ವಿಜಯಪುರ: ಧರ್ಮಸ್ಥಳ ಪ್ರಕರಣದಲ್ಲಿ ಚಿವುಟೋದು ಮತ್ತೆ ತೂಗೋದು ಬಿಜೆಪಿ ಕೆಲಸ, ಸೊರಕೆ ಗಂಭೀರ ಆರೋಪ

0
62

ವಿಜಯಪುರ: ಬಿಜೆಪಿಯವರೇ ಒಂದು ಕಡೆ ಚೂಟಿ ಮತ್ತೊಂದು ಕಡೆ ತೊಟ್ಟಿಲು ತೂಗುವ ಕೆಲಸವನ್ನು ಧರ್ಮಸ್ಥಳ ಪ್ರಕರಣದಲ್ಲಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ಗಂಭೀರ ಆರೋಪ ಮಾಡಿದರು.

ನಗರದ ನೂತನ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಮಹೇಶ್ ತಿಮರೋಡಿ ಯಾರು? ಅವರಿಗೆ ಪ್ರಚೋದನೆ ಕೊಟ್ಟವರು ಯಾರು? ಅದನ್ನು ಬಿಜೆಪಿಯವರೇ ಹೇಳಬೇಕು. ಪ್ರಭಾಕರ ಭಟ್ ಅವರೂ ಕೂಡಾ ಸಂಘ ಪರಿವಾರದವರು ಹಾಗಾದರೆ ಪ್ರಭಾಕರ್ ಧರ್ಮಸ್ಥಳದ ಪರವಾಗಿ ಇದ್ದಾರೋ? ಅಥವಾ ವಿರೋಧವಾಗಿದ್ದರೋ? ಎಂದು ಪ್ರಶ್ನೆ ಮಾಡಿದರು.

ನಮ್ಮ ಸರ್ಕಾರ ಧರ್ಮಸ್ಥಳ ಪ್ರಕರಣದ ವಿಚಾರಣೆಗೆ ಎಸ್‌ಐಟಿ ರಚನೆ ಮಾಡಿದೆ. ಅದು ಕೂಡಾ ಕೋರ್ಟ್‌ ನಿರ್ದೇಶನದ ಮೇರೆಗೆ. ಇನ್ನೂ ಎಸ್‌ಐಟಿ ವರದಿ ಸರ್ಕಾರದ ಕೈಗೆ ತಲುಪಿಲ್ಲ. ವರದಿ ಬಂದ ನಂತರ ಸರ್ಕಾರ ನಿರ್ಧಾರ ಮಾಡಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಕೇವಲ ಚುನಾವಣೆಗಾಗಿ ಅಲ್ಲ, ವರ್ಷಪೂರ್ತಿ ಕ್ರಿಯಾಶೀಲವಾಗಿ ಪಕ್ಷದ ಕಾರ್ಯ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿಕೊಂಡು ಹೋಗಬೇಕು ಎನ್ನುವ ಉದ್ದೇಶದಿಂದ ಈ ಬಾರಿ ಎಐಸಿಸಿಯಿಂದಲೇ ಸಮಿತಿ ಸದಸ್ಯರ ಲಿಸ್ಟ್ ಕಳುಹಿಸಿದ್ದಾರೆ ಎಂದರು.

ಪಕ್ಷ ಸಂಘಟನೆಗಾಗಿ ಈಗಾಗಲೇ ಜಿಲ್ಲಾ ಮಟ್ಟದ ಸಮಿತಿ, ತಾಲೂಕ ಮಟ್ಟದ ಸಮಿತಿ, ಹಾಗೂ ಗ್ರಾಮ ಪಂಚಾಯತ್ ಮಟ್ಟದ ಸಮಿತಿ ರಚನೆ ಮಾಡಿ ಸಂಘಟನೆ ಮಾಡಬೇಕು ಎನ್ನುವ ನಿರ್ದೇಶನ ಬಂದಿದೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳಲ್ಲಿ ಪ್ರವಾಸ ಮಾಡಿಕೊಂಡು ಬಂದಿದ್ದು ಪಕ್ಷದ ಕಾರ್ಯಕರ್ತರಿಗೆ ತರಬೇತಿ ಹಾಗೂ ನಿರ್ದೇಶನಗಳನ್ನು ನೀಡುತ್ತಾ ಬಂದಿದ್ದೇವೆ. ಪಕ್ಷದ ಸಿದ್ಧಾಂತ, ಹಾಗೂ ಸಂಘಟನಾತ್ಮಕ ದೃಷ್ಟಿಯಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಇಂದು ವಿಜಯಪುರ ಹಾಗೂ ಬಾಗಲಕೋಟ ಪ್ರವಾಸ ಮುಗಿಸಿಕೊಂಡು ಮುಂದಿನ ಜಿಲ್ಲೆಗಳಿಗೆ ತೆರಳಲಾಗುತ್ತಿದೆ ಎಂದರು.

ಸಂವಿಧಾನದ ಮೇಲೆ ದಾಳಿ: ಕೇಂದ್ರ ಬಿಜೆಪಿ ಸರ್ಕಾರ ಸಮಾಜವಾದಿ ಜಾತ್ಯತೀತ ಪದಗಳನ್ನು ಸಂವಿಧಾನದಿಂದ ತೆಗೆದು ಹಾಕುವ ಮಾತನ್ನು ಹೇಳುತ್ತಿದೆ. ಈ ರೀತಿಯಾದ ಸಂವಿಧಾನದ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಅಲ್ಲದೇ ನ್ಯಾಯಾಲಯದ ವ್ಯವಸ್ಥೆಯಲ್ಲಿ ಅಸ್ಥಿರತೆಯನ್ನು ಉಂಟು ಮಾಡುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ನಾವು ಸಂವಿಧಾನ ಉಳಿಸುವ ಕೆಲಸ ಮಾಡಬೇಕಿದೆ.

ಇಂದಿರಾಗಾಂಧಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಕೆಲ ಮುಖಂಡರನ್ನು ಸೆರೆಮನೆಗೆ ಹಾಕಿರಬಹುದು ಆದರೆ ಅದರಿಂದ ಬಡವರಿಗೆ ಅನುಕೂಲವಾಗುವ ಗರೀಬ್ ಹಠವೋ, ಉಳುವವನೆ ಭೂ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣ ಸೇರಿದಂತೆ ಹಲವಾರು ಉತ್ತಮ ಯೋಜನೆಗಳ ಮೂಲಕ ಬಡವರನ್ನು ಮೇಲಕ್ಕೆತ್ತುವ ಕೆಲಸವನ್ನು ಇಂದಿರಾಗಾಂಧಿ ಮಾಡಿದ್ದಾರೆ ಎಂದು ತುರ್ತು ಪರಿಸ್ಥಿತಿಯನ್ನು ಸಮರ್ಥಿಸಿಕೊಳ್ಳುವುದರ ಜೊತೆಗೆ ಪ್ರಸ್ತುತ ಬಿಜೆಪಿ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಹೇರಿದೆ ಎಂದು ಗಂಭೀರ ಆರೋಪ ಮಾಡಿದರು.

ಯತ್ನಾಳ ನನ್ನ ಆತ್ಮಿಯ ಸ್ನೇಹಿತ: ಮುಸ್ಲಿಂ ಯುವತಿಯರನ್ನು ಮದುವೆಯಾಗುವ ಹಿಂದೂ ಯುವಕರಿಗೆ 5 ಲಕ್ಷ ಕೊಡುವೆ ಎಂದು ಹೇಳಿರುವ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಹಾಗೂ ಯತ್ನಾಳ ಆತ್ಮೀಯ ಸ್ನೇಹಿತರು ಆದರೆ ಅವರ ಇತ್ತೀಚಿನ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು.

Previous articleವಿಜಯನಗರ: ಹಂಪಿಯ ಪ್ರಮುಖ ಸ್ಮಾರಕಗಳು ಜಲಾವೃತ
Next articleಬೆಂಗಳೂರು: ಟ್ರಾಫಿಕ್ ನಿಯಮ ಉಲ್ಲಂಘನೆ ದಂಡ ಪಾವತಿಗೆ ರಿಯಾಯಿತಿ ಘೋಷಣೆ

LEAVE A REPLY

Please enter your comment!
Please enter your name here