ಬ್ಯಾಂಕ್ ದರೋಡೆಯಲ್ಲಿ ಸಿಬ್ಬಂದಿ, ಉಪನ್ಯಾಸಕರು, ರೈಲ್ವೆ ನೌಕರರೇ ಆರೋಪಿಗಳು!

ವಿಜಯಪುರ: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಬ್ಯಾಂಕ್‌ ಸಿಬ್ಬಂದಿ, ಅತಿಥಿ ಉಪನ್ಯಾಸಕರು, ರೈಲ್ವೆ ನೌಕರರು ಭಾಗಿಯಾಗಿದ್ದು, ಅತ್ಯಂತ ಚಾಣಾಕ್ಷತನದಿಂದ ವಿಜಯಪುರ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ.

ಈ ಹಿಂದೆ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಅವರಿಂದ ಮಾಹಿತಿ ಕಲೆ ಹಾಕಿ ಅಪರಾಧಿಕ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನೂ 12 ಜನರನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಈ ಹಿಂದೆ ಬಂಧಿತನಾಗಿರುವ ಆರೋಪಿಯಲ್ಲಿ ಸ್ವತಃ ಬ್ಯಾಂಕ್ ಪ್ರಬಂಧಕನೇ ಶಾಮೀಲಾಗಿದ್ದು, ಪ್ರಸ್ತುತ ಬಂಧಿಸಲಾಗಿರುವ ಆರೋಪಿಗಳಲ್ಲಿ ರೈಲ್ವೇ ಇಲಾಖೆಯಲ್ಲಿ ನೌಕರಿ ಮಾಡುತ್ತಿದ್ದ ಇಬ್ಬರು, ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೂ ಸಹ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.

ಹುಬ್ಬಳ್ಳಿ ನಿವಾಸಿ ರೈಲ್ವೇ ಇಲಾಖೆ ನೌಕರ ಬಾಲರಾಜ್ ಮಣಿಕಂ ಗೋವಿಂದ ಯೆರಕುಲಾ, ಹುಬ್ಬಳ್ಳಿ ನಿವಾಸಿಗಳಾದ ಗುಂಡು ಜೋಸೆಫ್ ಗುಂಡು ಶ್ಯಾಮಬಾಬು (28), ಚಂದನರಾಜ್ ವರದರಾಜ್ ಪಿಳ್ಳೆ, ಇಜಾಜ್ ಮಕ್ಬೂಲ್‌ಅಹ್ಮದ್ ಧಾರವಾಡ, ಪೀಟರ್ ಉರ್ಫ್ ವಿನೋದಚಂದ ಜಯಚಂದ್ರ ಪಾಲ್, ಸುಸೈರಾಜ್ ಪ್ರಾನ್ಸಿಸ್ ಡ್ಯಾನಿಯಲ್, ಬಾಬುರಾವ ಧನಮ್ ಮಿರಿಯಾಲ, ಮೊಹ್ಮದ್ ಆಸೀಫ್ ಮಹಮ್ಮದ ಯೂಸೂಫ್ ಕಲ್ಲೂರ, ಅನಿಲ ಮೋಹನರಾವ ಮಿರಿಯಾಲ, ಅಬು ಉರ್ಫ್ ಮೋಹನಕುಮಾರ ಗುಂಡಯ್ಯ ಯಶ್ಮಾಲಾ, ಸೋಲೋಮನ್ವೇಸ್ಲಿ ವಿಲ್ಸನ್ ಪಲುಕುರಿ, ಮರಿಯಾದಾಸ ಜೋಬು ಉರ್ಫ್ ಯೋಬು ಗೋನಾ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದು ಎನ್ನಲಾದ 2 ಇನ್ನೋವಾ ಕಾರು, 1 ರಿನೋವಲ್ಟ್ ಕಾರು, 1 ಸ್ವಿಪ್ಟ್ ಹಾಗೂ ರೇಲ್ವೆ ಇಲಾಖೆಯ ಟಾಟಾ ಕಂಪನಿಯ ಒಂದು ಲಾರಿ ಹಾಗೂ ಬ್ಯಾಂಕಿನ ಸೇಫ್ ಲಾಕರ್ ತೆರೆಯಲು ಬಳಸಿದ ನಕಲಿ ಕೀಲಿಕೈಗಳು ಹಾಗೂ ನಕಲಿ ಕೀಲಿಕೈಗಳನ್ನು ತಯಾರಿಸಲು ಬಳಸಿದ ಸಲಕರಣೆಗಳು, ಹೆಕ್ಸಾ ಬ್ಲೇಡ್‌ಗಳು ಮತ್ತು ಬಂಗಾರ ಕರಗಿಸಲು ಬಳಸಿದ 2 ಗ್ಯಾಸ್ ಸಿಲಿಂಡರ್ ಗಳು, 1 ಆಕ್ಸಿಜನ್ ಸಿಲಿಂಡರ್, ಬರ್ನಿಂಗ್ ಗನ್, ಸ್ಪ್ಯಾನರಗಳು, ಕಳ್ಳತನ ಕಾಲಕ್ಕೆ ಸಂವಹನಕ್ಕಾಗಿ ಬಳಸಿದ 4 ವಾಕಿಟಾಕಿಗಳು ಹಾಗೂ ಒಂದು ಪಿಸ್ತೂಲ್‌ನಂತಿರುವ ಸಿಗರೇಟ್ ಲೈಟರ್ ಇತ್ಯಾದಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬ್ಯಾಂಕ್ ಮ್ಯಾನೇಜರ್ ವಿಜಯಕುಮಾರ ಮೋಹನರಾವ ಮಿರಿಯಾಲ, ಚಂದ್ರಶೇಖರ ಕೊಟಿಲಿಂಗಮ್ ನೆರೆಲ್ಲಾ, ಸುನೀಲ ನರಸಿಂಹಲು ಮೋಕಾ ಮೂವರನ್ನು ಬಂಧಿಸಲಾಗಿತ್ತು.

ಎಲ್ಲ ಆರೋಪಿತರಿಂದ ಕಳ್ಳತನ ಮಾಡಿದ್ದ ಒಟ್ಟು 39 ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ ಅದರಲ್ಲಿನ ಬಂಗಾರವನ್ನು ಮಾರಾಟ ಮಾಡಿ ಬಂದ ಹಣವನ್ನು ಗೋವಾದ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಡಿಪಾಸಿಟ್ ಮಾಡಿದ್ದ ನಗದು ಹಣ 1.16 ಕೋಟಿ ರೂ. ಗಳನ್ನು ಜಪ್ತು ಮಾಡಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ ಒಟ್ಟು 39.26 ಕೋಟಿ ರೂ.ಗಳಿಗಿಂತ ಅಧಿಕ ಮೌಲ್ಯದ ವಸ್ತುಗಳನ್ನು ಆರೋಪಿಗಳಿಗೆ ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೇ 23ರಂದು ಬಸವನ ಬಾಗೇವಾಡಿಯ ಮನಗೂಳಿಯ ಕೆನರಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿತ್ತು. ಬ್ಯಾಂಕ್ ಲಾಕರ್‌ನಲ್ಲಿದ್ದ ಅಂದಾಜು 53.26 ಕೋಟಿ ರೂ. ಮೌಲ್ಯದ 58.97 ಕೆ.ಜಿ (58,976.94 ಗ್ರಾಂ) ಬಂಗಾರದ ಆಭರಣಗಳು ಹಾಗೂ ನಗದು ಹಣ ರೂ. 5,20,450 ಹೀಗೆ ಒಟ್ಟು 53,31,20,450 ಕೋಟಿ ರೂ. ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.

ಪೊಲೀಸರ ಕಾರ್ಯಕ್ಕೆ ಶ್ಲಾಘನೆ:
ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ಐಜಿಪಿ ಚೇತನಸಿಂಗ್ ರಾಠೋಡ, ಈ ಪ್ರಕರಣವನ್ನು ತಾಂತ್ರಿಕ ಸಾಧನಗಳ ಮೂಲಕ ಅಧಿಕಾರಿ ಮತ್ತು ಸಿಬ್ಬಂದಿಯವರ ಅವಿರತ ಪ್ರಯತ್ನ ಮತ್ತು ಕಠಿಣ ಪರಿಶ್ರಮಗಳ ಮೂಲಕ ಕ್ಷೀಪ್ರಗತಿಯಲ್ಲಿ ಭೇದಿಸಿದ್ದು, ಪ್ರಕರಣದ ಪತ್ತೆ ಕುರಿತು ಕರ್ತವ್ಯ ನಿರ್ವಹಿಸಿದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಠಿಣ ಪರಿಶ್ರಮ, ಸಮರ್ಪಣಾಭಾವದ ಕರ್ತವ್ಯ ನಿರ್ವಹಣೆ, ಕೌಶಲ್ಯ, ಬದ್ಧತೆಗಳನ್ನು, ಶ್ಲಾಘಿಸಿ, ಪ್ರಶಂಸನಾ ಪತ್ರ ನೀಡಿ ಸೂಕ್ತ ಬಹುಮಾನ ಘೋಷಿಸಲಾಗಿದೆ ಎಂದರು.

8 ತಂಡಗಳಿಂದ ಭರ್ಜರಿ ತನಿಖೆ:
ಈ ಪ್ರಕರಣವನ್ನು ಬೇಧಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ 8 ವಿಶೇಷ ತಂಡಗಳನ್ನು ರಚಿಸಿದ್ದರು. ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಅಧಿಕಾರಿಗಳಾದ ಟಿ.ಎಸ್. ಸುಲ್ಪಿ, ಸುನೀಲ ಕಾಂಬಳೆ, ಬಲ್ಲಪ್ಪ ನಂದಗಾವಿ, ರಮೇಶ ಅವಜಿ, ಗುರುಶಾಂತ ದಾಶ್ಯಾಳ, ಅಶೋಕ ಚವ್ಹಾಣ, ಶ್ರೀಕಾಂತ ಕಾಂಬಳೆ, ಅಶೋಕ ನಾಯಕ, ದೇವರಾಜ ಉಳ್ಳಾಗಡ್ಡಿ, ಬಸವರಾಜ ತಿಪ್ಪರೆಡ್ಡಿ, ರಾಕೇಶ ಬಗಲಿ, ಸೊಮೇಶ ಗೆಜ್ಜಿ, ವಿನೋದ ದೊಡಮನಿ, ವಿನೋದ ಪೂಜಾರಿ, ಶಿವಾನಂದ ಪಾಟೀಲ, ಶ್ರೀ ಯತೀಶ ಕೆ, ನಾಗರತ್ನ ಉಪ್ಪಲದಿನ್ನಿ ಹಾಗೂ ಸುಮಾರು 100 ಸಿಬ್ಬಂದಿಗಳನ್ನೊಳಗೊಂಡ 08 ವಿಶೇಷ ತಂಡಗಳನ್ನು ಆರೋಪಿತರ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.