Tungabhadra Dam: ತುಂಗಭದ್ರಾ ಮಂಡಳಿ ತೆಲುಗುಮಯ!

0
180

ಅನಿಲ ಬಾಚನಹಳ್ಳಿ

ಕೊಪ್ಪಳ: ತುಂಗಭದ್ರಾ ಜಲಾಶಯ ನಿರ್ವಹಣೆಗಾಗಿ ರಚನೆ ಮಾಡಲಾದ ತುಂಗಭದ್ರಾ ಮಂಡಳಿಗೆ ಈವರೆಗೂ ಕರ್ನಾಟಕದವರು ಕಾರ್ಯದರ್ಶಿ ಆಗಿಲ್ಲ. ಕೇವಲ ಆಂಧ್ರಪ್ರದೇಶ ಮತ್ತು ತೆಲಂಗಾಣದವರೇ ಅಧಿಕಾರಿಗಳಾಗಿದ್ದು, ಇದರಿಂದಾಗಿ ಡಿ.ಬಿ.ಬೋರ್ಡ್ ತೆಲುಗುಮಯವೇ ಆಗಿಬಿಟ್ಟಿದೆ.

ಜಲಾಶಯ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿದೆ ಎಂಬ ಭಾವನೆ ಜನರಲ್ಲಿ ಮೂಡಿದೆ. 1953ರಲ್ಲಿಯೇ ತುಂಗಭದ್ರಾ ಜಲಾಶಯ ನಿರ್ವಹಣೆ ನೋಡಿಕೊಳ್ಳಲು ತುಂಗಭದ್ರಾ ಮಂಡಳಿಯನ್ನು ಸ್ಥಾಪನೆ ಮಾಡಲಾಗಿದೆ.

ಮಂಡಳಿ ಅಧ್ಯಕ್ಷ ಸ್ಥಾನ ಆಲಂಕರಿಸುವವರು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹೊರತಾಗಿರಬೇಕು ಎಂಬ ನಿಯಮವಿದೆ. ಇದನ್ನೂ ಮೀರಿಯೂ ಆಂಧ್ರಪ್ರದೇಶದ ರಂಗಾರೆಡ್ಡಿಯವರಿಗೆ ಒಂದು ಬಾರಿ ಅಧ್ಯಕ್ಷ ಭಾಗ್ಯ ಒಲಿದಿದೆ. ಆದರೆ ಕರ್ನಾಟಕದವರಿಗೆ ಒಮ್ಮೆಯೂ ಅಧ್ಯಕ್ಷ ಭಾಗ್ಯ ಒಲಿದಿಲ್ಲ.

ಮಂಡಳಿಯ ಅಧ್ಯಕ್ಷ ಸ್ಥಾನದಷ್ಟೇ ಅತ್ಯುನ್ನತವಾದ ಕಾರ್ಯದರ್ಶಿ ಹುದ್ದೆಗೂ ಅಷ್ಟೇ ಅಧಿಕಾರ ಇದೆ. ಆದರೆ ಕಳೆದ ಎರಡ್ಮೂರು ದಶಕಗಳಿಂದ ಒಂದು ಬಾರಿಯು ಕರ್ನಾಟಕದವರು ಕಾರ್ಯದರ್ಶಿ ಆಗಿಲ್ಲ. ನಾಥನ್ ಎನ್ನುವ ತಮಿಳುನಾಡಿನವರು ಕಾರ್ಯದರ್ಶಿ ಆಗಿರುವುದನ್ನು ಹೊರತು ಪಡಿಸಿದರೆ, ಪ್ರಸ್ತುತ ಟಿ.ಬಿ.ಬೋರ್ಡ್ ಕಾರ್ಯದರ್ಶಿ ಸೇರಿದಂತೆ ಈವರೆಗೂ ಆದ ಬಹುತೇಕ ಎಲ್ಲರೂ ಆಂಧ್ರಪದೇಶ ಮತ್ತು ತೆಲಂಗಾಣದವರೆ ಆಗಿದ್ದಾರೆ.

ಬೋರ್ಡಿಗೆ ಮೂರು ರಾಜ್ಯದವರು ಇರಬಾರದು. ಇಲ್ಲವಾದರೆ ಕರ್ನಾಟಕದವರನ್ನು ಯಾರಾದರೊಬ್ಬರನ್ನು ನೇಮಕ ಮಾಡಬೇಕು. ಈ ಮೂಲಕ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕಿದೆ.

ಆಸಕ್ತಿ ತೋರದ ಇಂಜಿನಿಯರ್ಸ್: ತುಂಗಭದ್ರಾ ಜಲಾಶಯದ ತುಂಗಭದ್ರಾ ಮಂಡಳಿಗೆ ಕೇಂದ್ರ ಜಲ ಆಯೋಗವು ಕಾರ್ಯದರ್ಶಿಯನ್ನು ನೇಮಕ ಮಾಡುತ್ತದೆ. ನೇಮಕ ಮಾಡಲು ಮೊದಲು ಅರ್ಜಿ ಕರೆಯಲಾಗುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣದ ಅಧಿಕಾರಿಗಳೇ ಹೆಚ್ಚು ಅರ್ಜಿ ಹಾಕುತ್ತಿದ್ದು, ಅವರನ್ನೇ ನೇಮಕ ಮಾಡಲಾಗುತ್ತಿದೆ.

ಆದರೆ ಕರ್ನಾಟಕದ ಇಂಜಿನಿಯರ್ಸ್ ಆಸಕ್ತಿ ವಹಿಸುತ್ತಿಲ್ಲ. ಏಕೆಂದರೆ ಬೋರ್ಡಿನ ಕಾರ್ಯದರ್ಶಿಯಷ್ಟೇ ಮುಖ್ಯವಾದ ಹುದ್ದೆ ಸುಪರಿಟೆಂಡೆಂಟ್ ಇಂಜಿನಿಯರ್ ಆಂಧ್ರಪ್ರದೇಶದವರೇ ಕಾಯಂ ಇರುತ್ತಾರೆ. ನಮ್ಮದು ಏನೂ ನಡೆಯುದಿಲ್ಲ ಎನ್ನುವ ಕಾರಣಕ್ಕೆ ಎನ್ನಲಾಗುತ್ತಿದೆ.

ಜಲಾಶಯದ 7 ಕ್ರಸ್ಟ್‌ ಗೇಟ್ ಎತ್ತಲು/ ಇಳಿಸಲು ಆಗುತ್ತಿಲ್ಲ ಎಂಬ ವರದಿಗಳಿಂದ ಭಯದಲ್ಲಿದ್ದ ಜನರಿಗೆ ಟಿ.ಬಿ. ಬೋರ್ಡ್ ಏಕಾಏಕಿ ಜಲಾಶಯದಿಂದ ನೀರು ಬಿಟ್ಟಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ತುಂಗಭದ್ರಾ ಮಂಡಳಿಯು ತುಂಗಭದ್ರಾ ಜಲಾಶಯದಿಂದ ಏಕಾಏಕಿ ಯಾವುದೇ ಮುನ್ಸೂಚನೆ ನೀಡದೇ 14 ಗೇಟುಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಿದೆ. ಜಲಾಶಯದಲ್ಲಿ 43 ಟಿಎಂಸಿಯಷ್ಟು ನೀರು ಸಂಗ್ರಹವಾಗಿದ್ದು, 33 ಸಾವಿರ ಕ್ಯೂಸೆಕ್‌ನಷ್ಟು ಒಳಹರಿವು ಇದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ 3 ಕ್ರಸ್ಟ್‌ಗೇಟ್ ಮತ್ತು ಶನಿವಾರ 14 ಕ್ರಸ್ಟ್ ಗೇಟ್ ಮೂಲಕ ಅಪಾರ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ.

ಕಳೆದ ವರ್ಷ ಡ್ಯಾಂ ಗೇಟ್‌ ನಂಬರ್ 19 ಕೊಚ್ಚಿಕೊಂಡು ಹೋದಾಗ ಜಲಾಶಯದ ಎಲ್ಲ ಗೇಟ್‌ಗಳನ್ನು ಬದಲಿಸಬೇಕಿದೆ ಎಂದು ಜಲಾಶಯದ ಸುರಕ್ಷತಾ ತಜ್ಞರು ವರದಿ ನೀಡಿದ್ದರು. ಈಗ ಡ್ಯಾಂ ನದಿ ಪಾತ್ರದದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಾಗುತ್ತಿದೆ. ಆದರೆ ಕ್ರಸ್ಟ್‌ಗೇಟ್‌ಗಳಲ್ಲಿ ದೋಷವಿರುವ ಕಾರಣ ಜನರು ಆತಂಕಗೊಂಡಿದ್ದಾರೆ.

Previous articleಬಿಜೆಪಿ ನಾಯಕರಿಂದ ಧರ್ಮಸ್ಥಳದಲ್ಲಿ ದೇವರ ದರ್ಶನ, ಡಾ. ವೀರೇಂದ್ರ ಹೆಗ್ಗಡೆ ಭೇಟಿ
Next articleದರ್ಶನ್, ಪವಿತ್ರಾ ಗೌಡಗೆ ಮತ್ತೊಂದು ಸಂಕಷ್ಟ ಫಿಕ್ಸ್!

LEAVE A REPLY

Please enter your comment!
Please enter your name here