ್ಯಕ್ತಿಯೊಂದಿಗೆ ನಿರಂತರ ಸಂಪರ್ಕವಿದ್ದದ್ದು ಬಹಿರಂಗವಾಯಿತು. ತಕ್ಷಣವೇ, ಈ ಮೂವರ ನಡುವಿನ ಸಂಪರ್ಕವನ್ನು ದೃಢಪಡಿಸಿತು ಎಂದು ಗೊತ್ತಾಗಿದೆ.
ಆರೋಪಿಗಳ ಬಂಧನ
ಈ ಮಾಹಿತಿಯ ಮೇರೆಗೆ ರಾಮದುರ್ಗ ಸಿಪಿಐ ವಿನಾಯಕ ಬಡಿಗೇರ, ಪಿಎಸ್ಐ ಸವಿತಾ ಮುನ್ಯಾಳ ಮತ್ತು ತಂಡದ ಸದಸ್ಯರು ಜಾಲ ಬೀಸಿ, ಆರೋಪಿಗಳನ್ನು ಜುಲೈ 11ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.